ADVERTISEMENT

ಮಡಿಕೇರಿ: ಸೂಪರ್‌ ಸ್ಪೆಷಾಲಿಟಿ ಘಟಕ ತೆರೆಯಿರಿ

ಮುಖ್ಯಮಂತ್ರಿಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ– ಶಾಸಕ ಅಪ್ಪಚ್ಚುರಂಜನ್

ಕೆ.ಎಸ್.ಗಿರೀಶ್
Published 9 ಜನವರಿ 2023, 19:30 IST
Last Updated 9 ಜನವರಿ 2023, 19:30 IST
ಮಡಿಕೇರಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ
ಮಡಿಕೇರಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ   

ಮಡಿಕೇರಿ: ಗುಡ್ಡಗಾಡು ಪ್ರದೇಶವಾದ ಕೊಡಗು ಜಿಲ್ಲೆಯಲ್ಲಿ ಜನರ ಪ್ರಾಣ ಉಳಿಸಲು ಇನ್ನಾದರೂ ಸರ್ಕಾರ ಪಣ ತೊಡಬೇಕಿದೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ತರಲು ಸಾಧ್ಯವಾಗದೇ ಹೋದರೂ ಕನಿಷ್ಠ ಸೂಪರ್ ಸ್ಪೆಷಾಲಿಟಿಯ ಬಿಡಿಬಿಡಿ ಘಟಕಗಳನ್ನಾದರೂ ತರುವ ಕಾರ್ಯ ಮಾಡಬೇಕಿದೆ.

ಕುಟ್ಟ, ಕರಿಕೆ, ಶನಿವಾರಸಂತೆ ಹೀಗೆ ಕೊಡಗಿನ ಗಡಿ ಭಾಗಗಳಲ್ಲಿನ ಜನರಿಗೆ ಒಂದು ವೇಳೆ ಹೃದಯಾಘಾತವಾದರೆ ಅವರು ತಮ್ಮ ಪ್ರಾಣ ಉಳಿಸಲು ಮೈಸೂರಿನವರೆಗೆ ಪ್ರಯಾಣಿಸಬೇಕಿದೆ. ಕೊಡಗಿನ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಗೆ ತಕ್ಷಣಕ್ಕೆ ಪ್ರಾಣ ಉಳಿಸುವಷ್ಟು ಮಾತ್ರವೇ ಶಕ್ತಿ ಇದೆ. ಹೃದಯದ ವಿಶೇಷ ತಪಾಸಣೆಯಾಗಲಿ, ಶಸ್ತ್ರಚಿಕಿತ್ಸೆಯಾಗಲಿ ಇಲ್ಲಿ ಸಾಧ್ಯವಾಗದು. ಕನಿಷ್ಠ ‘ಟಿಎಂಟಿ’ ಪರೀಕ್ಷೆಯೂ ಇಲ್ಲಿ ಲಭ್ಯವಿಲ್ಲ.

ಮಂಡ್ಯ ಹಾಗೂ ಚಾಮರಾಜನಗರದಲ್ಲೂ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಆದರೆ, ಅವರಿಗೆ ಮೈಸೂರು ಕೂಗಳತೆ ದೂರದಲ್ಲಿರುವುದರಿಂದ ಹೆಚ್ಚಿನ ಕಷ್ಟವಾಗುತ್ತಿಲ್ಲ. ಕೊಡಗು ಗುಡ್ಡಗಾಡು ಪ್ರದೇಶದಿಂದ ಜಿಲ್ಲಾ ಕೇಂದ್ರಕ್ಕೆ ಬರುವುದೇ ದುಸ್ತರ. ಕನಿಷ್ಠ ಇಲ್ಲೂ ಸೂಪರ್‌ಸ್ಪೆಷಾಲಿಟಿಯ ಸೌಲಭ್ಯ ದೊರೆಯದೇ ಅವರು ಮೈಸೂರು ಇಲ್ಲವೇ ಮಂಗಳೂರಿಗೆ ಪ್ರಯಾಣಿಸಬೇಕಿದೆ. ಹಲವು ಮಂದಿ ಅಷ್ಟು ದೂರ ಹೋಗಲಾಗದೆ ಸೂಪರ್ ಸ್ಪೆಷಾಲಿಟಿಯ ಚಿಕಿತ್ಸೆ ದೊರೆಯದೇ ಮೃತಪಡುತ್ತಿದ್ದಾರೆ. ಇನ್ನೂ ಕೆಲವರು ಸಾಲಗಳನ್ನು ಮಾಡಿಕೊಂಡು ಹೋಗಿ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ADVERTISEMENT

ಏನಿದು ಸೂಪರ್ ಸ್ಪೆಷಾಲಿಟಿ?: ಕೊಡಗು ಜಿಲ್ಲೆಯಲ್ಲಿರುವ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಯು ಅತ್ಯಂತ ಸುಸಜ್ಜಿತವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಇದು ಕೇವಲ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಷ್ಟೇ. ಸೂಪರ್‌ಸ್ಪೆಷಾಲಿಟಿಗೆ ಬೇಕಾದ ಯಾವುದೇ ಸೌಕರ್ಯ ಇಲ್ಲಿಲ್ಲ.

ಮುಖ್ಯವಾಗಿ ಇಲ್ಲಿ ‘ಎಂಆರ್‌ಐ’ ಸ್ಕ್ಯಾನಿಂಗ್‌ ಇಲ್ಲ. ಹೃದಯ ತಪಾಸಣೆಗೆ ಬೇಕಾದ ‘ಟಿಎಂಟಿ’ ಸೌಲಭ್ಯ ಇಲ್ಲ. ಹೃದಯ, ಮೂತ್ರಪಿಂಡ, ನರರೋಗಗಳಿಗೆ ಸಂಬಂಧಿಸಿದಂತೆ, ಲಿವರ್‌, ಕ್ಯಾನ್ಸರ್ ಮೊದಲಾದ ವಿಭಾಗಗಳ ಅತ್ಯುನ್ನತ ಚಿಕಿತ್ಸೆಯೂ ದೊರೆಯುತ್ತಿಲ್ಲ. ಸಾಮಾನ್ಯ ಚಿಕಿತ್ಸೆ ನೀಡಿ ವೈದ್ಯರು ಮೈಸೂರಿಗೆ ರೆಫರ್‌ ಮಾಡುತ್ತಿದ್ದಾರೆ.

ಮತ್ತೂ ವಿಶೇಷ ಎಂದರೆ, ಈಗ ಇರುವ ಸರ್ಕಾರಿ ಆಸ್ಪತ್ರೆಗೆ ಸರಿ ಸಮಾನ ಖಾಸಗಿ ಆಸ್ಪತ್ರೆಗಳೂ ಇಲ್ಲಿ ಇಲ್ಲ. ಬೇಡಿಕೆಯ ಕೊರತೆಯಿಂದ ಖಾಸಗಿ ಯವರೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಉತ್ಸುಕತೆ ತೋರಿಲ್ಲ.

ಸದ್ಯ ಈಗ ಇರುವ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಕೊಠಡಿಗಳು, ತೀವ್ರ ನಿಗಾ ಘಟಕ, ವಿವಿಧ ವಿಭಾಗಗಳ ಸುಸಜ್ಜಿತ ವಾರ್ಡ್‌ಗಳು, ಸಿಎಸ್‌ಎಸ್‌ಡಿ ಘಟಕ, ಮರಣೋತ್ತರ ಪರೀಕ್ಷೆ ಘಟಕ, ಶಸ್ತ್ರ ಚಿಕಿತ್ಸಾ ವಿಭಾಗ, ಕೀಲು ಮತ್ತು ಮೂಳೆ ವಿಭಾಗ, ವೈದ್ಯಕೀಯ ವಿಭಾಗ, ಮಕ್ಕಳ ವಿಭಾಗ, ಸ್ತ್ರಿ ಮತ್ತು ಪ್ರಸೂತಿ ರೋಗ ವಿಭಾಗ, ಇ.ಎನ್‌.ಟಿ, ನೇತ್ರಾ, ದಂತ ಚಿಕಿತ್ಸೆ ಸೇರಿದಂತೆ ಹಲವು ವಿಭಾಗಗಳಿವೆ.

ಈಗ ಇಲ್ಲಿ 300 ಹಾಸಿಗೆಗಳಿವೆ. ಸದಾ ಕಾಲ ಶೇ 80ರಷ್ಟು ಹಾಸಿಗೆಗಳು ತುಂಬಿರುತ್ತವೆ. ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ 80 ಹಾಸಿಗೆಯಷ್ಟೇ ಇದೆ. ಇತ್ತೀಚಿನ ದಿನಗಳಲ್ಲಿ ಪಿರಿಯಾಪಟ್ಟಣ ಭಾಗದಿಂದಲೂ ಇಲ್ಲಿಗೆ ಹೆಚ್ಚಿನ ಮಂದಿ ಬರುವುದರಿಂದ ಹಾಸಿಗೆ ಕೊರತೆ ಕಾಡುತ್ತಿದೆ. ಈಗ ನಡೆಯುತ್ತಿರುವ 450 ಹಾಸಿಗೆ ಸಾಮರ್ಥ್ಯದ ಕಟ್ಟಡದ ಕಾಮಗಾರಿ ಬಹುಬೇಗ ಪೂರ್ಣಗೊಂಡು ಉದ್ಘಾಟನೆಯಾದರೆ, ಹೆಚ್ಚಿನ ಪ್ರಯೋಜನವಾಗಲಿದೆ.

ಘಟಕವನ್ನಾದರೂ ತೆರೆಯಿರಿ: ಸರ್ಕಾರದ ಕೈಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಸಾಧ್ಯವಾಗದೇ ಹೋದರೆ ಕನಿಷ್ಠ ಪಕ್ಷ ಒಂದೊಂದು ಬಿಡಿ ಘಟಕಗಳನ್ನಾದರೂ ತೆರೆಯಿರಿ ಎಂಬ ಒತ್ತಾಯವೂ ಕೇಳಿ ಬಂದಿದೆ.

ಹೃದಯಕ್ಕೆ ಸಂಬಂಧಿಸಿಂತೆ ಜಯದೇವ ಹೃದ್ರೋಗ ಆಸ್ಪತ್ರೆಯ ಒಂದು ಅತಿ ಸಣ್ಣ ಘಟಕ, ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಸೂಕ್ಷ್ಮ ಘಟಕ, ಮೂತ್ರಪಿಂಡ, ನರರೋಗಗಳಿಗೆ ಕನಿಷ್ಠ ಒಬ್ಬ ತಜ್ಞ ವೈದ್ಯರನ್ನು ನಿಯೋಜಿಸಿದರೆ ಇಲ್ಲಿನ ರೋಗಿಗಳ ಜೀವ ಉಳಿಯುತ್ತದೆ.

2022–23ನೇ ಸಾಲಿನ ಬಜೆಟ್‌ನಲ್ಲಿ ಕೆಲವು ವೈದ್ಯಕೀಯ ಕಾಲೇಜಿನ ಬೋಧಕ ಆಸ್ಪತ್ರೆಯಲ್ಲಿ 10 ಹಾಸಿಗೆ ಸಾಮರ್ಥ್ಯದ ಕಿಮೊಥೆರಪಿ ಘಟಕವನ್ನು ತೆರೆಯಲು ಸರ್ಕಾರ ಘೋಷಿಸಿತ್ತು. ಇಲ್ಲೂ ಈ ಬಗೆಯ ಘಟಕ ತೆರೆದರೆ ಕ್ಯಾನ್ಸರ್‌ಪೀಡಿತರಿಗೆ ಒಂದಿಷ್ಟು ಅನುಕೂಲವಾದರೂ ಆಗುತ್ತದೆ.

ಮುಂದೆ ಯಾವಾಗಲಾದರೂ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಸ್ಥಾಪನೆಗೆ ಸರ್ಕಾರ ನಿರ್ಧಾರ ಕೈಗೊಳ್ಳಬಹುದು. ಆಗ ಜಾಗ ಗುರುತಿಸಲು ಜಿಲ್ಲಾಡಳಿತ ಮತ್ತೆ ಸಮಯ ತೆಗೆದುಕೊಳ್ಳುವ ಬದಲು ಈಗಲೇ ಜಾಗವನ್ನು ಗುರುತಿಸುವ ಕೆಲಸಕ್ಕೆ ಮುಂದಾಗಬೇಕು.

ಆಯುಷ್ಮಾನ್ ಭಾರತ್‌ನಡಿ 350 ಚಿಕಿತ್ಸೆ ಇಲ್ಲ
ಕೊಡಗು ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಆಯುಷ್ಮನ್ ಭಾರತ್ ಯೋಜನೆಯಡಿ ನೀಡಲಾಗುವ 1,650 ಚಿಕಿತ್ಸೆಗಳ ಪೈಕಿ ಕೇವಲ 1,300 ಚಿಕಿತ್ಸೆಗಳಷ್ಟೇ ಲಭ್ಯವಿದೆ. ಇನ್ನುಳಿದ 350 ಚಿಕಿತ್ಸೆಗಳು ಇಲ್ಲಿ ಇಲ್ಲವೇ ಇಲ್ಲ. ಅದಕ್ಕಾಗಿ ವೈದ್ಯರು ಮಂಗಳೂರು, ಮೈಸೂರಿಗೆ ಕಳುಹಿಸುತ್ತಾರೆ. ಆದರೆ, ಈ 350 ಚಿಕಿತ್ಸೆಗಳೇ ರೋಗಿಗಳ ಜೀವ ಉಳಿಸಲು ಅತ್ಯಂತ ಅಗತ್ಯವಾಗಿ ಬೇಕಾದ ಚಿಕಿತ್ಸೆಗಳಾಗಿವೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರಿನಲ್ಲಿ ಖಾಸಗಿ ವಲಯದಲ್ಲಿ ಸೂಪರ್‌ಸ್ಪೆಷಾಲಿಟಿಯ ಚಿಕಿತ್ಸೆ ದೊರೆಯುತ್ತಿದೆ. ಮೈಸೂರಿನಲ್ಲಿ ಸರ್ಕಾರಿ ವಲಯದಲ್ಲೇ ಇದೆ. ಆದರೆ, ಕೊಡಗಿನಲ್ಲಿ ಖಾಸಗಿ ವಲಯದವರೂ ಸೂಪರ್ ಸ್ಪೆಷಾಲಿಟ ಆಸ್ಪತ್ರೆ ಸ್ಥಾಪಿಸಲು ಆಸಕ್ತಿ ತೋರಿಲ್ಲ.

ಖಾಸಗಿಯವರ ಜೊತೆಗಾದರೂ ತೆರೆಯಿರಿ
ಕೊಡಗಿನಲ್ಲಿ ಸೂಪ‍ರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಸರ್ಕಾರ ಅಶಕ್ತವಾದರೆ ಕನಿಷ್ಠ ಖಾಸಗಿ ಸಹಭಾಗಿತ್ವದಲ್ಲಾದರೂ ತೆರೆಯಿರಿ ಎಂಬ ಒತ್ತಾಯವೂ ಕೇಳಿಬಂದಿದೆ.

ಈಗ ಇರುವ ಸಿ.ಟಿ ಸ್ಕ್ಯಾನಿಂಗ್ ವಿಭಾಗವು ಇದೇ ಮಾದರಿಯಲ್ಲಿ ನಡೆಯುತ್ತಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನೂ ಇದೇ ಮಾದರಿಯಲ್ಲಿ ತೆರೆದರೆ ಜನರಿಗೆ ಒಂದಿಷ್ಟು ಅನುಕೂಲವಾಗಲಿದೆ.

ಬೃಹತ್ ಹೋರಾಟಕ್ಕೆ ಕರೆ
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಹೆಚ್ಚಿನ ಪ್ರಯೋಜನವಾಗದು. ನಮಗೆ ಮುಖ್ಯವಾಗಿ ಬೇಕಿರುವುದು ಟ್ರಾಮಾ ಕೇರ್, ಹೃದ್ರೋಗ, ಕ್ಯಾನ್ಸರ್, ಶ್ವಾಸಕೋಶಕ್ಕೆ ಸಂಬಂಧಿಸಿದ ಸೂಪರ್ ಸ್ಪೆಷಾಲಿಟಿ ಘಟಕವನ್ನು ತೆರೆಯಬೇಕು. ಒಂದು ತಿಂಗಳ ಒಳಗೆ ಕೊಡಗಿನ ಎಲ್ಲ ಜಾತಿ, ಜನಾಂಗ, ಸಂಘಟನೆಗಳ ಮುಖಂಡರನ್ನು ಒಟ್ಟುಗೂಡಿಸಿ ದೊಡ್ಡ ಹೋರಾಟ ರೂಪಿಸಲಾಗುವುದು. ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಗುವುದು.
–ಅಚ್ಚಾಂಡೀರ ಪವನ್ ಪೆಮ್ಮಯ್ಯ, ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ

***

ಮಾರ್ಗಮಧ್ಯೆ ಬಹಳ ಮಂದಿ ಸಾವು
ಮೈಸೂರು, ಮಂಗಳೂರಿಗೆ ಚಿಕಿತ್ಸೆಗೆ ಹೋಗುವಾಗ ಅರ್ಧದಾರಿಯಲ್ಲೇ ಬಹಳಷ್ಟು ಜನರು ಕೊನೆಯುಸಿ ರೆಳಿದಿದ್ದಾರೆ. ಕೊಡಗಿನಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯ ತುಂಬಾ ಇದೆ. ಇಂತಹ ಆಸ್ಪತ್ರೆ ಆರಂಭಿಸುವುದು ತಡವಾದರೂ ಸದ್ಯ ತುರ್ತಾಗಿ ಸೂಪರ್‌ಸ್ಪೆಷಾಲಿಟಿ ಘಟಕಗಳನ್ನಾದರೂ ತೆರೆಯಬೇಕು.
ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಅಖಿಲ ಕೊಡವ ಸಮಾಜ ಯೂತ್ ವಿಂಗ್‌ ಅಧ್ಯಕ್ಷ

***

ಬೇಕೇ ಬೇಕು
ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಕೊಡಗಿಗೆ ಬೇಕು. ಈ ಆಸ್ಪತ್ರೆ ಇಲ್ಲದೇ ಅನೇಕ ಮಂದಿಯ ಜೀವ ಹೋಗಿದೆ. ಅಪಘಾತವಾಗಿ ಗಾಯಗೊಂಡವರು ಹುಣಸೂರು ದಾಟುವವರೆಗೆ ಪ್ರಾಣ ಕಳೆದುಕೊಂಡಿದ್ದಾರೆ. ಜೀವ ಉಳಿಸಲು ಇಂತಹ ಆಸ್ಪತ್ರೆಗಾಗಿ ಕೆಲವೆ ದಿನಗಳಲ್ಲಿ ಬೃಹತ್ ಮಟ್ಟದ ಧರಣಿ ನಡೆಸಲಾಗುವುದು
–ಕೊಟ್ರಂಡ ಶ್ರೀಕಾಂತ್ ಪೂವಣ್ಣ, ಸಾಮಾಜಿಕ ಕಾರ್ಯಕರ್ತ

***

ಹೋರಾಟ, ಮನವಿಗೆ ಸ್ಪಂದನೆ ಇಲ್ಲ
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಸಂಸದ ಪ್ರತಾಪಸಿಂಹ ಅವರಲ್ಲಿ ಮನವಿ ಮಾಡಿದ್ದೆವು. ಹೋರಾಟವನ್ನೂ ನಡೆಸಿದ್ದೆವು. ಆದರೆ, ಇದುವರೆಗೂ ಸ್ಥಾಪನೆಯಾಗಿಲ್ಲ. ಇನ್ನಾದರೂ ಸರ್ಕಾರ ಇಲ್ಲಿನ ಜನರ ಜೀವ ಉಳಿಸುವ ಕೆಲಸ ಮಾಡಬೇಕಿದೆ
–ಬೋಪಣ್ಣ ಬೊಳ್ಳಿಯಂಗಡ, ಸಾಮಾಜಿಕ ಕಾರ್ಯಕರ್ತ, ಗೋಣಿಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.