ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ಸೇರಿದ್ದ ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಮಹಿಳೆಯರು ಮಳೆಗೆ ಸೆಡ್ಡು ಹೊಡೆದರು.
ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಇಲ್ಲಿಗೆ ಬಂದ ಅವರು 12ಕ್ಕೂ ಅಧಿಕ ವಿವಿಧ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಎಲ್ಲಿ ನೋಡಿದರಲ್ಲಿ ಮೈದಾನದ ತುಂಬೆಲ್ಲ ಮಹಿಳೆಯರೇ ಕಂಡು ಬಂದರು.
ಈ ಎಲ್ಲ ದೃಶ್ಯಗಳೂ ಕಂಡು ಬಂದಿದ್ದು, ಇಲ್ಲಿ ಭಾನುವಾರ ನಡೆದ ಮಹಿಳಾ ದಸರೆಯಲ್ಲಿ.
ಆರಂಭದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರು ಬಂದಿದ್ದಾರೆ ಎಂದು ಅನ್ನಿಸಿದರೂ ಸಮಯ ಆಗುತ್ತಾ ಆಗುತ್ತಾ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೇ ಸಾಗಿತು. ಮಧ್ಯಾಹ್ನದ ಹೊತ್ತಿಗೆ ಮೈದಾನ ಮಹಿಳೆಯರಿಂದ ಭರ್ತಿಯಾಗಿತ್ತು.
ವೇದಿಕೆಯ ಮೇಲೆ ಭಾರತೀಯ ಸಾಂಪ್ರದಾಯಿಕ ಉಡುಗೆ ಪ್ರದರ್ಶನದ ನಡಿಗೆ ನಡೆಯುತ್ತಿದ್ದರೆ, ವೇದಿಕೆಯ ಕೆಳಗೆ ಒಂದು ಬದಿಯಲ್ಲಿ ಸೀರೆಗೆ ನಿಖರ ಬೆಲೆ ಹೇಳಲು ಮಹಿಳೆಯರು ಗುಂಪು ಗುಂಪಾಗಿ ಸೇರಿದ್ದರು. ಮತ್ತೊಂದೆಡೆ ಕೇಶ ವಿನ್ಯಾಸ ಸ್ಪರ್ಧೆ, ಇನ್ನೊಂದು ಕಡೆ ಮೆಹಂದಿ ಹಾಕುವ ಸ್ಪರ್ಧೆಗಳು ಒಟ್ಟೊಟ್ಟಿಗೆ ನಡೆಯುತ್ತಿದ್ದವು. ಯಾವ ಸ್ಪರ್ಧೆಯನ್ನು ನೋಡುವುದು, ಯಾವುದನ್ನು ಬಿಡುವುದು ಎಂಬ ಗೊಂದಲ ಸೇರಿದ್ದ ಪ್ರೇಕ್ಷಕರಿಗೆ ಉಂಟಾಯಿತು.
ಜಾನಪದ ನೃತ್ಯ ಸ್ಪರ್ಧೆಯಲ್ಲಂತೂ ಮಹಿಳೆಯರು ತಮ್ಮ ಪ್ರತಿಭೆ ಪ್ರದರ್ಶಿಸಿ ಜನಮನಗೆದ್ದರು. ವಾಲಗ ಕುಣಿತದಲ್ಲಿ ಮನಸೋಇಚ್ಛೆ ಕುಣಿದು ನಲಿದರು.
ಈ ಎಲ್ಲ ಮಹಿಳೆಯರ ರಕ್ಷಣೆಗಾಗಿ ಅಲ್ಲಿ ಮಹಿಳಾ ಪೊಲೀಸರೇ ಇದ್ದದ್ದು ವಿಶೇಷ ಎನಿಸಿತ್ತು. ತೀರ್ಪುಗಾರರೂ ಮಹಿಳೆಯರೇ ಆಗಿದ್ದರು. ಸಾಧಕ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರನ್ನು ಸನ್ಮಾನಿಸಿದ್ದು ಮಹಿಳಾ ದಸರೆಯ ಮೆರಗು ಹೆಚ್ಚಿಸಿತು.
ಸುಮಾರು 15ಕ್ಕೂ ಹೆಚ್ಚು ಮಳಿಗೆಗಳು ಮೈದಾನದಲ್ಲಿದ್ದವು. ವಿವಿಧ ಸ್ವಸಹಾಯ ಗುಂಪುಗಳು ತಮ್ಮ ತಮ್ಮ ಕರಕುಶಲ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿರಿಸಿದರು. ಅಣಬೆ ಉಪ್ಪಿನಕಾಯಿ ಹಾಗೂ ಇತರೆ ಅಣಬೆಯ ಮೌಲ್ಯವರ್ಧಿತ ಉತ್ಪನ್ನಗಳು ಗಮನ ಸೆಳೆದವು.
ಸಾಧಕ ಮಹಿಳೆಯರಾದ ಅಂಗನವಾಡಿ ಕಾರ್ಯಕರ್ತೆಯರಾದ ಸುಜಾತ, ಎಂ.ಎ.ರೋಹಿಣಿ, ಪಿ.ಯು.ಚೈತ್ರಾ, ಆಶಾ ಕಾರ್ಯಕರ್ತೆಯರಾದ ಚಂದ್ರಾವತಿ, ಸುರಭಿ, ಅನಿತಾ ರೈ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಚೆನ್ನಮ್ಮ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
‘ಮಹಿಳಾ ದಸರೆಯನ್ನು ಕಡೆಗಣಿಸದಿರಿ’ ಕಾರ್ಯಕ್ರಮ ಉದ್ಘಾಟಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ರಾಣಿ ಮಾಚಯ್ಯ ‘ಮಹಿಳಾ ದಸರೆಯಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಭಾಗವಹಿಸಬೇಕು. ಸಂಘಟಕರೂ ಪೂರ್ವಾಭಾವಿ ಸಭೆಗಳನ್ನು ನಡೆಸಿ ಯಶಸ್ವಿಯಾಗಿ ದಸರೆ ನಡೆಸಬೇಕು’ ಎಂದು ಹೇಳಿದರು. ವಿಧಾನಪರಿಷತ್ತಿನ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ ‘ಮಡಿಕೇರಿ ದಸರೆಯಲ್ಲಿ ಮಹಿಳಾ ದಸರೆಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು’ ಎಂದು ಕಿವಿಮಾತು ಹೇಳಿದರು. ಸಂಭ್ರಮದಿಂದ ದಸರೆ ಆಚರಿಸಬೇಕೇ ವಿನಹಾ ಯಾವುದೇ ಕಾರಣಕ್ಕೂ ನೋವಿನಿಂದ ಸಂಕಷ್ಟದಿಂದ ದಸರೆ ಆಚರಿಸಬಾರದು. ಅದಕ್ಕಾಗಿ ಸಾಕಷ್ಟು ಪೂರ್ವಸಿದ್ಧತೆಯೊಂದಿಗೆ ದಸರೆ ಆಚರಿಸಬೇಕು ಎಂದು ಸಲಹೆ ನೀಡಿದರು. ನಿವೃತ್ತ ಪ್ರಾಂಶುಪಾಲರಾದ ಕುಂತಿ ಬೋಪಯ್ಯ ಮಾತನಾಡಿ ‘ಎಲ್ಲಾ ಹೆಣ್ಣಿಗೂ ಗೌರವ ಸಿಗಬೇಕು. ಹೆಣ್ಣಿಗೆ ಗೌರವ ಕೊಟ್ಟರೆ ಸಂಸ್ಕೃತಿಗೆ ಗೌರವ ಕೊಟ್ಟಂತೆ’ ಎಂದು ಅವರು ಪ್ರತಿಪಾದಿಸಿದರು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಪಿ.ಸವಿತಾ ನಗರಸಭೆ ಸದಸ್ಯೆ ಸವಿತಾ ರಾಕೇಶ್ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಕಲಾವತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಭಾಷಣಗಳಿಗೆ ನೀರಸ ಪ್ರತಿಕ್ರಿಯೆ! ಇಲ್ಲಿ ನಡೆದ ಮಹಿಳಾ ದಸರೆಯಲ್ಲಿ ಭಾಷಣಗಳಿರುವ ವೇದಿಕೆ ಕಾರ್ಯಕ್ರಮಗಳಿಗೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ ವೇದಿಕೆ ಕಾರ್ಯಕ್ರಮ ಮುಗಿದ ನಂತರ ಇಡೀ ಮೈದಾನ ಮಹಿಳೆಯರಿಂದ ತುಂಬಿತ್ತು. ಆರಂಭದಲ್ಲಿ ಮಾತನಾಡಿದ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ರಾಣಿ ಮಾಚಯ್ಯ ವೀಣಾ ಅಚ್ಚಯ್ಯ ಅವರು ಮಹಿಳಾ ದಸರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಂದಿಲ್ಲ ಎಂದೇ ಬೇಸರ ವ್ಯಕ್ತಪಡಿಸಿದರು. ಆದರೆ ವೇದಿಕೆ ಕಾರ್ಯಕ್ರಮ ಮುಗಿದು ಸ್ಪರ್ಧೆಗಳು ಆರಂಭವಾಗುತ್ತಿದ್ದಂತೆ ಸುರಿಯುತ್ತಿದ್ದ ಮಳೆಯ ನಡುವೆಯೂ ಮಹಿಳೆಯರು ತಂಡೋಪತಂಡವಾಗಿ ಮೈದಾನಕ್ಕೆ ಬಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.