ADVERTISEMENT

ಈ ಪ್ರೇಮಿಗಳ ಅಂತರ್ಜಾತಿ ವಿವಾಹಕ್ಕೆ ಮೂರೂವರೆ ವರ್ಷ, ಬದುಕಲ್ಲಿ ಸದಾ ಹರ್ಷ

ಪ್ರೀತಿ ಇರೋದು ಹೃದಯದಲ್ಲಿ; ಜಾತಿಯಲ್ಲಲ್ಲ!

ಕೆ.ಓಂಕಾರ ಮೂರ್ತಿ
Published 14 ಫೆಬ್ರುವರಿ 2026, 8:11 IST
Last Updated 14 ಫೆಬ್ರುವರಿ 2026, 8:11 IST
ಒಲವೇ ನಮ್ಮ ಬದುಕು… ಮಧುಸೂದನ್‌ ಹಾಗೂ ರೇಣುಕಾ ದಂಪತಿ
ಒಲವೇ ನಮ್ಮ ಬದುಕು… ಮಧುಸೂದನ್‌ ಹಾಗೂ ರೇಣುಕಾ ದಂಪತಿ   

ಕೋಲಾರ: ಮನೆಯವರ ವಿರೋಧದ ನಡುವೆ ಪ್ರೀತಿಗಂಟಿಕೊಂಡು, ಮದುವೆಯಾಗಿ ಮೂರೂವರೆ ವರ್ಷ ಬದುಕು ಸವೆಸಿರುವ ಈ ಜೋಡಿಗೆ ಈಗ ಮುದ್ದಾದ ಕೂಸು ಜನಿಸಿದೆ. ಆ ಕೂಸು ಈಗ ಕುಟುಂಬವನ್ನೂ ಒಂದುಗೂಡಿಸಿದೆ.

ಅಂದಹಾಗೆ, ಕೋಲಾರ ತಾಲ್ಲೂಕಿನ ಮೂರಂಡಹಳ್ಳಿಯ ಎಂ.ರೇಣುಕಾ ದಲಿತ ಸಮುದಾಯವರು. ತಮಿಳುನಾಡು ಮೂಲದ, ಈಗ ಬೆಂಗಳೂರಿನಲ್ಲಿ ನೆಲೆಸಿರುವ ವಿಶ್ವಕರ್ಮ ಸಮುದಾಯದ ಪಿ.ಮಧುಸೂದನ್‌ ಅವರನ್ನು ಪ್ರೀತಿಸಿ, ವಿವಾಹವಾಗಿದ್ದಾರೆ.

ದೈಹಿಕವಾಗಿ ಇವರು ಕುಬ್ಜರಾಗಿದ್ದರೂ ಮಾನಸಿಕವಾಗಿ ಹಲವು ಸವಾಲುಗಳನ್ನು ಮೆಟ್ಟಿ ನಿಂತು ಗಟ್ಟಿಗರಾಗಿದ್ದಾರೆ. ಪ್ರೇಮಿಗಳ ದಿನದ (ವ್ಯಾಲೆಂಟೀನ್ಸ್‌ ಡೇ) ಪ್ರಯುಕ್ತ ಇವರಿಬ್ಬರು ತಮ್ಮ ಮೊದಲ ಭೇಟಿ, ಮೊದಲ ಪ್ರೇಮ ನಿವೇದನೆ ಹಾಗೂ ಮದುವೆ ವಿಚಾರವನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

ADVERTISEMENT

‘ನಾನು ಬೆಂಗಳೂರಿನಲ್ಲಿ ಅಕ್ಕನ ಮನೆಯಲ್ಲಿದ್ದೆ. ಅಂಗವಿಕಲರ (ಕುಬ್ಜರು) ತಂಡದ ಮೂಲಕ ಮಧುಸೂದನ್‌ ಅವರ ಪರಿಚಯವಾಯಿತು. ಫೇಸ್‌ಬುಕ್‌ ಮೂಲಕ ಆಗಾಗ್ಗೆ ಸಂಪರ್ಕಿಸುತ್ತಿದ್ದೆವು. ಆ ಪರಿಚಯ ಪ್ರೀತಿಗೆ ತಿರುಗಿತು. ನಂತರ ನಾನೇ ಪ್ರೇಮ ನಿವೇದನೆ ಮಾಡಿಕೊಂಡೆ. ಅವರು ಸ್ವಲ್ಪ ಸಮಯ ತೆಗೆದುಕೊಂಡು ಒಪ್ಪಿಗೆ ಸೂಚಿಸಿದರು. ಸುಮಾರು ಎರಡು ವರ್ಷಗಳ ಪ್ರೀತಿಯ ಬಳಿಕ ಮದುವೆಯಾದೆವು’ ಎನ್ನುತ್ತಾರೆ ರೇಣುಕಾ.

ಈ ಜೋಡಿ ಸದ್ಯ ಬೆಂಗಳೂರಿನ ಪದ್ಮನಾಭನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದೆ. ಪಿಯುಸಿ ಓದಿರುವ ಮಧುಸೂದನ್‌ ಕದಿರೇನಹಳ್ಳಿಯಲ್ಲಿ ಕಾರ್‌ ಸರ್ವಿಸ್‌ ಸೆಂಟರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಓದಿರುವ ರೇಣುಕಾ ಅವರಿಗೆ ಎರಡು ತಿಂಗಳ ಹಿಂದೆ ಹೆಣ್ಣು ಮಗು ಜನಿಸಿದ್ದು, ಆರೈಕೆಯಲ್ಲಿ ತೊಡಗಿದ್ದಾರೆ.

‘ನಮ್ಮ ಪ್ರೇಮದ ವಿಚಾರ ಮನೆಯವರಿಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ವಿರೋಧ ವ್ಯಕ್ತವಾಯಿತು. ನಾನು ಮನಪೂರ್ವಕವಾಗಿ ಇಷ್ಟಪಟ್ಟಿದ್ದೆ. ಹೀಗಾಗಿ, ಮಧುಸೂದನ್‌ ಅವರನ್ನೇ ಮದುವೆಯಾಗಿ ಬೆಂಗಳೂರು ಸೇರಿಕೊಂಡೆ. ಅವರ ಮನೆಯಲ್ಲಿ ವಿರೋಧವಿರಲಿಲ್ಲ. ಈ ಮೊದಲು ಗಂಡು ಮಗು ಜನಿಸಿತ್ತು. ಅನಾರೋಗ್ಯ ಸಮಸ್ಯೆ ಉಂಟಾಗಿ ತೀರಿ ಹೋಯಿತು. ಈಗ ಹೆಣ್ಣು ಮಗು ಜನಿಸಿದ್ದು, ಆರೋಗ್ಯವಾಗಿದೆ. ನಮ್ಮ ಕುಟುಂಬದವರು ಕೂಡ ನಮ್ಮನ್ನು ಮಾತನಾಡಿಸುತ್ತಿದ್ದು, ಖುಷಿ ತಂದಿದೆ. ಮುಂದೆ ಕೋಲಾರಕ್ಕೆ ಬಂದು ನೆಲೆಸಬೇಕು ಎಂಬ ಆಲೋಚನೆ ಇದೆ’ ಎಂದರು.

ಪತಿಗೆ ಕೆಲಸ ಕೊಡಿ: ‘ಪ್ರೀತಿಗೆ ಯಾರೂ ಅಡ್ಡಿಪಡಿಸಬಾರದು. ನಾವಿಬ್ಬರೂ ಕುಬ್ಜರಾಗಿದ್ದು, ಹಲವು ಸವಾಲು ದಾಟಿ ಬಂದಿದ್ದೇವೆ. ಹಲವು ನಮ್ಮನ್ನು ಹೀಯಾಳಿಸಿದ್ದಾರೆ. ಈಗಲೂ ದುಡಿಮೆಗೆ ನಮಗೆ ಸರಿಯಾದ ಆಧಾರವಿಲ್ಲ. ಹೀಗಾಗಿ, ಪತಿಗೆ ಸರ್ಕಾರ ಏನಾದರೂ ಕೆಲಸ ಕಲ್ಪಿಸಬೇಕು. ತ್ರಿಚಕ್ರ ವಾಹನ ಕೊಡಬೇಕು’ ಎಂದು ಅವರು ಮನವಿ ಮಾಡಿದರು.

ಬದುಕು ಖುಷಿಖುಷಿ: ‘ರೇಣುಕಾ ನನ್ನ ಮೇಲೆ ತುಂಬಾ ಪ್ರೀತಿ, ಕಾಳಜಿ ತೋರುತ್ತಾಳೆ. ಖುಷಿಖುಷಿಯಾಗಿ ಬದುಕು ಸಾಗಿಸುತ್ತಿದ್ದೇವೆ. ಮಗುವಿನ ಪ್ರವೇಶ ಮತ್ತಷ್ಟು ಖುಷಿ ಹೆಚ್ಚಿಸಿದೆ. ಸಮಾಜದಲ್ಲಿ ನಮಗಿಂತ ಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದಾರೆ. ದೇವರು ನಮಗೆ ಇಷ್ಟಾದರೂ ಸೌಲಭ್ಯ ಕೊಟ್ಟಿದ್ದಾನೆ. ನಮಗಿಂತ ಕಷ್ಟದಲ್ಲಿ ಹಲವು ಮಂದಿ ಇದ್ದಾರೆ’ ಎನ್ನುತ್ತಾರೆ ಮಧುಸೂದನ್‌.

ಈಚೆಗೆ ಕೋಲಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇವರಿಗೆ ಸರ್ಕಾರದಿಂದ ಪ್ರೋತ್ಸಾಹಧನವೂ ಲಭಿಸಿತು. ಅಂತರ್ಜಾತಿ ಮದುವೆ ಆಗಿರುವ ಕಾರಣ ₹3 ಲಕ್ಷ ನೀಡಲಾಯಿತು. ಪರಿಶಿಷ್ಟ ಜಾತಿಯ ಮಹಿಳೆಯನ್ನು ಬೇರೆ ಜಾತಿಯ ಪುರುಷ ವಿವಾಹವಾದರೆ ಈ ಸೌಲಭ್ಯ ಸಿಗುತ್ತದೆ.

ಅದೇನೇ ಇರಲಿ; ಪ್ರೀತಿಗೆ ಜಾತಿ, ಧರ್ಮ, ದೇಹದ ಆಕಾರ ಮುಖ್ಯವಲ್ಲ ಎಂಬುದಕ್ಕೆ ಮಧುಸೂದನ್‌ ಹಾಗೂ ರೇಣುಕಾ ಅವರ ಪ್ರೇಮ ಪ್ರಕರಣವೇ ಸಾಕ್ಷಿ. ಪ್ರೇಮ ಎಲ್ಲಾ ತಡೆಗಳನ್ನು ಮೀರಿಸಿ ಎಲ್ಲರನ್ನೂ ಒಂದುಗೂಡಿಸಬಲ್ಲದು ಎಂಬುದನ್ನೂ ಇವರು ನಿರೂಪಿಸಿದ್ದಾರೆ.

ಅಂಗವಿಕಲರ ಗ್ರೂಪ್‌ವೊಂದರ ಮೂಲಕ ರೇಣುಕಾ ಪರಿಚಿತಳಾದಳು. ನಂತರ ಪ್ರೇಮಕ್ಕೆ ತಿರುಗಿತು. ಅವಳೇ ಮೊದಲ ನನಗೆ ಪ್ರೇಮ ನಿವೇದನೆ ಮಾಡಿದಳು. ನಾನೂ ಒಪ್ಪಿದೆ ಮದುವೆ ಆಗಿ ಮಗುವಿದೆ
ಪಿ.ಮಧುಸೂದನ್‌
ಜಾತಿ ಧರ್ಮ ಮನುಷ್ಯರ ಸೃಷ್ಟಿ. ಹೆಣ್ಣು ಹಾಗೂ ಗಂಡು ಎಂಬುದು ಮಾತ್ರ ನಿಜ. ಮನಸ್ಸು ಹೃದಯ ಚೆನ್ನಾಗಿದ್ದರೆ ಪ್ರೀತಿ ಗೆಲ್ಲುತ್ತದೆ. ನಾವಿಬ್ಬರೂ ಈಗ ಅನೋನ್ಯವಾಗಿ ಬದುಕು ಸಾಗಿಸುತ್ತಿದ್ದೇವೆ
ಎಂ.ರೇಣುಕಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.