ADVERTISEMENT

ನಾಪೋಕ್ಲು: ನಾಲ್ಕುನಾಡಿನ ಶಿಖರಗಳಲ್ಲಿ ಬೇಸಿಗೆಯ ಚಾರಣ

ಬೇಸಿಗೆಯ ಮಳೆಗೆ ಹಸಿರ ಹೊದ್ದಿವೆ ಗಿರಿಶಿಖರಗಳು; ಸೌಂದರ್ಯೋಪಾಸನೆಗೆ ಹತ್ತು ಹಲವು ತಾಣ

ಸಿ.ಎಸ್.ಸುರೇಶ್
Published 8 ಮೇ 2025, 4:54 IST
Last Updated 8 ಮೇ 2025, 4:54 IST
ತಡಿಯಂಡಮೋಳ್ ಶಿಖರದ ಹಾದಿಯಲ್ಲಿ ಚಾರಣ
ತಡಿಯಂಡಮೋಳ್ ಶಿಖರದ ಹಾದಿಯಲ್ಲಿ ಚಾರಣ   

ನಾಪೋಕ್ಲು: ‘ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ...’ ಕೊಡಗನ್ನು ಹಾಡಿ ಹೊಗಳಿದ ಕವಿ ಪಂಜೆ ಮಂಗೇಶರಾಯರ ಈ ಕವಿತೆ ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು ಧ್ವನಿಸುತ್ತದೆ.

ಗಿರಿಕಂದರಗಳ ಈ ಜಿಲ್ಲೆಯಲ್ಲಿ ಚಾರಣಕ್ಕೆ, ಸೌಂದರ್ಯೋಪಾಸನೆಗೆ ಹತ್ತು ಹಲವು ತಾಣಗಳಿವೆ. ಸೂಕ್ತ ತಯಾರಿಯೊಂದಿಗೆ, ಮಾರ್ಗದರ್ಶಕರ ನೆರವಿನೊಂದಿಗೆ ಈ ತಾಣಗಳಿಗೆ ಭೇಟಿ ನೀಡಿ ಚೆಲುವನ್ನು ಆಸ್ವಾದಿಸಬಹುದು. ಈಗ ಮಳೆಗಾಲದಲ್ಲಿರುವಂತಹ ಜಿಗಣೆಗಳ ಉಪಟಳ, ಜಾರುವ ಅಪಾಯ, ಕುಸಿತದ ಭೀತಿ ಈಗ ಇಲ್ಲ. ಹಾಗಾಗಿ, ಬೇಸಿಗೆ ಚಾರಣ ಸೂಕ್ತ.

ನಾಲ್ಕುನಾಡು ವ್ಯಾಪ್ತಿಯಲ್ಲಿ ಚಾರಣಕ್ಕೆ ಪ್ರಸಿದ್ಧವಾದ ಹಲವು ಶಿಖರಗಳಿದ್ದು, ಇದೀಗ ಬೇಸಿಗೆಯಲ್ಲಿ ಸುರಿದ ಮಳೆಯಿಂದ ಬೆಟ್ಟಶ್ರೇಣಿಗಳು ಹಸಿರು ಹೊದ್ದು ಚಾರಣಿಗರನ್ನು ಕೈಬೀಸಿ ಕರೆಯುತ್ತಿವೆ. ಇನ್ನೇನು ಕೆಲವೇ ದಿನಗಳು ಕಳೆದು ಮುಂಗಾರು ಕಾಲಿರಿಸಿದರೆ ನಾಲ್ಕುನಾಡಿನ ಶಿಖರಗಳು ಮೌನಕ್ಕೆ ಜಾರುತ್ತವೆ.

ADVERTISEMENT

ಕೊಡಗಿನ ಅತ್ಯಂತ ಎತ್ತರವಾದ ತಡಿಯಂಡಮೋಳ್ ಶಿಖರ ನಿಸರ್ಗ ಸೌಂದರ್ಯಕ್ಕೆ, ಚಾರಣದ ಸವಾಲುಗಳಿಗೆ ಪ್ರಸಿದ್ಧವಾದುದು. ರಾಜ್ಯದ ಹಲವು ಭಾಗಗಳಿಂದ, ಹೊರರಾಜ್ಯದ, ವಿದೇಶಗಳಿಂದ ಅಧಿಕ ಸಂಖ್ಯೆಯ ಚಾರಣಾಸಕ್ತರು ಇಲ್ಲಿಗೆ ಬರುತ್ತಾರೆ. ವರ್ಷಾಂತ್ಯದ ದಿನಗಳಲ್ಲಿ ಅಪಾರ ಸೌಂದರ್ಯದಿಂದ ಕಂಗೊಳಿಸುವ ಪ್ರವಾಸಿಗರ ಮನಸೆಳೆಯುವ ಈ ಪರ್ವತದ ಹಾದಿಯಲ್ಲಿ ಬೇಸಿಗೆಯಲ್ಲಿ ಅಧಿಕ ಸಂಖ್ಯೆಯ ಚಾರಣಿಗರು ಕಂಡುಬರುತ್ತಾರೆ. ಹಗಲು ಹೊತ್ತಿನಲ್ಲಿ ಶಿಖರವನ್ನೇರಿ ಇಳಿಯುವ ಆಸಕ್ತರು ಹಲವರು. ಇಲ್ಲಿನ ಸೂರ್ಯೋದಯ, ಸೂರ್ಯಾಸ್ತದ ದೃಶ್ಯಗಳು ಆಪ್ಯಾಯಮಾನ.

ತಡಿಯಂಡಮೋಳ್ ಶಿಖರವು ಮಡಿಕೇರಿಯಿಂದ 48 ಕಿ.ಮೀ. ದೂರದಲ್ಲಿದೆ. ಶಿಖರದ ಎತ್ತರ 1,717 ಮೀಟರ್. ಶಿಖರದ ಮೇಲ್ಮಟ್ಟವನ್ನು ಸುಮಾರು 10 ಕಿ.ಮೀ. ಸಾಗಿದರೆ ತಲುಪಬಹುದು. ಮಡಿಕೇರಿಯಿಂದ ನಾಪೋಕ್ಲು ಮೂಲಕ ಕಕ್ಕಬ್ಬೆ ಎಂಬ ಊರು ತಲುಪಿ ಅಲ್ಲಿಂದ ಯವಕಪಾಡಿ ಗ್ರಾಮದ ಹಾದಿ ಹಿಡಿಯಬೇಕು. ಕಕ್ಕಬ್ಬೆಯಿಂದ ಬಾಡಿಗೆ ಜೀಪ್ ಮೂಲಕ ಸುಮಾರು ಆರೇಳು ಕಿ.ಮೀ. ಕ್ರಮಿಸಿ ಉಳಿದ ಭಾಗವನ್ನು ನಡೆದು ತಲುಪಬಹುದು.

ತಡಿಯಂಡಮೋಳ್ ಶಿಖರದ ಹಾದಿ ಹಾವಿನೋಪಾದಿಯದು. ಚಾರಣದ ಹಾದಿಯುದ್ದಕ್ಕೂ ನಿಸರ್ಗ ರಮಣೀಯ ದೃಶ್ಯಗಳು ಮನ ಸೆಳೆಯುತ್ತವೆ. ತಂಪಾದ ಕೊಡಗಿನಲ್ಲಿ ಬೋಳು ಬೆಟ್ಟಗಳ ಏರುಹಾದಿಯಲ್ಲಿ ಸಾಗಿ ಶಿಖರವನ್ನೇರಿ ನಿಂತು ನೋಡಿದಾಗ ಅದ್ಭುತ ಪ್ರಕೃತಿ ಸೌಂದರ್ಯ ಚಾರಣಿಗರ ಆಯಾಸವನ್ನು ಮರೆಸುತ್ತದೆ. ದೂರದ ಸಮುದ್ರತೀರ, ಸುತ್ತಲಿನ ಮನಮೋಹಕ ನಿಸರ್ಗ ಸೌಂದರ್ಯ, ದೃಷ್ಟಿಗೆ ನಿಲುಕದಷ್ಟು ಆಳ, ಅಗಲವಾದ ಹಸಿರು ಪರ್ವತ ಶ್ರೇಣಿಗಳು, ಎತ್ತರ ತಗ್ಗಿನ ರುದ್ರರಮಣೀಯ ದೃಶ್ಯಗಳು ಮನಸೆಳೆಯುತ್ತವೆ.

ಚಾರಣಪ್ರಿಯರಿಗೆ ತಡಿಯಂಡಮೋಳ್ ಶಿಖರ ಸ್ವರ್ಗವೇ. ಚಾರಣದ ಹಾದಿಯಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲ. ಹಾಗಾಗಿ, ಚಾರಣಿಗರು ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿದಂತೆ ಆಹಾರ ಮತ್ತಿತರ ಅಗತ್ಯ ವಸ್ತುಗಳನ್ನು ಕೊಂಡೊಯ್ಯುವುದು ಸೂಕ್ತ.

ತಡಿಯಂಡಮೋಳ್‌ನ ತಳಭಾಗದಲ್ಲಿ ಕೊಡಗಿನ ಪ್ರಮುಖ ಸ್ಮಾರಕವಾದ ನಾಲ್ಕುನಾಡು ಅರಮನೆಯಿದೆ. ಎರಡು ಅಂತಸ್ತಿನಿಂದ ನಿರ್ಮಿಸಲಾಗಿರುವ ರಾಜರ ಕಾಲದ ಈ ಅರಮನೆಯನ್ನು ಕ್ರಿ.ಶ. 1782ರಲ್ಲಿ ದೊಡ್ಡ ವೀರರಾಜೇಂದ್ರ ಅವರಿಂದ ನಿರ್ಮಾಣಗೊಂಡಿದ್ದು, ಚಾರಣಿಗರು ವೀಕ್ಷಿಸಬಹುದು. ಇನ್ನುಳಿದಂತೆ, ಕೊಡಗಿನ ಮಳೆದೇವರು ಎಂಬ ಖ್ಯಾತಿಯ ಇಗ್ಗುತಪ್ಪ ದೇವಾಲಯವೂ ಸನಿಹದಲ್ಲಿದೆ.

ಕೊಡಗು ಜಿಲ್ಲೆಯಲ್ಲಿ ಚಾರಣಕ್ಕೆ ತೆರಳುವ ಮಂದಿಗೆ ಸವಾಲು ನೀಡುವ ಮೇಲಿನ ಗಿರಿಶಿಖರಗಳ ಜೊತೆಯಲ್ಲಿ ತಲಕಾವೇರಿ ಬಳಿಯ ಬ್ರಹ್ಮಗಿರಿ (4,441 ಅಡಿ), ಭಾಗಮಂಡಲ ಬಳಿಯ ತಾವೂರು ಬೆಟ್ಟ (4,141 ಅಡಿ), ಕೋಪಟ್ಟಿ ಬೆಟ್ಟ, ಇರ್ಪು ಬಳಿಯ ಬ್ರಹ್ಮಗಿರಿ ಶಿಖರ, ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ಹೊಂದಿಕೊಂಡಂತಿರುವ ಕೋಳಿಕ್ಕಮಲೆ, ಮಡಿಕೇರಿ– ಗಾಳಿಬೀಡು ಬಳಿಯ ನಿಶಾನೆಮೊಟ್ಟೆ, ಕಕ್ಕಬ್ಬೆ ಬಳಿಯ ಇಗ್ಗುತ್ತಪ್ಪ ಬೆಟ್ಟ ಚಾರಣ ತಾಣಗಳಾಗಿವೆ. ಇಲ್ಲಿ ಕಾಣುವ ನಿಸರ್ಗ ದೃಶ್ಯಗಳು ಮನಮೋಹಕ. ಎಲ್ಲವೂ ಒಂದು ದಿನದಲ್ಲಿ ಕೈಗೊಳ್ಳಬಹುದಾದ ಚಾರಣತಾಣಗಳು. 5–6 ಗಂಟೆಗಳಲ್ಲಿ ಶಿಖರದ ತುದಿ ತಲುಪಿ ಸೌಂದರ್ಯಾಸ್ವಾದನೆ ಮಾಡಬಹುದು.

ಕೊಡಗಿನ ಅತ್ಯಂತ ಎತ್ತರವಾದ ತಡಿಯಂಡಮೋಳ್ ಶಿಖರ
ಚೇಲಾವರದ ಕಬ್ಬೆಬೆಟ್ಟ
ಕಕ್ಕಬ್ಬೆಯ ಪ್ರಸಿದ್ಧ ಇಗ್ಗುತ್ತಪ್ಪ ದೇವಾಲಯ

ಕಬ್ಬೆ ಬೆಟ್ಟದ ಚೆಲುವ ಕಣ್ತುಂಬಿಕೊಳ್ಳಲು ಬೇಸಿಗೆ ಸೂಕ್ತ!

ನಾಪೋಕ್ಲು ಹೋಬಳಿ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬೆ ಬೆಟ್ಟವು ನಾಪೋಕ್ಲುವಿನಿಂದ 17 ಕಿ.ಮೀ. ದೂರದಲ್ಲಿದೆ. ಅತ್ತ ವಿರಾಜಪೇಟೆಯಿಂದಲೂ 17 ಕಿ.ಮೀ. ಅಂತರ. ಸ್ವಂತ ವಾಹನದಲ್ಲಿ ಮಡಿಕೇರಿಯಿಂದ ಹೊರಟರೆ ಅರ್ಧಗಂಟೆಯಲ್ಲಿ ಚೆಯ್ಯಂಡಾಣೆ ತಲುಪಬಹುದು. ಚೆಯ್ಯಂಡಾಣೆಯಿಂದ 6 ಕಿ.ಮೀ. ಸಾಗಿದರೆ ಚೇಲಾವರದ ಕಬ್ಬೆ ಬೆಟ್ಟದ ತಳ ತಲುಪಬಹುದು. ಸ್ವಂತ ವಾಹನದಲ್ಲಿ ಕಾಂಕ್ರಿಟ್ ರಸ್ತೆಯಲ್ಲಿ ಶಿಖರದ ತಳಭಾಗದವರೆಗೆ ಸಾಗಿದರೆ ಮತ್ತೆ ಕಾಲ್ನಡಿಗೆಯ ಚಾರಣದ ಹಾದಿ. ಏರುಹಾದಿಯಲ್ಲಿ ಹೆಜ್ಜೆ ಹಾಕುವಾಗ ಚಾರಣದ ಜೊತೆಜೊತೆಯಲ್ಲಿ ನಿಸರ್ಗ ರಮಣೀಯ ದೃಶ್ಯಗಳನ್ನು ಸೆರೆ ಹಿಡಿಯಬಹುದು. ಸುತ್ತಲಿನ ಮನಮೋಹಕ ನಿಸರ್ಗ ಸೌಂದರ್ಯ ದೃಷ್ಟಿಗೆ ನಿಲುಕದಷ್ಟು ಆಳ ಅಗಲವಾದ ಹಸಿರು ಪರ್ವತ ಶ್ರೇಣಿಗಳು ಎತ್ತರ ತಗ್ಗಿನ ರುದ್ರರಮಣೀಯ ದೃಶ್ಯಗಳು ಮನಸೆಳೆಯುತ್ತವೆ. ಬಿಸಿಲು ಮೋಡ ಮಂಜು... ಕ್ಷಣಕ್ಕೊಮ್ಮೆ ಬದಲಾಗುವ ವಾತಾವರಣದಲ್ಲಿ ರಮ್ಯ ರೋಚಕ ಹಾದಿಯನ್ನು ಕಾಲ್ನಡಿಗೆಯಲ್ಲಿ ಸವೆಸುವುದು ಒಂದು ಅಪೂರ್ವ ಅನುಭವ. ವರ್ಷದ ಬಹುಕಾಲ ಮಂಜಿನ ಸೆರಗಿನಲ್ಲಿ ತನ್ನ ಸೌಂದರ್ಯವನ್ನು ಮುಚ್ಚಿಟ್ಟುಕೊಂಡಿರುತ್ತದೆ ಈ ಕಬ್ಬೆ ಬೆಟ್ಟ. ಹಾಗಾಗಿ ಬೆಟ್ಟದ ಸುತ್ತಲಿನ ಗುಡ್ಡಗಳನ್ನು ಕೆಳಗಿನ ಕಣಿವೆಗಳನ್ನು ಕಣ್ತುಂಬಿಕೊಳ್ಳಲು ಬೇಸಿಗೆಯ ಈ ಅವಧಿ ಪ್ರಶಸ್ತವಾಗಿದೆ.

ಪ್ರವಾಸಿಗರ ಸೆಳೆಯುತ್ತಿದೆ ಕೋಟೆ ಬೆಟ್ಟ

ಕೊಡಗಿನ ಬೆಟ್ಟಗಳಲ್ಲಿ ಅತ್ಯಂತ ಎತ್ತರದ ಬೆಟ್ಟವಾಗಿ ತಡಿಯಂಡಮೋಳ್ (1717 ಮೀ.) ಇದ್ದರೆ ಎರಡನೇ ಸ್ಥಾನ 1714 ಮೀ ಎತ್ತರವಿರುವ ಪುಷ್ಪಗಿರಿಗೆ ಸಲ್ಲುತ್ತದೆ. 1639 ಮೀ. ಎತ್ತರವಿರುವ ಕೋಟೆ ಬೆಟ್ಟ ಕೊಡಗಿನ ಎತ್ತರದ ಪರ್ವತಗಳಲ್ಲಿ ತೃತೀಯ ಸ್ಥಾನ ಹೊಂದಿದೆ. ತಡಿಯಂಡಮೋಳ್ ಹಾಗೂ ಪುಷ್ಪಗಿರಿ ಈಗಾಗಲೇ ಸಾಹಸ ಬಯಸುವ ಚಾರಣಪ್ರಿಯರ ಮೆಚ್ಚಿನ ಶಿಖರಗಳಾಗಿದ್ದರೆ ಕೋಟೆ ಬೆಟ್ಟ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಚಾರಣಿಗರನ್ನು ತನ್ನೆಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ಮಡಿಕೇರಿಯಿಂದ 20 ಕಿ.ಮೀ. ದೂರದಲ್ಲಿರುವ ಕೋಟೆಬೆಟ್ಟ ಪುಷ್ಪಗಿರಿ ಪರ್ವತ ಕಣಿವೆಯಿಂದ ಕವಲೊಡೆದ ಹಲವು ಶ್ರೇಣಿಗಳ ಪೈಕಿ ಪ್ರಮುಖ ಸ್ಥಾನವನ್ನು ಹೊಂದಿದೆ.

ಆಯಾಸ ಮರೆಸುವ ತಾಣಗಳು

‘ಕಬ್ಬೆ ಬೆಟ್ಟವನ್ನೇರುವ ಹಾದಿಯಲ್ಲಿ ನಿಸರ್ಗ ರಮಣೀಯ ದೃಶ್ಯಗಳಿವೆ. ಬಿಸಿಲಿನ ದಿನಗಳಲ್ಲೂ ಮೋಡಗಳ ಸರಮಾಲೆ. ಕಣಿವೆಗಳ ನಡುವಿನಿಂದ ಮಂಜು ಮೇಲೆದ್ದು ಬಂದು ಆವರಿಸುವ ದೃಶ್ಯ ಮನಮೋಹಕ. ಸುತ್ತಲೂ ಬೆಟ್ಟದ ಸಾಲುಗಳು ಒಂದೆಡೆ ಧಾವಿಸಿ ಬರುವ ಮೋಡಗಳ ಸಾಲು... ಬೀಸುವ ತಂಪುಗಾಳಿ... ಶಿಖರದಲ್ಲಿ ನಿಂತು ನೋಡಿದಾಗ ಅದ್ಭುತ ಪ್ರಕೃತಿ ಸೌಂದರ್ಯ ಚಾರಣಿಗರ ಆಯಾಸವನ್ನು ಮರೆಸುತ್ತದೆ’ ಎಂದು ನಾಪೋಕ್ಲುವಿನ ಚಾರಣಿಗೆ ಗಣರಾಜ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.