ADVERTISEMENT

ಮಡಿಕೇರಿ: ಸೀಲ್‌ಡೌನ್‌ ಪ್ರದೇಶದ ನಿವಾಸಿಗಳ ಸಮಸ್ಯೆಗಿಲ್ಲ ಸ್ಪಂದನೆ

ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ಎಂ.ಬಿ.ಗಣೇಶ್‌ ಆರೋಪ: ಆಹಾರ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 5:49 IST
Last Updated 1 ಜುಲೈ 2020, 5:49 IST
ಸೋಮವಾರಪೇಟೆಯ ಶಿರಂಗಾಲ ಗ್ರಾಮದ ನಿವಾಸಿಗಳಿಗೆ ದಿನಸಿ ಕಿಟ್‌ ವಿತರಣೆ ಮಾಡಲಾಯಿತು
ಸೋಮವಾರಪೇಟೆಯ ಶಿರಂಗಾಲ ಗ್ರಾಮದ ನಿವಾಸಿಗಳಿಗೆ ದಿನಸಿ ಕಿಟ್‌ ವಿತರಣೆ ಮಾಡಲಾಯಿತು   

ಮಡಿಕೇರಿ: ಲಾಕ್‍ಡೌನ್ ಸಡಿಲಿಕೆ ನಂತರ ಕೊಡಗು ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಸೀಲ್‍ಡೌನ್ ಪ್ರದೇಶಗಳ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಇಲ್ಲಿನ ನಿವಾಸಿಗಳ ಸಂಕಷ್ಟಕ್ಕೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಬಿ. ಗಣೇಶ್‌ ದೂರಿದರು.

ಸೀಲ್‍ಡೌನ್ ಆಗಿರುವ ಸೋಮವಾರಪೇಟೆಯ ಶಿರಂಗಾಲ ಗ್ರಾಮದ ನಿವಾಸಿಗಳಿಗೆ ಜೆಡಿಎಸ್ ವತಿಯಿಂದ ದಿನಸಿ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸೋಂಕಿತರು ಪತ್ತೆಯಾದ ತಕ್ಷಣ ಅಧಿಕಾರಿಗಳು ಏಕಾಏಕಿ ಇಡೀ ಬಡಾವಣೆಯನ್ನೇ ಸೀಲ್‍ಡೌನ್ ಮಾಡಿ ನಿವಾಸಿಗಳು ಇತರ ಪ್ರದೇಶಗಳ ಸಂಪರ್ಕವನ್ನೇ ಹೊಂದದಂತೆ ಮಾಡುತ್ತಿದ್ದಾರೆ. ಇದರಿಂದ ಪ್ರತಿದಿನ ದುಡಿದು ತಿನ್ನುವ ಕೂಲಿ ಕಾರ್ಮಿಕರು, ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಸೀಲ್‍ಡೌನ್ ಪ್ರದೇಶಗಳಿಗೆ ಉಚಿತ ದಿನಸಿ ಸಾಮಗ್ರಿಗಳನ್ನು ನೀಡುವುದಿಲ್ಲವೆಂದು ಸರ್ಕಾರ ಹಟ ಹಿಡಿದು ಕುಳಿತಿದೆ. ನಿತ್ಯ ಬಳಕೆಯ ವಸ್ತುಗಳನ್ನು ಅಂಗಡಿಯಿಂದ ಖರೀದಿಸಿ ಕೊಂಡು ಬರಲು ಕೂಡ ಅವಕಾಶವೇ ನೀಡುತ್ತಿಲ್ಲ ಎಂದು ಆರೋಪಿಸಿದ ಗಣೇಶ್, ಜನ ಹಸಿವಿನಿಂದ ಸಾಯಬೇಕೇ ಎಂದು ಪ್ರಶ್ನಿಸಿದರು.

ADVERTISEMENT

ಅಭಿವೃದ್ಧಿ ಕಾರ್ಯಗಳಿಗಾಗಿ ಮೀಸಲಿಟ್ಟಿರುವ ಹಣವನ್ನು ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರವನ್ನು ನೀಡಲು ವಿನಿಯೋಗಿಸುವ ಮೂಲಕ ಬಡವರ ಜೀವ ಉಳಿಸಲು ಸರ್ಕಾರ ಮುಂದಾಗಲಿ ಎಂದು ಒತ್ತಾಯಿಸಿದರು.

ಇತರ ಜಿಲ್ಲೆಗಳ ಶಾಸಕರು ತಮ್ಮ ತಮ್ಮ ಆಸ್ತಿಯನ್ನೇ ಅಡವಿಟ್ಟು ಬಡವರ ಸೇವೆಯಲ್ಲಿ ತೊಡಗಿದ್ದಾರೆ. ಆದರೆ, ಕೊಡಗಿನ ಶಾಸಕರುಗಳು ಜನರ ಸಂಕಷ್ಟವನ್ನೇ ಗಂಭೀರವಾಗಿ ಪರಿಗಣಿಸಿಲ್ಲ. ಸೀಲ್‍ಡೌನ್ ಪ್ರದೇಶಗಳ ನಿವಾಸಿಗಳ ಸಮಸ್ಯೆಗಳಿಗೆ ಖುದ್ದು ಸ್ಪಂದಿಸುವ ಬದಲು ಫೋನ್ ಮೂಲಕ ಮಾಹಿತಿ ಪಡೆಯುತ್ತಿರುವ ಶಾಸಕರು ಗಳು ಬಡವರ ಕೂಗನ್ನು ಲಘುವಾಗಿ ಪರಿಗಣಿಸಿದ್ದಾರೆ ಎಂದು ಟೀಕಿಸಿದರು.

ಕಳೆದ 25 ವರ್ಷಗಳಿಂದ ಗೆಲ್ಲಿಸುತ್ತಲೇ ಬಂದಿರುವ ಜಿಲ್ಲೆಯ ಮತದಾರರ ನೋವಿಗೆ ಸ್ಪಂದಿಸುವ ದೊಡ್ಡ ಗುಣವನ್ನು ಇವರು ತೋರಿಲ್ಲ. ತಮ್ಮ ಸ್ವಂತ ಹಣದ ಮೂಲಕ ಸಹಾಯವನ್ನೂ ಮಾಡಿಲ್ಲವೆಂದು ಗಣೇಶ್ ಆರೋಪಿಸಿದರು.

ಜಿಲ್ಲೆಯ ಜನರ ಮೇಲೆ ಶಾಸಕರುಗಳಿಗೆ ನೈಜ ಕಾಳಜಿ ಇದ್ದರೆ 20ಕ್ಕೂ ಹೆಚ್ಚು ಸೀಲ್‍ಡೌನ್ ಪ್ರದೇಶಗಳ ನಿವಾಸಿಗಳಿಗೆ ಸರ್ಕಾರದ ಮೂಲಕವೇ ಉಚಿತವಾಗಿ ಆಹಾರ ಸಾಮಗ್ರಿಗಳನ್ನು ಕೊಡಿಸಲಿ ಎಂದು ಒತ್ತಾಯಿಸಿದರು.

ಮಡಿಕೇರಿಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳು ಮಿತಿ ಮೀರುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ರೋಗಿಗಳನ್ನು ಉಳಿಸುವ ಮತ್ತು ಸೋಂಕು ವ್ಯಾಪಿಸದಂತೆ ತಡೆಯುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.

ಜಿ.ಪಂ ಸದಸ್ಯ ಪುಟ್ಟರಾಜು, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಇಸಾಕ್ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿಲ್ ಭಾಷ, ಜಿಲ್ಲಾ ಕಾರ್ಯದರ್ಶಿ ಎನ್.ಸಿ.ಸುನಿಲ್, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ನಾಗರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ, ಪಾಪಣ್ಣ, ಶನಿವಾರಸಂತೆ ಜಮಾತ್ ಅಧ್ಯಕ್ಷ ಅಮಿರ್ ಸಾಬ್, ಅಬ್ದುಲ್ ರಜಾಕ್, ಶನಿವಾರಸಂತೆ ನಗರಾಧ್ಯಕ್ಷ ಮೊಯಿದು ಹಾಜರಿದ್ದರು.

ಜೆಡಿಎಸ್‌ ವತಿಯಿಂದ 3ರಂದು ಪ್ರತಿಭಟನೆ

ಸೀಲ್‍ಡೌನ್ ನಿವಾಸಿಗಳಿಗೆ ಸರ್ಕಾರದ ವತಿಯಿಂದಲೇ ಉಚಿತ ದಿನಸಿ ಸಾಮಗ್ರಿಗಳನ್ನು ನೀಡಬೇಕೆಂದು ಒತ್ತಾಯಿಸಿ ಮತ್ತು ಜಿಲ್ಲೆಯ ಶಾಸಕರ ನಿರ್ಲಕ್ಷ್ಯವನ್ನು ಖಂಡಿಸಿ ಜುಲೈ 3ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಜೆಡಿಎಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಗಣೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.