ADVERTISEMENT

ಉತ್ತಮ ಕವಿತೆ ರಚನೆಗೆ ಅಧ್ಯಯನ ಮುಖ್ಯ: ಮಿಲನಾ ಕೆ.ಭರತ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:56 IST
Last Updated 17 ಡಿಸೆಂಬರ್ 2025, 6:56 IST
ಸೋಮವಾರಪೇಟೆ ತಾಲ್ಲೂಕಿನ ಯಡವಾರೆ ಯಡವನಾಡು ಶಿವ ಬಸವೇಶ್ವರ ದೇವಸ್ಥಾನ ಸಮಿತಿಯ ಸಂಯುಕ್ತಾಶ್ರಯದಲ್ಲಿ ಯಡವನಾಡು ಶಿವ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕವನ ವಾಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕವಿಗಳು
ಸೋಮವಾರಪೇಟೆ ತಾಲ್ಲೂಕಿನ ಯಡವಾರೆ ಯಡವನಾಡು ಶಿವ ಬಸವೇಶ್ವರ ದೇವಸ್ಥಾನ ಸಮಿತಿಯ ಸಂಯುಕ್ತಾಶ್ರಯದಲ್ಲಿ ಯಡವನಾಡು ಶಿವ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕವನ ವಾಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕವಿಗಳು   

ಸೋಮವಾರಪೇಟೆ: ‘ನಿರಂತರ ಅಧ್ಯಯನದಿಂದ ಉತ್ತಮ ಕವಿತೆ ರಚನೆ ಮತ್ತು ಸಾಹಿತ್ಯ ಬರವಣಿಗೆ ಪಕ್ವಗೊಳ್ಳುತ್ತದೆ’ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಕೆ.ಭರತ್ ಹೇಳಿದರು.

ಕಣಿವೆ ಕಟ್ಟೆ ಕೊಡಗು ಬಳಗದಿಂದ ತಾಲ್ಲೂಕಿನ ಯಡವನಾಡು ಶಿವಬಸವೇಶ್ವರ ದೇವಸ್ಥಾನ ಸಮಿತಿಯ ಸಂಯುಕ್ತಾಶ್ರಯದಲ್ಲಿ ಯಡವನಾಡು ಶಿವ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಈಚೆಗೆ ನಡೆದ ಆಹ್ವಾನಿತ ಕವಿಗಳಿಂದ ಕವನ ವಾಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಾವು ಬರೆದಷ್ಟು, ಕಲಿತಷ್ಟು ನಾವು ಬಾಗಬೇಕು. ಈ ನೆಲದ ಕಂಪು, ಸತ್ವ, ಕಥೆ, ಕವನಗಳು ನಮ್ಮ ಬರವಣಿಗೆಯಲ್ಲಿ ಮೂಡುವುದು ಸಾಧ್ಯವಾಗಬೇಕು’ ಎಂದರು.

ADVERTISEMENT

ಕುಶಾಲನಗರ ಅನುಗ್ರಹ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ಮಾತನಾಡಿ, ಬದುಕಿನ ಮಹತ್ವ ಮತ್ತು ಜಗತ್ತಿನಾದ್ಯಂತ ಜ್ಞಾನ ಮತ್ತು ವಾಸ್ತವ ಸಂಗತಿಯ ಅರಿವನ್ನು ಎಲ್ಲರಿಗೂ ಮುಟ್ಟಿಸುವುದು ಕಾವ್ಯವಾಗಿದೆ. ಸಾಹಿತ್ಯದ ಅಸ್ತಿತ್ವ ಹಾಗೂ ಮೂಲ ಗುಣ ಕಾವ್ಯದಲ್ಲಿ ಅಡಗಿದೆ ಎಂದು ತಿಳಿಸಿದರು.

‘ಕವನ ರಚನೆ ಹಾಗೂ ಅದನ್ನು ಪ್ರಸ್ತುತ ಪಡಿಸುವುದು ಒಂದು ಕಲೆ. ಕವಿತೆ ಹುಟ್ಟಬೇಕೇ ಹೊರತು ಕಟ್ಟಬಾರದೆಂಬ ಪ್ರಜ್ಞೆ ಕವಿಗೆ ಇರಬೇಕು. ಕವಿತೆಗಳು ಶಬ್ದಗಳ ಗದ್ದಲ ಆಗಬಾರದು. ಅವುಗಳು ಬದುಕಿನ ಅರ್ಥ ಕೊಡುವ ಹಾಗೂ ಮೌನ ಆವರಿಸುವ ಭಾವನೆಗಳಿಂದ ಕೂಡಿರಬೇಕು. ಉಕ್ಕಿ ಹರಿಯುವ ಪ್ರಭಾವಶಾಲಿ ಭಾವನೆಗಳೇ ಕವಿತೆಗಳಾಗಿ ಹೊರ ಹೊಮ್ಮತ್ತವೆ. ಕವಿಯಾದವನು ಪದ ಬಳಕೆಯಲ್ಲಿ ನಿಪುಣನೂ ಜಿಪುಣನೂ ಆಗಿರಬೇಕು. ಕಡಿಮೆ ಪದಗಳಲ್ಲಿ ಆಳವಾದ ಅರ್ಥ ಧ್ವನಿಸುವಂತಿರಬೇಕು. ಕವಿಗಳ ಕವಿತೆಗೆ ಓದುಗ ಮತ್ತು ಕೇಳುಗರನ್ನು ಇಂತಹ ಕವಿಗೋಷ್ಠಿಗಳು ಸೃಷ್ಟಿಸಿ, ಕವಿಗಳಿಗೆ ಸ್ಫೂರ್ತಿ ತುಂಬಿ ಪ್ರೋತ್ಸಾಹಿಸುತ್ತದೆ’ ಎಂದು ಹೇಳಿದರು.

ಸಾಹಿತಿ ಭಾರದ್ವಾಜ ಕೆ.ಆನಂದತೀರ್ಥ ಮಾತನಾಡಿ, ಕವಿಗಳು ಉತ್ತಮ ಕವನ ರಚನೆ ಮಾಡುವುದರ ಜೊತೆಗೆ ಕವನ ವಾಚನ ಮಾಡುವ ಗುಣವನ್ನು ರೂಢಿಸಿಕೊಳ್ಳಬೇಕು ಎಂದರು.

ಕವಿಗೋಷ್ಠಿಯಲ್ಲಿ ಒಟ್ಟು 28 ಮಂದಿ ವಾಚಿಸಿದ ಕವನ ವಾಚಿಸಿದರು.

ಗೋಷ್ಠಿ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ.ಗಣೇಶ್ ವಹಿಸಿದ್ದರು. ಬಳಗದ ಸಂಚಾಲಕ ಟಿ.ಜಿ.ಪ್ರೇಮಕುಮಾರ್, ಯುವ ಕವಿ ಹೇಮಂತ್ ಪಾರೇರ. ಸಂಚಾಲಕ ಎಂ.ಎನ್.ವೆಂಕಟನಾಯಕ್, ಕಣಿವೆ ಕಟ್ಟೆ ಬಳಗದ ಪ್ರಧಾನ ಸಂಚಾಲಕ ಕೆ.ವಿ.ಉಮೇಶ್ ಹೆಬ್ಬಾಲೆ, ಕವಿ ಛಾಯ ವಿಜಯ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.