ADVERTISEMENT

ನನ್ನ ನಿರ್ಧಾರ ಪ್ರಶ್ನಿಸುವ ಹಕ್ಕು ಜೆಡಿಎಸ್‌ಗಿಲ್ಲ: ಶಾಸಕ ಶ್ರೀನಿವಾಸಗೌಡ

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 10:11 IST
Last Updated 11 ಜೂನ್ 2022, 10:11 IST
ಶಾಸಕ ಶ್ರೀನಿವಾಸಗೌಡ
ಶಾಸಕ ಶ್ರೀನಿವಾಸಗೌಡ   

ಕೋಲಾರ: 'ನನ್ನನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದ್ದು, ನಾನೀಗ ಆ ಪಕ್ಷದಲ್ಲಿ ಇಲ್ಲ. ನನ್ನ ಬಗ್ಗೆ ಮಾತನಾಡಲು ಆ ಪಕ್ಷದವರಿಗೆ ಯಾವುದೇ ಹಕ್ಕು ಇಲ್ಲ' ಎಂದು ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ವಾಗ್ದಾಳಿ ನಡೆಸಿದರು.

'ಏಳು ತಿಂಗಳ ಹಿಂದೆಯೇ ನನ್ನನ್ನು ಉಚ್ಚಾಟನೆ ಮಾಡಿರುವುದಾಗಿ ದೇವೇಗೌಡರ ಮೊಮ್ಮಗ, ಸಂಸದ ಪ್ರಜ್ವಲ್ ರೇವಣ್ಣ ಕೂಡ ಹೇಳಿದ್ದಾರೆ. ಹೀಗಾಗಿ, ನಾನು ಯಾವುದೇ ಪಕ್ಷಕ್ಕೆ ಹೋಗಬಹುದು. ರಾಜ್ಯಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ಗೆ ಮತ ನೀಡಿದ್ದು ನಿಜ. ಅದನ್ನು ಪ್ರಶ್ನಿಸಲು ಅವರು ಯಾರು?' ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

‘ಕುಮಾರಸ್ವಾಮಿ ಸರ್ವಾಧಿಕಾರಿ ಧೋರಣೆ ಉಳ್ಳವರು. ಅವರ ವರ್ತನೆ ಸರಿ ಇಲ್ಲ. 2018ರಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದಾಗ ಉದ್ದೇಶಪೂರ್ವಕವಾಗಿ ನನಗೆ ಮಂತ್ರಿ ಸ್ಥಾನ ನೀಡಲಿಲ್ಲ. ರಾಜಕೀಯದಲ್ಲಿ ನಾನು ಕುಮಾರಸ್ವಾಮಿ ಅವರಿಗಿಂತ ಹಿರಿಯ’ ಎಂದರು.

ADVERTISEMENT

‘2018ರ ಚುನಾವಣೆಯಲ್ಲಿ ಜನರು ನನಗೆ ಮತ ನೀಡಿ ಗೆಲ್ಲಿಸಿದ್ದಾರೆ. ನನ್ನ ಗೆಲುವಿನಲ್ಲಿ ಕಾಂಗ್ರೆಸ್‌ನ ರಮೇಶ್‌ ಕುಮಾರ್‌ ಪಾತ್ರವೂ ಇದೆ. ಜೆಡಿಎಸ್‌ನವರು ₹ 10 ಕೂಡ ನೀಡಿಲ್ಲ. ಯಾರೂ ಸಿಗಲಿಲ್ಲವೆಂದು ನನಗೆ ‘ಬಿ’ ಫಾರಂ ನೀಡಿದ್ದರು ಅಷ್ಟೆ’ ಎಂದು ವಾಗ್ದಾಳಿ ನಡೆಸಿದರು.

‘ಧರಂಸಿಂಗ್‌ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್‌ ಪಕ್ಷ ನನ್ನನ್ನು ಮಂತ್ರಿ ಮಾಡಿತು. ಮುಂದಿನ ಚುನಾವಣೆಗೆ ಟಿಕೆಟ್‌ ಕೇಳಿದ್ದೇನೆ. ಟಿಕೆಟ್‌ ಕೊಡುವುದು ಕಾಂಗ್ರೆಸ್‌ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಸಿದ್ದರಾಮಯ್ಯ ಬಂದರೆ ಕ್ಷೇತ್ರ ಬಿಟ್ಟುಕೊಡುತ್ತೇನೆ’ ಎಂದು ಹೇಳಿದರು.

‘ನಾನು ಕೋಲಾರ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ. ನೀರಾವರಿ ಯೋಜನೆ ತಂದಿದ್ದೇನೆ, ಕೋಲಾರ ಬೆಟ್ಟಕ್ಕೆ ರಸ್ತೆ ಮಾಡಿಸಿದ್ದೇನೆ, ತಾಲ್ಲೂಕು ಕಚೇರಿ, ಕ್ರೀಡಾಂಗಣ ನಿರ್ಮಾಣಕ್ಕೆ ಕಾರಣನಾಗಿದ್ದೇನೆ. ಮುಂದೆ ರಿಂಗ್‌ ರಸ್ತೆ ನಿರ್ಮಿಸುವ ಯೋಜನೆ ಇದೆ’ ಎಂದರು.

‘ನನ್ನ ಮನೆ ಬಳಿ ಬಂದು ಪ್ರತಿಭಟನೆ ನಡೆಸಿದ ಜೆಡಿಎಸ್‌ ಮುಖಂಡರಿಗೆ ದೇವರು ಒಳ್ಳೆಯದು ಮಾಡಲಿ’ ಎಂದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.