ADVERTISEMENT

ಕೋಲಾರ: ಮಾಂಸಪ್ರಿಯರಿಗೆ ಬೆಲೆ ಏರಿಕೆ ಬಿಸಿ

ಗಗನಕ್ಕೇರಿದ ಕೋಳಿ ಬೆಲೆ–ಕುಕ್ಕುಟ ಉದ್ಯಮಿಗಳ ಮೊಗದಲ್ಲಿ ಸಂತಸ

ಜೆ.ಆರ್.ಗಿರೀಶ್
Published 9 ಮಾರ್ಚ್ 2021, 19:30 IST
Last Updated 9 ಮಾರ್ಚ್ 2021, 19:30 IST
ಕೋಳಿ–ಸಾಂದರ್ಭಿಕ ಚಿತ್ರ
ಕೋಳಿ–ಸಾಂದರ್ಭಿಕ ಚಿತ್ರ   

ಕೋಲಾರ: ಹಕ್ಕಿ ಜ್ವರದ ಭೀತಿ ಕಾರಣಕ್ಕೆ ಪಾತಾಳಕ್ಕೆ ಕುಸಿದಿದ್ದ ಕೋಳಿ ಮಾಂಸದ ಬೆಲೆ ಏಕಾಏಕಿ ಗಗನಕ್ಕೇರಿದ್ದು, ಮಾಂಸಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಜಿಲ್ಲೆಯಲ್ಲಿ 611 ನೊಂದಾಯಿತ ಕೋಳಿ ಫಾರಂಗಳಿದ್ದು, ಬ್ರಾಯ್ಲರ್‌ (ಮಾಂಸದ ಉದ್ದೇಶದ್ದು) ಮತ್ತು ಲೇಯರ್‌ (ಮೊಟ್ಟೆಯ ಉದ್ದೇಶದ್ದು) ಕೋಳಿಗಳನ್ನು ಪ್ರಮುಖವಾಗಿ ಸಾಕಲಾಗುತ್ತಿದೆ. ಜಿಲ್ಲೆಯ ಫಾರಂಗಳಲ್ಲಿ ಸುಮಾರು 20 ಲಕ್ಷ ಬ್ರಾಯ್ಲರ್‌ ಕೋಳಿ ಹಾಗೂ 36 ಲಕ್ಷ ಲೇಯರ್‌ ಕೋಳಿಗಳಿವೆ. ಕೆಲವೆಡೆ ಅಲ್ಪ ಪ್ರಮಾಣದಲ್ಲಿ ನಾಟಿ ಕೋಳಿ, ಗಿರಿರಾಜ ಕೋಳಿಗಳನ್ನು ಸಾಕಲಾಗಿದೆ.

ಜಿಲ್ಲೆಯ ಬೇಡಿಕೆಗೆ ಹೋಲಿಸಿದರೆ ಕೋಳಿ ಮೊಟ್ಟೆ ಮತ್ತು ಮಾಂಸದ ಉತ್ಪಾದನೆ ಕಡಿಮೆಯಿದೆ. ಹೀಗಾಗಿ ತಮಿಳುನಾಡಿನ ನಾಮಕ್ಕಲ್‌, ಕರೂರು, ಕೃಷ್ಣಗಿರಿ ಮತ್ತು ಆಂಧ್ರಪ್ರದೇಶದಿಂದ ಜಿಲ್ಲೆಗೆ ಮೊಟ್ಟೆ ಮತ್ತು ಮಾಂಸ ಆಮದು ಮಾಡಿಕೊಳ್ಳಲಾಗುತ್ತಿತ್ತು.

ADVERTISEMENT

ದೇಶದ ಹಲವೆಡೆ ಜನವರಿ ತಿಂಗಳಲ್ಲಿ ಹಕ್ಕಿ ಜ್ವರ (ಕೋಳಿ ಶೀತ ಜ್ವರ) ಕಾಣಿಸಿಕೊಂಡಿತ್ತು. ಹಕ್ಕಿ ಜ್ವರದ ಭೀತಿ ಕಾರಣಕ್ಕೆ ಮೊಟ್ಟೆ ಹಾಗೂ ಮಾಂಸಪ್ರಿಯರು ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಗೆ ಹಿಂದೇಟು ಹಾಕಿದ್ದರಿಂದ ವಹಿವಾಟು ಗಣನೀಯವಾಗಿ ಕುಸಿದಿತ್ತು. ಮಾರುಕಟ್ಟೆಯಲ್ಲಿ ಕೋಳಿ ಮತ್ತು ಮೊಟ್ಟೆ ಕೇಳುವವರೇ ಇಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ಹೀಗಾಗಿ ಕೋಳಿ ಮತ್ತು ಮೊಟ್ಟೆ ಬೆಲೆ ಇಳಿಕೆಯಾಗಿತ್ತು.

ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ ತಮಿಳುನಾಡು ಹಾಗೂ ಆಂಧ್ರಪ್ರದೇಶ ಭಾಗದ ಪೌಲ್ಟ್ರಿ ಮಾಲೀಕರು ನಷ್ಟದಿಂದ ಪಾರಾಗಲು ಕೋಳಿಗಳನ್ನು ಗುಂಡಿಗಳಲ್ಲಿ ಜೀವಂತ ಸಮಾಧಿ ಮಾಡಿದ್ದರು. ನಷ್ಟದ ಕಾರಣಕ್ಕೆ ಪೌಲ್ಟ್ರಿ ಮಾಲೀಕರು ಮೇವು ಕೊಡದಿದ್ದರಿಂದ ಕೋಳಿಗಳು ಜೀವನ್ಮರಣ ಹೋರಾಟ ನಡೆಸಿ ಹಸಿವಿನಿಂದ ಮೃತಪಟ್ಟಿದ್ದವು.

ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಸದ್ಯ ಕೋಳಿ ಹಾಗೂ ಮೊಟ್ಟೆ ಉತ್ಪಾದನೆ ಕಡಿಮೆಯಿದೆ. ಹೀಗಾಗಿ ಜಿಲ್ಲೆಯಿಂದ ಆ ರಾಜ್ಯಗಳಿಗೆ ಕೋಳಿ ಮತ್ತು ಮೊಟ್ಟೆ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತಿದೆ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಕೋಳಿ ಮತ್ತು ಮೊಟ್ಟೆ ಲಭ್ಯತೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿದೆ.

ಬೆಲೆ ಚೇತರಿಕೆ: ಭಾನುವಾರದಿಂದ (ಮಾರ್ಚ್‌ 7) ಕೋಳಿ ಮಾಂಸದ ಬೆಲೆ ಚೇತರಿಕೆ ಕಂಡಿದೆ. 2 ದಿನದಿದ ಏರುತ್ತಲೇ ಸಾಗಿರುವ ಬೆಲೆಯು ಕುಕ್ಕುಟ ಉದ್ಯಮಿಗಳ ಮೊಗದಲ್ಲಿ ಸಂತಸ ಮೂಡಿಸಿದೆ. ಆದರೆ, ಮಾಂಸಪ್ರಿಯರಿಗೆ ದರ ಏರಿಕೆಯು ನಿರಾಸೆ ಮೂಡಿಸಿದೆ.

ಮಾರ್ಚ್‌ 7ರಂದು ಸ್ಥಳೀಯ ಮಾರುಕಟ್ಟೆಯಲ್ಲಿ ಚಿಕ್ಕ ಬ್ರಾಯ್ಲರ್‌ ಕೋಳಿ ಮಾಂಸದ ಬೆಲೆ ಕೆ.ಜಿಗೆ ₹ 160 ಮತ್ತು ದೊಡ್ಡ ಬ್ರಾಯ್ಲರ್‌ ಕೋಳಿ ಮಾಂಸದ ಬೆಲೆ ₹ 170 ಇತ್ತು. ಇದೀಗ ಮಂಗಳವಾರ ಚಿಕ್ಕ ಬ್ರಾಯ್ಲರ್‌ ಮಾಂಸದ ಬೆಲೆ ₹ 210ಕ್ಕೆ ಮತ್ತು ದೊಡ್ಡ ಬ್ರಾಯ್ಲರ್‌ ಕೋಳಿ ಮಾಂಸದ ಬೆಲೆ ₹ 220ಕ್ಕೆ ಜಿಗಿದಿದೆ. ಎರಡು ದಿನದ ಅಂತರದಲ್ಲಿ ಕೆ.ಜಿಗೆ ₹ 50 ಏರಿಕೆಯಾಗಿದೆ. ಆದರೆ, ಮೊಟ್ಟೆ ಬೆಲೆ ಸ್ಥಿರವಾಗಿದೆ.

ತೈಲೋತ್ಪನ್ನಗಳ ಬೆಲೆ ಹೆಚ್ಚಳದಿಂದ ಕೋಳಿ ಮತ್ತು ಮೊಟ್ಟೆ ಸಾಗಣೆ ವೆಚ್ಚ ಏರಿಕೆಯಾಗಿದೆ. ಸಾಗಣೆ ವೆಚ್ಚ ಮತ್ತು ರಫ್ತು ಹೆಚ್ಚಳಕ್ಕೆ ಅನುಗುಣವಾಗಿ ಕೋಳಿ ಮಾಂಸದ ಬೆಲೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.