ಮಡಿಕೇರಿ: ಮೈಸೂರಿನ ಕೆ.ಆರ್.ಎಸ್. ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದು, ‘ಈ ವಿಷಯ ದುಃಖ ತರಿಸಿದೆ. ಹಿಂದಿನ ಅರಸರ ಕಾಲದಿಂದಲೂ ಇರುವ ಕೆ.ಆರ್.ಎಸ್. ರಸ್ತೆ ಎನ್ನುವುದನ್ನೇ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.
‘ಮೈಸೂರು ಅರಸರಿಂದಲೇ ಮೈಸೂರು ಸಂಸ್ಥಾನ ಅಭಿವೃದ್ಧಿ ಆಗಿದೆ. ಹಿಂದಿನ ಇತಿಹಾಸವನ್ನು ನಾವೆಲ್ಲಾ ಸ್ಮರಣೆ ಮಾಡಬೇಕಿದೆ. ಮೈಸೂರಿನಲ್ಲಿ ಬೇಕಾದಷ್ಟು ರಸ್ತೆಗಳಿವೆ. ಅವುಗಳಿಗೆ ಬೇಕಾದ ಹೆಸರು ಇಡಲಿ’ ಎಂದು ಇಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನಗಳಿಗೆ ಪ್ರತಿಕ್ರಿಯಿಸಿದರು.
ಮಾಜಿ ಸಂಸದ ಪ್ರತಾಪ ಸಿಂಹ ಸಹಮತ ವ್ಯಕ್ತಪಡಿಸಿರುವ ಕುರಿತ ಪ್ರಶ್ನೆಗೆ, ‘ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಹಕ್ಕಿದೆ. ಸಿದ್ದರಾಮಯ್ಯ ಅವರ ಕೆಲಸವನ್ನು ಪ್ರತಾಪ ಸಿಂಹ ಮೆಚ್ಚಿರಬಹುದು’ ಎಂದರು.
ಲಕ್ಷ್ಮೀ ಹೆಬ್ಬಾಳಕರ ಕುರಿತು ಸಿ.ಟಿ.ರವಿ ಮಾತನಾಡಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ‘ಯಾರು ಏನು ಹೇಳಿದರು ಎಂಬುದನ್ನು ಸಭಾಪತಿ ತೀರ್ಮಾನಿಸಬೇಕು. ಆದರೆ ಆ ರೀತಿಯ ಪದಬಳಕೆ ಆಗಿಲ್ಲ ಎಂದು ಸಭಾಪತಿ ಹೇಳಿದ್ದಾರೆ. ಕಾನೂನು ಮೀರಿ ರವಿ ಅವರನ್ನು ಬಂಧಿಲಾಗಿತ್ತು. ಕಾನೂನು ಕೈಗೆತ್ತಿಕೊಂಡಿದ್ದನ್ನು ಖಂಡಿಸಲಾಗುತ್ತಿದೆ. ರಾಜ್ಯ ಸರ್ಕಾರದ ಪ್ರಭಾವ ಇಲ್ಲದ ಸಂಸ್ಥೆಯಿಂದ ತನಿಖೆ ಮಾಡಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.