ADVERTISEMENT

ಮಡಿಕೇರಿ: ನಾಣಚ್ಚಿಯಲ್ಲಿ ಆದಿವಾಸಿಗಳ ಆಕ್ರೋಶ

ಅಂತರರಾಷ್ಟ್ರೀಯ ಆದಿವಾಸಿ ದಿನದಂದು ನೂರಾರು ಜನರಿಂದ ಪ್ರತಿಭಟನೆ, ಚಿತ್ರನಟ ಚೇತನ್ ಭಾಗಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 6:18 IST
Last Updated 10 ಆಗಸ್ಟ್ 2025, 6:18 IST
ಬಾಳೆಕೊವು ಹಾಡಿ ಪಕ್ಕದ ನಾಣಚ್ಚಿ ಗೇಟ್‌ನ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರಿಂದ ಶಾಸಕ ಎ.ಎಸ್.ಪೊನ್ನಣ್ಣ ಮನವಿ ಪತ್ರ ಸ್ವೀಕರಿಸಿದರು
ಬಾಳೆಕೊವು ಹಾಡಿ ಪಕ್ಕದ ನಾಣಚ್ಚಿ ಗೇಟ್‌ನ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರಿಂದ ಶಾಸಕ ಎ.ಎಸ್.ಪೊನ್ನಣ್ಣ ಮನವಿ ಪತ್ರ ಸ್ವೀಕರಿಸಿದರು   

ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆಯ ನಾಣಚ್ಚಿ ಗೇಟ್‌ ಮುಂಭಾಗ ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನೆ ಸಮಿತಿ, ಬುಡಕಟ್ಟು ಕೃಷಿಕರ ಸಂಘದ ವತಿಯಿಂದ ಅಂತರರಾಷ್ಟ್ರೀಯ ಆದಿವಾಸಿ ದಿನದ ಅಂಗವಾಗಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ನಟ ಚೇತನ್ ಸೇರಿದಂತೆ 400ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

‘ನಾಗರಹೊಳೆ ನಮ್ಮ ಪೂರ್ವಿಕರ ಜಮ್ಮದ ಭೂಮಿ’ ಎಂಬ ಬೃಹತ್ ಫಲಕವನ್ನು ಅಳವಡಿಸಿದ ಪ್ರತಿಭಟನಕಾರರು ದಿನವಿಡೀ ಸ್ಥಳದಲ್ಲಿ ಧರಣಿ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗಿಯಾದ ನಟ ಚೇತನ್, ‘ಆದಿವಾಸಿಗಳ ಬಗ್ಗೆ ಆಳುವ ಶಕ್ತಿಗಳಿಗೆ ಕಾಳಜಿ ಇಲ್ಲ. ಇವರ ಪಾಲಿಗೆ ಸರ್ಕಾರ ಕಿವುಡಾಗಿದೆ, ಕುರುಡಾಗಿದೆ’ ಎಂದು ಹೇಳಿದರು.

ADVERTISEMENT

‘ಅಸಮಾನತೆಯ ವ್ಯವಸ್ಥೆಯೇ ಆದಿವಾಸಿಗಳ ಶತ್ರು’ ಎಂದು ಹೇಳಿದ ಅವರು, ‘ನಿಜವಾದ ನಾಗರಿಕ ಸಮಾಜವೇ ಆದಿವಾಸಿಗಳು’ ಎಂದರು. ಹಿಂದೆ ಎಲ್ಲರೂ ಆದಿವಾಸಿಗಳಾಗಿದ್ದರು ಎಂಬುದನ್ನು ಮರೆಯಬಾರದು ಎಂದೂ ತಿಳಿಸಿದರು.

ಶಿಕ್ಷಣದಿಂದ, ಹಣದಿಂದ, ಸಂಪತ್ತಿನಿಂದ ಮಾತ್ರವಲ್ಲ ಹಕ್ಕುಗಳಿಂದ ದೊಡ್ಡಮಟ್ಟದಲ್ಲಿ ವಂಚಿತರಾದ ಸಮುದಾಯವೆಂದರೆ ಅದು ಆದಿವಾಸಿಗಳು. ಈಗ ಅವರಿಗೆ ತುರ್ತಾಗಿ ಅರಣ್ಯ ಹಕ್ಕುಗಳನ್ನು ನೀಡಬೇಕು, ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿ ಕಾರ್ಯದರ್ಶಿ ಶಿವು ಮಾತನಾಡಿ, ‘ನಾಗರಹೊಳೆ ನಮ್ಮ ಪೂರ್ವಿಕರ ಜಮ್ಮದ ಭೂಮಿ, ಸಾಂಪ್ರದಾಯಿಕ ನೆಲೆಗಳ ತಾಣ ಎಂಬ ಫಲಕ ಅಳವಡಿಸಿದ್ದೇವೆ’ ಎಂದರು.

ಯಾವುದೇ ಹಕ್ಕು ನೀಡದೇ ಆದಿವಾಸಿಗಳನ್ನು ಕಾಡಿನಿಂದ ಹೊರದಬ್ಬಲಾಗುತ್ತಿದೆ. ನಿರಂತರವಾಗಿ ಹಕ್ಕುಗಳನ್ನು ವಜಾಗೊಳಿಸಲಾಗುತ್ತಿದೆ. ಹಕ್ಕುಗಳನ್ನೇ ನಿರ್ನಾಮ ಮಾಡಲಾಗುತ್ತಿದೆ. ಅರಣ್ಯ ಅಧಿಕಾರಿಗಳ ವರ್ತನೆ ಸಂವಿಧಾನ ವಿರೋಧಿಯಾಗಿದೆ ಎಂದು ತಿಳಿಸಿದರು.

ಆದಿವಾಸಿಗಳು ಎಂದರೆ ಸರ್ಕಾರದ ಇಲಾಖೆಯ ಗುಲಾಮರಲ್ಲ, ಈ ನೆಲದ ಮೂಲನಿವಾಸಿಗಳು. ನಮಗೆ ಅರಣ್ಯ ಹಕ್ಕುಗಳನ್ನು ನೀಡದೇ ಹೋದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಮ್ಮ ‍ಪೂರ್ವಿಕರ ನೆಲೆಯಲ್ಲಿ ನಮಗೆ ಜಾಗ ನೀಡದೇ ಸಫಾರಿ ಯೋಜನೆಗಳನ್ನು ಜಾರಿಗೊಳಿಸಿ ಅರಣ್ಯ ಇಲಾಖೆ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ‘ನಮ್ಮ ಪೂರ್ವಿಕರ ನೆಲೆಗಳಲ್ಲಿ ನಮಗೆ ಅರಣ್ಯ ಹಕ್ಕು ಸೇರಿದಂತೆ ಎಲ್ಲ ಬಗೆಯ ಸಾಂವಿಧಾನಿಕ ಹಕ್ಕುಗಳನ್ನು ನೀಡಬೇಕು ಹಾಗೂ ಸಫಾರಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಭಾನುವಾರವೂ ನಡೆಯಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನೆ ಸಮಿತಿಯ ಅಧ್ಯಕ್ಷ ಜೆ.ಕೆ.ತಿಮ್ಮ, ಹೋರಾಟಗಾರರಾದ ರಾಯ್ ಡೇವಿಡ್,  ಕೃಷ್ಣಮೂರ್ತಿ ಇರುಳಿಗ, ಸುಶೀಲಾ, ಮುಖಂಡರಾದ ಮುತ್ತಪ್ಪ, ಜೆ.ಎಸ್.ರಾಮಕೃಷ್ಣ ಸೇರಿದಂತೆ ಹಲವು ಹೋರಾಟಗಾರರು ಪ್ರತಿಭಟನೆಯಲ್ಲಿದ್ದರು.

ಪೊನ್ನಂಪೇಟೆ ತಾಲ್ಲೂಕಿನ ನಾಣಚ್ಚಿ ಗೇಟ್ ಮುಂಭಾಗ ನೂರಾರು ಮಂದಿ ಆದಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿದರು

ಸರ್ಕಾರ ಶೋಷಿತರ ಪರ; ಪೊನ್ನಣ್ಣ

ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಎ.ಎಸ್.ಪೊನ್ನಣ್ಣ ‘ಕಾಂಗ್ರೆಸ್ ಸರ್ಕಾರ ಯಾವಾಗಲೂ ಶೋಷಿತರ ಪರವಾಗಿದೆ’ ಎಂದು ಪ್ರತಿಪಾದಿಸಿದರು. ‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. 17 ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕುಡಿಯುವ ನೀರಿನ ಸರಬರಾಜು ಆಗಿದೆ. ಸಮುದಾಯ ಹಕ್ಕು ಪತ್ರಗಳನ್ನು ನೀಡಲಾಗಿದೆ. ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತ್ತು ಎಂಬುದನ್ನು ಮರೆಯಬಾರದು’ ಎಂದರು. ಯಾವುದೇ ಕಾರಣಕ್ಕೂ ಸಂಘರ್ಷಕ್ಕೆ ಇಳಿಯದೇ ತಾಳ್ಮೆಯಿಂದ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಎಲ್ಲರ ಅಹವಾಲುಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.