ADVERTISEMENT

ಕೊಡಗು: ಜಿಲ್ಲೆಯಲ್ಲಿ ಗಾಳಿಗೆ ತತ್ತರಿಸಿದ ಜನರು, ಧರೆಗುರುಳಿದ ಮರಗಳು –ಕಂಬಗಳು

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 5:10 IST
Last Updated 14 ಜುಲೈ 2022, 5:10 IST
ಮಡಿಕೇರಿ-ಸೋಮವಾರಪೇಟೆ ರಸ್ತೆಯಲ್ಲಿ ಮರ ಬಿದ್ದಿರುವ ದೃಶ್ಯ
ಮಡಿಕೇರಿ-ಸೋಮವಾರಪೇಟೆ ರಸ್ತೆಯಲ್ಲಿ ಮರ ಬಿದ್ದಿರುವ ದೃಶ್ಯ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆವರೆಗೂ ಬೀಸಿದ ಗಾಳಿಗೆ ಜನರು ತತ್ತರಿಸಿದ್ದಾರೆ. ಅನೇಕ ರಸ್ತೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿ ಸಂಪರ್ಕ ಕಡಿತಗೊಂಡಿದೆ. ವಿದ್ಯಾರ್ಥಿಗಳು ಗ್ರಾಮೀಣ ಭಾಗಗಳಿಂದ ಶಾಲೆ, ಕಾಲೇಜುಗಳಿಗಾಗಿ ಪಟ್ಟಣಕ್ಕೆ ಬರಲು ಪರದಾಡುತ್ತಿದ್ದಾರೆ.

ಭಾಗಮಂಡಲ- ತಲಕಾವೇರಿ ರಸ್ತೆ, ಮಡಿಕೇರಿ- ಸೋಮವಾರಪೇಟೆ ರಸ್ತೆ, ಮಡಿಕೇರಿ ನಗರದ ಗಾಳಿಬೀಡು ಜಂಕ್ಷನ್ ಹಾಗೂ ಶನಿವಾರಸಂತೆ ಹೋಬಳಿಯ ಬಹುತೇಕ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಮರಗಳು ಉರುಳಿ ಬಿದ್ದು ವಾಹನ ಸಂಚಾರ ವ್ಯತ್ಯಯಗೊಂಡಿದೆ.

ವಿದ್ಯುತ್ ಕಂಬಗಳೂ ಧರೆಗುರುಳಿದ್ದು, ಮಡಿಕೇರಿ ನಗರ ಸೇರಿದಂತೆ ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ‌. ಮಾದಾಪುರದ ಚೆನ್ನಬಸವೇಶ್ವರ ಶಾಲೆಯ ಮೇಲೆ ಮರವೊಂದು ಉರುಳಿ ಬಿದ್ದು, ಶಾಲಾ ಕಟ್ಟಡ ಹಾನಿಯಾಗಿದೆ.

ಸೋಮವಾರಪೇಟೆ ತಾಲ್ಲೂಕಿನ ‌ಶಿರಂಗಾಲ ಗ್ರಾಮದ ಧರ್ಮರಾಯ ಎಂಬುವವರ‌ ಮನೆಯ ಮೇಲೆ ಮರ ಬಿದ್ದು ಧರ್ಮರಾಯ ಗಾಯಗೊಂಡಿದ್ದಾರೆ. ಮನೆ ಜಖಂಗೊಂಡಿದೆ.

ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ಶ್ರೀಮಂಗಲ- ನಾಲ್ಕೇರಿ ಸೇತುವೆ ಜಲಾವೃತಗೊಂಡಿದೆ.

ಹಾರಂಗಿ ಜಲಾಶಯಕ್ಕೆ 13,988 ಕ್ಯುಸೆಕ್ ನಷ್ಟು ನೀರು ಹರಿದು ಬರುತ್ತಿದ್ದು, 13,166 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಭಾಗಮಂಡಲದಲ್ಲಿ ಹೆಚ್ಚು‌ ಮಳೆ ಸುರಿದಿದ್ದರಿಂದ ಭಾಗಮಂಡಲ- ನಾಪೋಕ್ಲು ರಸ್ತೆಯಲ್ಲಿ ಮತ್ತೆ ನೀರು ಹರಿಯುತ್ತಿದೆ.

ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಹಳ್ಳಿಯಲ್ಲಿ 20 ಸೆಂ.ಮೀನಷ್ಟು ಭಾರಿ ಮಳೆ ಸುರಿದಿದೆ. ಭಾಗಮಂಡಲದಲ್ಲಿ 16, ಚೌಡ್ಲು ಗ್ರಾಮದಲ್ಲಿ 12, ಟಿ.ಶೆಟ್ಟಿಗೇರಿಯಲ್ಲಿ 14, ಸೆಂ.ಮೀನಷ್ಟು ಹೆಚ್ಚು ಮಳೆ ಸುರಿದಿದೆ. ಗಾಳಿ ಅತಿ ವೇಗವಾಗಿ ಬೀಸಲಿದೆ ಎಂಬ ಮುನ್ನೆಚ್ಚರಿಕೆಯನ್ನು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ನೀಡಿದೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.