ADVERTISEMENT

ಪೊನ್ನಂಪೇಟೆ: ಗಂಡು ಹುಲಿಯ ಕಳೇಬರ ಪತ್ತೆ, ಅರಣ್ಯಾಧಿಕಾರಿಗಳಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 19:39 IST
Last Updated 19 ಮಾರ್ಚ್ 2021, 19:39 IST
ಸ್ಥಳದಲ್ಲಿ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದರು.
ಸ್ಥಳದಲ್ಲಿ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದರು.   

ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ನಾಲ್ಕೇರಿಯ ಕೋತೂರು ಗ್ರಾಮದ ಲಕ್ಕುಂದದಲ್ಲಿ, ಗಂಡು ಹುಲಿಯ ಕಳೇಬರ ಶುಕ್ರವಾರ ಪತ್ತೆಯಾಗಿದೆ. ಕಾರ್ಯಾಚರಣೆ ತಂಡಕ್ಕೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನ ಹಾಗೂ ಖಾಸಗಿ ತೋಟದ ಮಧ್ಯದಲ್ಲಿರುವ ಕಂದಕದಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿಯ ಕಳೇಬರ ಸಿಕ್ಕಿದೆ.

ಜನ ಹಾಗೂ ಜಾನುವಾರುಗಳ ಮೇಲೆ ದಾಳಿ ನಡೆಸಿ, ಅಪಾಯಕಾರಿ ಎನಿಸಿದ್ದು ಇದೇ ಹುಲಿ ಎಂಬ ನಿರ್ಧಾರಕ್ಕೆ ಅರಣ್ಯಾಧಿಕಾರಿಗಳು ಬಂದಿದ್ದಾರೆ. ಆದರೆ, ರೈತರು ಇದನ್ನು ಒಪ್ಪುತ್ತಿಲ್ಲ.

‘ಕಾರ್ಮಿಕರ ಮೇಲೆ ದಾಳಿ ನಡೆದಿದ್ದ ಸ್ಥಳದಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿರುವ ಹುಲಿಯ ಛಾಯಾಚಿತ್ರಕ್ಕೂ, ಸತ್ತಿರುವ ಹುಲಿಗೂ ಹೊಂದಾಣಿಕೆ ಆಗಿದೆ. ಈ ಹುಲಿಯ ದಾಳಿಯಿಂದ ಇಬ್ಬರು ಬಾಲಕರು, ಒಬ್ಬರು ವೃದ್ಧೆ ಮೃತಪಟ್ಟಿದ್ದರು. ಮೃತಪಟ್ಟವರ ಮೇಲೆ ಬಿದ್ದಿದ್ದ ರಕ್ತದ ಮಾದರಿ, ಹುಲಿ ಕೂದಲನ್ನು ಹೈದರಾಬಾದ್‌ನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಪರೀಕ್ಷೆಯಿಂದ ಗಂಡು ಹುಲಿ ಎಂಬುದು ಖಚಿತವಾಗಿತ್ತು. ಹೈಸೊಡ್ಲೂರು ಎಂಬಲ್ಲಿ, ಕಾರ್ಯಾಚರಣೆ ನಡೆಸಿದ ವೇಳೆ ಹಾರಿಸಿದ್ದ ಗುಂಡೇಟು ಇದೇ ಹುಲಿಗೆ ತಗುಲಿ, ವಾರದ ಬಳಿಕ ಸತ್ತಿದೆ’ ಎಂದು ಅರಣ್ಯಾಧಿಕಾರಿಗಳು ಹೇಳಿದರು.

ADVERTISEMENT

ಈ ಹುಲಿ ನಾಲ್ಕು ದಿನಗಳ ಹಿಂದೆಯೇ ಮೃತಪಟ್ಟಿದೆ ಎನ್ನಲಾಗಿದೆ. ಆದರೆ, ಈ ಅವಧಿಯಲ್ಲೂ ಹುಲಿ ದಾಳಿಗೆ ಜಾನುವಾರುಗಳು ಬಲಿಯಾಗಿರುವುದು ರೈತರ ಅನುಮಾನ ಹಾಗೂ ಆತಂಕ ಹೆಚ್ಚಿಸಿದೆ. ಸ್ಥಳದಲ್ಲಿಯೇ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅದರ ದೇಹದ ಮಾದರಿ ಹಾಗೂ ಗುಂಡುಗಳನ್ನು ಸಂಗ್ರಹಿಸಿ, ಮತ್ತೆ ಪ್ರಯೋಗಾಲಯಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.

ತಗುಲಿತ್ತೇ ಗುಂಡೇಟು?: ಕಳೆದ ವಾರ ಪೊನ್ನಂಪೇಟೆ ತಾಲ್ಲೂಕಿನ ಹೈಸೊಡ್ಲೂರಿನ ಕಾಫಿ ತೋಟದಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆ ವೇಳೆ ಎದುರಾಗಿದ್ದ ಅಪಾಯಕಾರಿ ಹುಲಿಗೆ, ಕಾರ್ಯಾಚರಣೆ ಸಿಬ್ಬಂದಿ ಮೂರು ಸುತ್ತು ಗುಂಡು ಹಾರಿಸಿದ್ದರು.

ಹುಲಿಗೆ ಒಂದು ಗುಂಡು ತಗುಲಿದ್ದು ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅರಣ್ಯಾಧಿಕಾರಿಗಳು ಅಂದು ಹೇಳಿಕೊಂಡಿದ್ದರು. ಆದರೆ, ಒಂದು ವಾರವಾದರೂ ಹುಲಿಯ ಸುಳಿವು ಸಿಕ್ಕಿರಲಿಲ್ಲ.

‘ಇದೀಗ ಕಳೇಬರ ಸಿಕ್ಕಿದ್ದು, ಇದೇ ಹುಲಿಯು ದಾಳಿ ನಡೆಸಿ ಉಪಟಳ ನೀಡುತ್ತಿತ್ತು. ಅದನ್ನು ‘ಯು–285’ ಸಂಖ್ಯೆಯಿಂದ ಗುರುತಿಸಿ ಕಾರ್ಯಾಚರಣೆ ನಡೆಸುತ್ತಿದ್ದೆವು. ಈಗ ಸತ್ತಿರುವುದು ಅಂದಾಜು 10 ವರ್ಷದ ಗಂಡು ಹುಲಿ’ ಎಂದು ಕಾರ್ಯಾಚರಣೆ ತಂಡದ ಡಿಸಿಎಫ್‌ ಒಬ್ಬರು ‘‍ಪ್ರಜಾವಾಣಿ’ಗೆ ತಿಳಿಸಿದರು.

ಹೆಚ್ಚಿದ್ದ ಜನಾಕ್ರೋಶ:ಹುಲಿ ದಾಳಿಯಿಂದ ಮೂವರು ಮೃತಪಟ್ಟ ಮೇಲೆ, ಅಪಾಯಕಾರಿ ಹುಲಿ ಸೆರೆಗೆ ಆಗ್ರಹಿಸಿ ರೈತರು ಹಾಗೂ ಕಾರ್ಮಿಕರು ಬೆಳ್ಳೂರು ಎಂಬಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ಪೊನ್ನಂಪೇಟೆ ತಾಲ್ಲೂಕು ಬಂದ್‌ ಮಾಡಲಾಗಿತ್ತು.

ರೈತರ ಆಕ್ರೋಶ ಹೆಚ್ಚಿದ್ದರಿಂದ, ಹುಲಿ ಸೆರೆ ಹಿಡಿಯಲು ಆಗದಿದ್ದರೆ ಕೊನೆಯ ಆಯ್ಕೆಯಾಗಿ ಗುಂಡಿಕ್ಕಲು ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಸೂಚನೆ ನೀಡಿದ್ದರು. ಕಾರ್ಯಾಚರಣೆಗೆ ಬೆಂಗಳೂರಿನ ಶಾರ್ಪ್‌ಶೂಟರ್‌ ಸುಶೀಲ್ ಕುಮಾರ್ ಅವರನ್ನು ನಿಯೋಜಿಸಲಾಗಿತ್ತು. ಒಮ್ಮೆ ಹುಲಿ ಎದುರಾಗಿದ್ದು, ಅಧಿಕಾರಿಯೊಬ್ಬರು, ‘ಗುರುತಿಸಿರುವ ಹುಲಿ ಬಿಟ್ಟು, ಬೇರೆ ಹುಲಿಗೆ ಗುಂಡಿಕ್ಕಿದರೆ ನೀವೇ ಹೊಣೆ’ ಎಂದು ಹೇಳಿದ್ದರಿಂದ, ಸುಶೀಲ್‌ ಕಾರ್ಯಾಚರಣೆ ಬಿಟ್ಟು ವಾಪಸ್ಸಾಗಿದ್ದರು. ಇದರಿಂದ ಈ ಭಾಗದಲ್ಲಿ ಆತಂಕ ಹೆಚ್ಚಾಗಿತ್ತು.

* ಇದೇ ಅಪಾಯಕಾರಿ ಹುಲಿಯೆಂದು ಅಧಿಕಾರಿಗಳು ಹೇಳಿದ್ದು, ಕಾರ್ಯಾಚರಣೆ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ರಯೋಗಾಲಯದ ವರದಿ ಬರುವುದಕ್ಕೂ ಮುನ್ನ ಕಾರ್ಯಾಚರಣೆ ಸ್ಥಗಿತಗೊಳಿಸಬಾರದು.

-ಆಲೆಮಾಡ ಮಂಜುನಾಥ್‌, ರೈತ ಮುಖಂಡ, ಹುದಿಕೇರಿ

* ಹುಲಿಯ ಮೈಮೇಲಿನ ಪಟ್ಟೆಗಳ ಮಾದರಿ ಹೊಂದಾಣಿಕೆಯಾಗಿದೆ. ಹಲ್ಲಿನ ಗುರುತು ಸಹ ತಾಳೆಯಾಗುತ್ತಿದೆ.

-ತಾಕತ್‌ ಸಿಂಗ್‌ ರಣಾವತ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.