ADVERTISEMENT

ಮೇ 8, 9ಕ್ಕೆ ಮುಲ್ಲೈರೀರ ಕ್ರಿಕೆಟ್

ಕೆದಮುಳ್ಳೂರು ಮುಲ್ಲೈರೀರ ಐನ್‌ಮನೆಯಲ್ಲಿ ಲಾಂಛನ ಅನಾವರಣ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 16:49 IST
Last Updated 2 ಮಾರ್ಚ್ 2021, 16:49 IST
ಕೊಡಗು ಐರಿ ಜನಾಂಗದ ನಡುವೆ ನಡೆಯುವ 8ನೇ ವರ್ಷದ ಕ್ರಿಕೆಟ್ ಪಂದ್ಯಾವಳಯ ಲಾಂಛನವನ್ನು ಗಣ್ಯರು ಬಿಡುಗಡೆ ಮಾಡಿದರು
ಕೊಡಗು ಐರಿ ಜನಾಂಗದ ನಡುವೆ ನಡೆಯುವ 8ನೇ ವರ್ಷದ ಕ್ರಿಕೆಟ್ ಪಂದ್ಯಾವಳಯ ಲಾಂಛನವನ್ನು ಗಣ್ಯರು ಬಿಡುಗಡೆ ಮಾಡಿದರು   

ಮಡಿಕೇರಿ: ಕೊಡಗು ಐರಿ ಜನಾಂಗದ ನಡುವೆ ನಡೆಯುವ 8ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಈ ಬಾರಿ ಕೆದಮುಳ್ಳೂರು ಗ್ರಾಮದ ಮುಲ್ಲೈರೀರ ಕುಟುಂಬಸ್ಥರು ಆತಿಥ್ಯವಹಿಸಿದ್ದು, ಕ್ರೀಡಾಕೂಟದ ಲಾಂಛನ ಬಿಡುಗಡೆ ಸಮಾರಂಭ ಕುಟುಂಬದ ಕೆದಮುಳ್ಳೂರು ಐನ್‌ಮನೆಯಲ್ಲಿ ನೆರವೇರಿತು.

ಕೊಡಗು ಐರಿ ಸಮಾಜದ ಅಧ್ಯಕ್ಷ ಮೇಲತಂಡ ರಮೇಶ್, ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಮುಲ್ಲೈರಿರ ಕಪ್ ಕ್ರಿಕೆಟ್ ಸಮಿತಿಯ ಗೌರವಾಧ್ಯಕ್ಷೆ ಚೋಂದಮ್ಮ, ಅಧ್ಯಕ್ಷ ಗೋಪಾಲ, ಅಂತರರಾಷ್ಟ್ರೀಯ ಚಿತ್ರ ಕಲಾವಿದ ಐಮಂಡ ರೂಪೇಶ್ ನಾಣಯ್ಯ ಮತ್ತು ಉಪನ್ಯಾಸಕ ಡಾ ಧಿಲನ್ ಮುತ್ತಣ್ಣ ಲಾಂಛನ ಬಿಡುಗಡೆ ಮಾಡಿದರು.

ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಮುಲ್ಲೈರೀರ ಕಪ್ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಗೋಪಾಲ ಅವರು, ‘ಮಳೆ ಅನಾಹುತ ಮತ್ತು ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಈ ಪಂದ್ಯಾವಳಿ ನಡೆದಿರಲಿಲ್ಲ. ಆದರೆ, ಇದೀಗ ಕೊನೆಗೂ ಪಂದ್ಯಾವಳಿ ನಡೆಸಲು ಕಾಲಾವಕಾಶ ಕೂಡಿ ಬಂದಿದ್ದು, ಏನೇ ಕಷ್ಟನಷ್ಟಗಳಾದರೂ ಕ್ರೀಡಾಕೂಟ ಕೈಬಿಡುವುದಿಲ್ಲ’ ಎಂದರು.

ADVERTISEMENT

ಐರಿ ಸಮಾಜದ ಆದ್ಯಕ್ಷ ಮೇಲತಂಡ ರಮೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಮೂಲ ನಿವಾಸಿಗಳಾದ ಐರಿ ಜನಾಂಗ ಆರ್ಥಿಕವಾಗಿ, ಸಾಮಾಜಿವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದು, ಜನಾಂಗದ ಅಭಿವೃದ್ಧಿಗೆ ಎಲ್ಲರೂ ಸಾಕಷ್ಟು ಶ್ರಮಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕ ಡಾ.ಧಿಲನ್, ಕೊಡಗಿನ ಸಂಸ್ಕೃತಿಯಲ್ಲಿ ಐರಿ ಜನಾಂಗದ ಪಾತ್ರ ಬಹಳ ಮುಖ್ಯವಾಗಿದ್ದು, ಆಭರಣಗಳು, ಆಯುಧಗಳು ಮತ್ತು ಐನ್‌ಮನೆಗಳು ಐರಿ ಜನಾಂಗದ ಕೊಡುಗೆಯಾಗಿದೆ ಎಂದರು.

ಐರಿ ಸಮಾಜದ ಉಪಾಧ್ಯಕ್ಷೆ ಬಬ್ಬಿರ ಸರಸ್ವತಿ ಮಾತನಾಡಿ, ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿದು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು. ಕಲಾವಿದ ಐಮಂಡ ರೂಪೇಶ್ ನಾಣಯ್ಯ, ಕ್ರೀಡಾಕೂಟದ ಯಶಸ್ಸಿಗೆ ಹಲವು ಸಲಹೆ ಸೂಚನೆಗಳನ್ನ ನೀಡಿದರು.

ಲಾಂಛನ ಬಿಡುಗಡೆಗೂ ಮುನ್ನ ಐನ್‌ಮನೆಯ ನಡುಬಾಡೆಯಲ್ಲಿ ಕುಲದೇವರು ಮತ್ತು ನಾಡಿನ ದೇವಾನುದೇವತೆಗಳನ್ನ ಪೂಜಿಸಿ ಕ್ರೀಡಾಕೂಟವನ್ನು ಯಶಸ್ಸುಗೊಳಿಸಿಕೊಡುವಂತೆ ಬೇಡಲಾಯಿತು.

ಮುಲ್ಲೈರಿರ ಕಪ್ ಕ್ರಿಕೆಟ್ ಹಬ್ಬ ಇದೇ ಮೇ 8 ಮತ್ತು 9ರಂದು ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಸುಮಾರು 20 ತಂಡಗಳು ಆಗಮಿಸುವ ನಿರೀಕ್ಷೆ ಇದ್ದು, ಕ್ರೀಡಾಕೂಟದ ವೇಳೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದೆ ಎಂದು ಕ್ರೀಡಾಕೂಟದ ಸಂಚಾಲಕ ಮುಲ್ಲೈರೀರ ಮೋಹನ್ ಗಣಪತಿ ತಿಳಿಸಿದರು.

ಶಿಕ್ಷಕಿ ಮುಲ್ಲೈರೀರ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.