ಬಂಗಾರಪೇಟೆ: ತಾಲ್ಲೂಕಿನಲ್ಲಿನ ಪ್ರಮುಖ ತೋಟಗಾರಿಕೆ ಬೆಳೆ ಆಲೂಗಡ್ಡೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ತಾಲ್ಲೂಕಿನಲ್ಲಿ ಆಲೂಗಡ್ಡೆಯನ್ನು ನೀರಾವರಿ ಬೆಳೆಯನ್ನಾಗಿ ಬೆಳೆಯಲಾಗುತ್ತದೆ. ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಆಲೂಗಡ್ಡೆಯನ್ನು ಹಿಂಗಾರು ಬೆಳೆಯಾಗಿ ಬೆಳೆಯಲಾಗುತ್ತದೆ. ಭೂಮಿಯಲ್ಲಿ ಉಷ್ಣಾಂಶ ಜಾಸ್ತಿ ಇದ್ದ ಸಮಯದಲ್ಲಿ ಬಿತ್ತನೆ ಮಾಡಿ ಕೊಳೆಯುವುದು ಜಾಸ್ತಿಯಾಗಿ, ಮೊಳಕೆ ಪ್ರಮಾಣ ಕಡಿಮೆಯಾಗುತ್ತದೆ.
ಬಹುತೇಕ ರೈತರು ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಿಂದ ಜನವರಿ ಅಂತ್ಯದವರೆಗೆ ಆಲೂಗಡ್ಡೆ ಬಿತ್ತನೆ ಮಾಡುತ್ತಾರೆ. ಈ ಬಾರಿ ರೈತರು ನೂರಾರು ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದ್ದಾರೆ. ಆದರೆ, ಡಿಸೆಂಬರ್ ತಿಂಗಳ ಮಧ್ಯ ಭಾಗದಲ್ಲಿ ಕಾಣಿಸಿಕೊಂಡ ಚಂಡಮಾರುತದಿಂದ ಬಿತ್ತನೆ ಮಾಡಿದ್ದ ಆಲೂಗಡ್ಡೆ ಬೆಳೆಯಲ್ಲಿ ನೀರು ನಿಂತು ಕೊಳೆಯಲು ಆರಂಭಿಸಿತು. ಇದರಿಂದ ಆಲೂಗಡ್ಡೆ ಬೆಳೆಗಾರರಿಗೆ ತೀವ್ರ ಆರ್ಥಿಕ ನಷ್ಟವಾಗಿದೆ. ಅಲ್ಲದೆ ಜಡಿಮಳೆಯಿಂದ ಭೂಮಿಯಲ್ಲಿ ಅತಿಯಾದ ತೇವಾಂಶ ಉಂಟಾಗಿದ್ದರಿಂದ ರೈತರು ಆಲೂಗಡ್ಡೆ ಬಿತ್ತನೆಯನ್ನು ಮುಂದೂಡಿದ್ದರು.
ಕೆಲವು ಕಡೆ ಈಗಲೂ ಬಿತ್ತನೆ ನಡೆಯುತ್ತಿದ್ದರೆ, ಮತ್ತೆ ಕೆಲವು ಕಡೆ ಬೆಳೆ ಕೊಯ್ಲು ಹಂತ ತಲುಪಿದೆ. ನಿರಂತರ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ಹೂವು ಬಿಡುವ ಮುನ್ನವೇ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ವ್ಯಾಪಿಸಿದೆ.
ಹವಾಗುಣ: ಆಲೂಗಡ್ಡೆ ತಂಪು ವಾತಾವರಣ ಬಯಸುವ ಬೆಳೆಯಾಗಿದ್ದು, ಗಡ್ಡೆ ಬೆಳವಣಿಗೆ ಸಮಯದಲ್ಲಿ ರಾತ್ರಿ ಉಷ್ಣಾಂಶ 20° ಸೆಲ್ಸಿಯಸ್‌ಕ್ಕಿಂತ ಕಡಿಮೆ ಇದ್ದರೆ ಗಡ್ಡೆಗಳು ಚೆನ್ನಾಗಿ ಕಟ್ಟುತ್ತವೆ. ಈ ಹಂತದಲ್ಲಿ ಉಷ್ಣಾಂಶ 30° ಸೆಲ್ಸಿಯಸ್‌ಕ್ಕಿಂತ ಜಾಸ್ತಿ ಇದ್ದಲ್ಲಿ ಗಡ್ಡೆಯ ಬೆಳವಣಿಗೆ ಸಂಪೂರ್ಣ ನಿಂತು ಹೋಗುತ್ತದೆ. ಜೊತೆಗೆ ಆಲೂಗಡ್ಡೆಯ ಬೆಳವಣಿಗೆ ಹಂತದಲ್ಲಿ ದೀರ್ಘಾವಧಿ ಹಗಲು ಮತ್ತು ಗಡ್ಡೆಯಾಗುವ ಹಂತದಲ್ಲಿ ಅಲ್ಪಾವಧಿ ಹಗಲು ಇದ್ದರೆ ಹೆಚ್ಚು ಇಳುವರಿ ಪಡೆಯಬಹುದು ಎನ್ನುತ್ತಾರೆ ರೈತರು.
2023 ಸಾಲಿನಲ್ಲಿನ 509.78 ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬೆಳೆ ಬೆಳೆದಿದ್ದು, ಈ ವರ್ಷದಲ್ಲೂ 500 ಹೆಕ್ಟೇರ್‌ನಲ್ಲಿ ಬೆಳೆಯುವ ನಿರೀಕ್ಷೆ ಹೊಂದಿದ್ದೇವೆ. ಅಂಗಮಾರಿ ರೋಗ ನಿಯಂತ್ರಣಕ್ಕೆ ಬಿತ್ತಿದ 20–25 ದಿನಗಳವರೆಗೆ ಒಂದು ಲೀಟರ್ ನೀರಿಗೆ 3 ಗ್ರಾಂ.ನಷ್ಟು ಮ್ಯಾಂಕೋಜಿಬ್ ದ್ರಾವಣವನ್ನು ಗಿಡದ ಎಲ್ಲ ಭಾಗಗಳಿಗೆ ತಲುಪುವಂತೆ ಸಿಂಪಡಿಸಬೇಕು. 35–40 ದಿನಗಳ ನಂತರ 1 ಲೀಟರ್ ನೀರಿಗೆ 3 ಗ್ರಾಂ ಮ್ಯಾಂಕೋಜಿಬ್ ಮತ್ತು 1 ಮಿ.ಲೀ ಪ್ರಾಪರ್ಗೈಟ್ (ಓಮೈಟ್) ಅಥವಾ ಫೆನ್‌ಜಾಕ್ಟಿನ್ ದ್ರಾವಣವನ್ನು ಗಿಡದ ಎಲ್ಲ ಭಾಗಗಳಿಗೆ ಸಿಂಪಡಿಸಬೇಕು. 55–60 ದಿನಗಳ ಬಳಿಕ ಒಂದು ಲೀಟರ್ ನೀರಿಗೆ 2.5 ಗ್ರಾಂ ಸೈಮೊಕ್ಷಾನಿಲ್ ಮತ್ತು ಕ್ಯಾಂಕೋಹಬ್ ದ್ರಾವಣವನ್ನು ಗಿಡದ ಎಲ್ಲ ಭಾಗಗಳಿಗೆ ತಲುಪುವಂತೆ ಸಿಂಪಡಿಸುವುದು ಉತ್ತಮ ಎಂದು ತೋಟಗಾರಿಕೆ ಸಹಾಯಕ ಅಧಿಕಾರಿ ನವೀನ ಕುಮಾರಿ ತಿಳಿಸಿದರು.
ಈ ವರ್ಷ ಡಿಸೆಂಬರ್‌ನಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಆಲೂಗಡ್ಡೆ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿದ್ದು, ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ಸೊಣ್ಣೇನಹಳ್ಳಿ ಗ್ರಾಮದ ಆಲೂಗಡ್ಡೆ ಬೆಳೆಗಾರ ಶಶಿಧರ್ ರೆಡ್ಡಿ ಪುತ್ರ ತಿಳಿಸಿದ್ದಾರೆ.
ಕಳೆದ ವರ್ಷದಂತೆ ಈ ಬಾರಿ ಇಳುವರಿ ಇಲ್ಲದ ಕಾರಣ ಆಲೂಗಡ್ಡೆ ಬೆಳೆಗಾರರಿಗೆ ನಷ್ಟ ಉಂಟಾಗಿದೆ. ಹೀಗಾಗಿ, ಸರ್ಕಾರ ರೈತರಿಗೆ ನಷ್ಟ ಪರಿಹಾರ ನೀಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಒತ್ತಾಯಿಸಿದರು.
ಈ ವರ್ಷ ಅಕಾಲಿಕ ತುಂತುರು ಮಳೆಯಿಂದ ಅಂಗ ಮಾರಿ ರೋಗವು ಕಂಡುಬಂದಿದೆ. ಇಳುವರಿ ಕಡಿಮೆಯಾಗಿದ್ದರಿಂದ ರೈತರಿಗೆ ನಷ್ಟವಾಗಿದ್ದು, ನಷ್ಟ ಪರಿಹಾರ ನೀಡಲು ಮೇಲಿನ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಾರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.