ADVERTISEMENT

ದಶಮಂಟಪೋತ್ಸವದಲ್ಲಿ ಹಲವು ಪ್ರಥಮಗಳ ದರ್ಶನ

ಕೋಟೆ ಮಹಾಗಣಪತಿ ದೇಗುಲ ಸಮಿತಿ ನಡೆಸಿದೆ ಭರದ ಸಿದ್ಧತೆ

ಕೆ.ಎಸ್.ಗಿರೀಶ್
Published 30 ಸೆಪ್ಟೆಂಬರ್ 2022, 11:14 IST
Last Updated 30 ಸೆಪ್ಟೆಂಬರ್ 2022, 11:14 IST
ಕೋಟೆ ಮಹಾಗಣಪತಿ ದೇಗುಲ
ಕೋಟೆ ಮಹಾಗಣಪತಿ ದೇಗುಲ   

ಮಡಿಕೇರಿ: ಈ ಬಾರಿಯ ದಶಮಂಟಪೋತ್ಸವದಲ್ಲಿ ಕೋಟೆ ಮಹಾಗಣಪತಿ ದೇಗುಲ ಸಮಿತಿಯು ಹಲವು ಪ್ರಥಮಗಳನ್ನು ಅನಾವರಣಗೊಳಿಸಲು ಭರದ ಸಿದ್ಧತೆ ನಡೆಸಿದೆ.

ತನ್ನ 46ನೇ ವ‌ರ್ಷದ ಮಂಟಪೋತ್ಸವದ ನಿಮಿತ್ತ ಹಾಗೂ ಕಳೆದೆರಡು ವರ್ಷಗಳಿಂದ ನಡೆದ ಸರಳ ದಸರೆಯಿಂದಾಗಿ ಈ ಬಾರಿ ಅತ್ಯಂತ ಅದ್ದೂರಿಯಾಗಿ ಮಂಟಪ ಕಟ್ಟಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ₹ 24.50 ಲಕ್ಷವನ್ನು ತೆಗೆದಿರಿಸಲಾಗಿದೆ.

ಮಂಟಪದಲ್ಲಿ ಪ್ರಸ್ತುತಪಡಿಸಲು ಆಯ್ದುಕೊಂಡಿರುವ ವಿಷಯವೂ ಅಷ್ಟೇ ಅಪರೂಪ ಎನಿಸುವಂತಹದ್ದಾಗಿದೆ. ಮಹಾ ಗಣಪತಿಗೆ ಸಿಂಧೂರ ಎಂಬ ಹೆಸರು ಏಕೆ ಬಂದಿತು ಎಂಬ ಕಥಾವಸ್ತುವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಾಮಾನ್ಯವಾಗಿ ಜನಜನಿತವಾಗದ ಪುರಾಣದ ಕಥೆ ಇದಾಗಿದ್ದು, ಕಥಾವಸ್ತುವೇ ಸಾಕಷ್ಟು ಕುತೂಹಲಗಳನ್ನು ಮೂಡಿಸಿದೆ.

ADVERTISEMENT

ಈ ಕಥಾವಸ್ತುವಿನೊಳಗೆ ದೇವ, ದಾನವರು, ಪ್ರಾಣಿಗಳು ಬರುತ್ತಾರೆ. ಬ್ರಹ್ಮ, ವಿಷ್ಣು, ಈಶ್ವರ, ಪಾರ್ವತಿ, ಗಣಪತಿ, ಸಿಂಧೂರ, ನಂದಿ ಹೀಗೆ ಒಟ್ಟು 24 ಕಲಾಕೃತಿಗಳು ಇರಲಿವೆ. ಇವೆಲ್ಲವೂ ಮಹಾ ಗಣಪತಿಗೆ ಸಿಂಧೂರ ಎಂಬ ಹೆಸರು ಏಕೆ ಬಂತು ಎಂಬ ಕಥೆಯನ್ನು ಸೊಗಸಾಗಿ ಕಟ್ಟಿಕೊಡಲಿದೆ ಎಂದು ಸಮಿತಿ ಅಧ್ಯಕ್ಷ ಎಂ.ಜಿ.ಚಂದ್ರು ‘ಪ್ರಜಾವಾಣಿ’ಗೆ ತಿಳಿಸಿದರು.

ಗೋವಾದಿಂದ ಅತ್ಯಾಧುನಿಕ ಸೌಂಡ್‌ ಸಿಸ್ಟಂ!

ಈ ಮಂಟಪದಲ್ಲಿ ವಿಭಿನ್ನ ಹಾಗೂ ಅತ್ಯಾಧುನಿಕವಾದ ಸೌಂಡ್‌ ಸಿಸ್ಟಂನ್ನು ಗೋವಾದಿಂದ ತರಿಸುತ್ತಿರುವುದು ವಿಶೇಷ. ಈ ಸೌಂಡ್ ಸಿಸ್ಟಂ ಹಲವು ವಿಶೇಷಗಳನ್ನು ಒಳಗೊಂಡಿದೆ. ಹೊಸ ಬಗೆಯ ತಂತ್ರಜ್ಞಾನವಿದ್ದು ಥಿಯೇಟರ್‌ನಲ್ಲಿ ಬರುವುದಕ್ಕಿಂತಲೂ ಹೆಚ್ಚಿನ ವೈವಿಧ್ಯಮಯ ಶಬ್ದಗಳು ಕೇಳಿ ಬರಲಿವೆ.

ಹಲವು ಹೊಸತುಗಳ ಅನಾವರಣ

ಈ ಬಾರಿ ಹಲವು ಹೊಸತುಗಳನ್ನು ಮಂಟಪಗಳಲ್ಲಿ ಅನಾವರಣಗೊಳಿಸಲು ಸಮಿತಿ ನಿರ್ಧರಿಸಿದೆ. ಆ ಹೊಸತುಗಳೇನು ಎಂಬುದನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ. ದಶಮಂಟಪಗಳ ಶೋಭಾಯಾತ್ರೆಯಂದು ಖುದ್ದಾಗಿ ಬಂದು ನೋಡಿ ಕಣ್ತುಂಬಿಕೊಳ್ಳಬೇಕು ಎಂದು ಸಮಿತಿ ಸದಸ್ಯರು ಹೇಳುತ್ತಾರೆ. ಈ ಹೊಸತುಗಳ ಅನಾವರಣಕ್ಕಾಗಿಯೇ ಗುಜರಾತ್‌ನಿಂದ ತಂಡವೊಂದು ಬರುತ್ತಿದೆ. ಇವರು ವಿಶೇಷ ಎಫೆಕ್ಟ್‌ ನೀಡಲಿದ್ದಾರೆ.

ಪಟಾಕಿಯಲ್ಲಿ ಬರುವ ಎಫೆಕ್ಟ್‌ ಸಹ ಈ ಬಾರಿ ವಿಶೇಷವಾಗಿ ಇರಲಿದೆ. ‘ರೆಟ್ರೊ ಟ್ರಯಾಂಗಲ್’ ಎಂಬ ವಿಶಿಷ್ಟ ಬಗೆಯ ಪಟಾಕಿ ಸಿಡಿತ ಇರಲಿದೆ. ಇದರಿಂದ ಕೇವಲ ಮಂಟಪ ಮಾತ್ರವಲ್ಲ ಸುತ್ತಮುತ್ತಲಿನ ಹಲವು ಮೀಟರ್‌ಗಳ ಪ್ರದೇಶ ಇದರಿಂದ ಜಗಮಗಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.