ADVERTISEMENT

4 ವೆಂಟಿಲೇಟರ್, ಅಗತ್ಯ ವಸ್ತು ಹಸ್ತಾಂತರ

ಮೋಬಿಯಸ್ ಫೌಂಡೇಷನ್ ವತಿಯಿಂದ ‘ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ’ಗೆ ನೆರವು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 12:29 IST
Last Updated 8 ಏಪ್ರಿಲ್ 2020, 12:29 IST
ನವದೆಹಲಿ ಮೋಬಿಯಸ್‌ ಫೌಂಡೇಷನ್‌ನಿಂದ ಜಿಲ್ಲಾ ಆಸ್ಪತ್ರೆಗೆ ನಾಲ್ಕು ವೆಂಟಿಲೇಟರ್‌ ಅನ್ನು ಹಸ್ತಾಂತರ ಮಾಡಲಾಯಿತು
ನವದೆಹಲಿ ಮೋಬಿಯಸ್‌ ಫೌಂಡೇಷನ್‌ನಿಂದ ಜಿಲ್ಲಾ ಆಸ್ಪತ್ರೆಗೆ ನಾಲ್ಕು ವೆಂಟಿಲೇಟರ್‌ ಅನ್ನು ಹಸ್ತಾಂತರ ಮಾಡಲಾಯಿತು   

ಮಡಿಕೇರಿ: ‘ಕೋವಿಡ್– 19’ ಚಿಕಿತ್ಸೆಗೆ ಅಗತ್ಯವಾಗಿ ಬೇಕಾದ ನಾಲ್ಕು ವೆಂಟಿಲೇಟರ್‌ ಅನ್ನು ನವದೆಹಲಿಯ ಮೋಬಿಯಸ್ ಪ್ರತಿಷ್ಠಾನ ಬುಧವಾರ ಹಸ್ತಾಂತರಿಸಿತು.

ಅಲ್ಲದೇ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರು ಹಾಗೂ ಬಡವರಿಗೆ ನೀಡಲು ಅಗತ್ಯ ವಸ್ತುಗಳನ್ನು ಇದೇ ವೇಳೆ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ‘ಹಸಿದ ಹೊಟ್ಟೆಗೆ ತಣಿವು ಪೆಟ್ಟಿಗೆ’ಗೆ ಅಗತ್ಯ ವಸ್ತುಗಳನ್ನು ಸಂಸ್ಥೆ ವತಿಯಿಂದ ನೀಡಲಾಯಿತು.

ADVERTISEMENT

ಪೊಲೀಸರಿಗೆ, ವೈದ್ಯಕೀಯ ಸಿಬ್ಬಂದಿಗೆ ಹಾಗೂ ಪತ್ರಕರ್ತರಿಗೆ ಅಗತ್ಯ ಮಾಸ್ಕ್, ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ವೈಯಕ್ತಿಕ ಸಂರಕ್ಷಣಾ ಸಾಧನದ ಕಿಟ್‌ ಅನ್ನು ಇದೇ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಮಧು ಬೋಪಣ್ಣ ಹಸ್ತಾಂತರ ಮಾಡಿದರು.

ಸಂಸ್ಥೆಯ ಸಂಚಾಲಕ ಮಧು ಬೋಪಣ್ಣ ಮಾತನಾಡಿ, ‘ಪ್ರಧಾನ ಮಂತ್ರಿ ನಿಧಿ ಖಾತೆಗೆ ₹ 1 ಕೋಟಿ ಹಣ ದೇಣಿಗೆ ನೀಡಲಾಗಿದ್ದು, ಕೊಡಗು ಜಿಲ್ಲಾಡಳಿತಕ್ಕೆ ಸಂಸ್ಥೆ ವತಿಯಿಂದ ಸಹಾಯ ಮಾಡಲಾಗಿದೆ. ವೈದ್ಯಕೀಯ ಉಪಕರಣ ಸೇರಿದಂತೆ ಸಂಕಷ್ಟದಲ್ಲಿರುವವರಿಗೆ ಸಹಾಯವಾಗುವ ನಿಟ್ಟಿನಲ್ಲಿ 2 ಸಾವಿರ ಕೆ.ಜಿ, ಬೇಳೆ, 2 ಸಾವಿರ ಲೀಟರ್ ಎಣ್ಣೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಮಡಿಕೇರಿ ಕ್ಷೇತ್ರದ ಶಾಸಕ ಎಂ.‍ಪಿ.ಅಪ್ಪಚ್ಚು ರಂಜನ್ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪನ್ನೇಕರ್, ಮಡಿಕೇರಿ ತಾ.ಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಲಕ್ಷ್ಮಿ ಸೇರಿದಂತೆ ಹಲವರು ಹಾಜರಿದ್ದರು.

ನವದೆಹಲಿಯ ಮೋಬಿಯಸ್ ಪ್ರತಿಷ್ಠಾನವು ಕೊಡಗು ಜಲಪ್ರಳಯದ ಸಂದರ್ಭದಲ್ಲೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಸಂತ್ರಸ್ತರಿಗೆ ನೆರವು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.