ADVERTISEMENT

ಸರಕು ಸಾಗಣೆ ವಾಹನಕ್ಕೆ ನಿರ್ಬಂಧ

ಕೊಡಗು ಜಿಲ್ಲೆಯ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ– 275

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 16:05 IST
Last Updated 11 ಜೂನ್ 2019, 16:05 IST

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಗೊಂಡಿದ್ದು ಹೆಚ್ಚಿನ ಮಳೆಯಾದರೆ ರಸ್ತೆ ಹದಗೆಡುವ ಸಾಧ್ಯತೆಯಿದ್ದು ರಸ್ತೆ ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ–275ರಲ್ಲಿ ಸರಕು ಸಾಗಣೆ ವಾಹನ ಸಂಚಾರ ನಿರ್ಬಂಧಿಸಿ ಜಿಲ್ಲಾಡಳಿತ ಮಂಗಳವಾರ ಆದೇಶಿಸಿದೆ.

ಸಂಪಾಜೆ, ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ ಮಾರ್ಗವಾಗಿ ಮೈಸೂರು ಹಾಗೂ ಹಾಸನಕ್ಕೆ ತೆರಳುವ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಮೈಸೂರಿನಿಂದ ಮಂಗಳೂರು ಕಡೆಗೆ ಭಾರೀ ತೂಕದ ಸರಕು ಸಾಗಣೆ ಮಾಡುವಂತಿಲ್ಲ. ಈ ಆದೇಶವು ಜೂನ್‌ 12ರಿಂದ ಆಗಸ್ಟ್‌ 8ರ ತನಕ ಇರಲಿದೆ.

ಎಲ್ಲ ರೀತಿಯ ಮರದ ದಿಮ್ಮಿ ಹಾಗೂ ಮರಳು ಸಾಗಣೆ ವಾಹನ, 16,200ಕ್ಕಿಂತ ಹೆಚ್ಚಿನ ತೂಕದ ಸರಕು ಸಾಗಣೆ ವಾಹನ, ಭಾರೀ ವಾಹನಗಳಾದ ಬುಲೆಟ್‌ ಟ್ಯಾಂಕರ್ಸ್‌, ಶಿಪ್‌ಕಾರ್ಗೊ ಕಂಟೈನರ್‌, ಲಾಂಗ್‌ ಚಾಸಿಸ್‌ (ಮಲ್ಟಿ ಆ್ಯಕ್ಸೆಲ್‌) ವಾಹಗಳ ಸಂಚಾರಕ್ಕೆ ನಿರ್ಬಂಧ ಇರಲಿದೆ. ಅಡುಗೆ ಅನಿಲ, ಇಂಧನ ಪೂರೈಕೆ, ಹಾಲು ಪೂರೈಕೆ, ಸರ್ಕಾರಿ ಕೆಲಸದ ನಿಮಿತ್ತ ಬಳಸುವ ವಾಹನ, ಶಾಲಾ–ಕಾಲೇಜು ಮತ್ತು ಸಾರ್ವಜನಿಕರ ಪ್ರಯಾಣಿಕರ ವಾಹನಗಳ (ಮಲ್ಟಿ ಆ್ಯಕ್ಸೆಲ್‌ ಬಸ್‌ ಸೇರಿದಂತೆ) ಸಂಚಾರಕ್ಕೆ ವಿನಾಯಿತಿ ಇದೆ.

ADVERTISEMENT

ಕುಶಾಲನಗರ ಹಾಗೂ ಸಂಪಾಜೆಯ ಚೆಕ್‌ಪೋಸ್ಟ್‌ ಮೂಲಕ ಜಿಲ್ಲೆಯ ಒಳಕ್ಕೆ ಸರಕು ಸಾಗಣೆ ವಾಹನಗಳು ಪ್ರವೇಶಿಸದಂತೆ ನೋಡಿಕೊಳ್ಳಬೇಕು. ದಿನದ 24 ಗಂಟೆಯೂ ಗಸ್ತು ಇರಬೇಕೆಂದು ಪೊಲೀಸ್‌ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಮಳೆಗಾಲದಲ್ಲಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿದ್ದು ಮಳೆಗಾಲ ಮುಕ್ತಾಯವಾಗುವ ತನಕ ಮರಳುಗಾರಿಕೆಯನ್ನೂ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.