ADVERTISEMENT

ಸಿದ್ದರಾಮಯ್ಯ ಸ್ಪರ್ಧಿಸುವ ಕೋಲಾರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ? ಹೆಚ್ಚಿದ ಗೊಂದಲ

ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಬಳಿಕ ಕಮಲ ಪಾಳಯದಲ್ಲಿ ಹೆಚ್ಚಿದ ಗೊಂದಲ

ಕೆ.ಓಂಕಾರ ಮೂರ್ತಿ
Published 25 ಫೆಬ್ರುವರಿ 2023, 11:44 IST
Last Updated 25 ಫೆಬ್ರುವರಿ 2023, 11:44 IST
ವರ್ತೂರು ಪ್ರಕಾಶ್‌ ಮತ್ತು ಓಂಶಕ್ತಿ ಛಲಪತಿ
ವರ್ತೂರು ಪ್ರಕಾಶ್‌ ಮತ್ತು ಓಂಶಕ್ತಿ ಛಲಪತಿ    

ಕೋಲಾರ: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆಯ ಬಳಿಕ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಾಳೆಯದಲ್ಲಿ ಗೊಂದಲ ಹೆಚ್ಚಿದ್ದು, ತೀರಾ ಈಚೆಗೆ ಹಲವು ಟಿಕೆಟ್‌ ಆಕಾಂಕ್ಷಿಗಳ ಹೆಸರು ಮುಂಚೂಣಿಗೆ ಬರುತ್ತಿದೆ.

ಮಾಜಿ ಸಚಿವ ವರ್ತೂರು ಆರ್‌. ಪ್ರಕಾಶ್‌, ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಕಳೆದ ಬಾರಿಯ ಸ್ಪರ್ಧಿ ಓಂಶಕ್ತಿ ಛಲಪತಿ, ವಿಧಾನ ಪರಿಷತ್‌ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ ಹಾಗೂ ಗುತ್ತಿಗೆದಾರ ಕೃಷ್ಣಾ ರೆಡ್ಡಿ ಹೆಸರು ಹರಿದಾಡುತ್ತಿದೆ.

ಈಚೆಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ ನಿವಾಸಕ್ಕೆ ತೆರಳಿ ಪಕ್ಷಕ್ಕೆ ಆಹ್ವಾನಿಸಿದ ಬಳಿಕ ಗೊಂದಲಕ್ಕೆ ತುಪ್ಪ ಸುರಿದಂತಾಗಿದೆ. ಪಕ್ಷ ಸೇರ್ಪಡೆಗೆ ಮುನ್ನವೇ ಕೃಷ್ಣಾರೆಡ್ಡಿ ಅವರನ್ನು ಕೋಲಾರದ ಬಿಜೆಪಿ ಅಭ್ಯರ್ಥಿ ಎಂಬಂತೆ ಬಿಂಬಿಸಲಾಗುತ್ತಿದೆ. ಎದುರಾಳಿ ಪಕ್ಷಗಳು ಈ ಸಂಬಂಧ ವ್ಯಂಗ್ಯಭರಿತ ಮಾತುಗಳಿಂದ ಚುಚ್ಚುತ್ತಿವೆ. ಹಾಲಿ ಶಾಸಕ ಕೆ. ಶ್ರೀನಿವಾಸಗೌಡ ಈ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ, ಈ ನಡೆ ಬಹಳ ಕುತೂಹಲಕ್ಕೆ ಕಾರಣವಾಗಿದೆ.

ADVERTISEMENT

ಕಳೆದ ತಿಂಗಳು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಜಿಲ್ಲೆಗೆ ಭೇಟಿ ನೀಡಿ ಪ್ರಮುಖರ ಸಭೆ ನಡೆಸಿದ ಸಂದರ್ಭದಲ್ಲಿ ಮುನಿರತ್ನ ಹೆಸರು ಮುಂಚೂಣಿಗೆ ಬಂದಿತ್ತು. ಇದಕ್ಕೆ ಇಂಬು ನೀಡುವಂತೆ ಸ್ವತಃ ಸಚಿವರು, ‘ಹೈಕಮಾಂಡ್‌ ಸೂಚಿಸಿದರೆ ಕೋಲಾರದಲ್ಲಿ ಸ್ಪರ್ಧಿಸಲು ಸಿದ್ಧ’ ಎನ್ನುತ್ತಿದ್ದಾರೆ.

ಇಷ್ಟಾಗಿಯೂ ಕ್ಷೇತ್ರದಲ್ಲಿ ಈಗಲೂ ತಾವೇ ಪ್ರಮುಖ ಟಿಕೆಟ್‌ ಆಕಾಂಕ್ಷಿ ಎಂಬುದಾಗಿ ವರ್ತೂರು ಪ್ರಕಾಶ್‌ ಬಿಂಬಿಸಿಕೊಳ್ಳುತ್ತಿದ್ದಾರೆ. ಅವರು ಕ್ಷೇತ್ರದಲ್ಲಿ ಸತತ ಎರಡು ಬಾರಿ ಪಕ್ಷೇತರರಾಗಿ ಗೆದ್ದವರು. ಒಮ್ಮೆ ಸಚಿವರಾಗಿ, ಮತ್ತೊಮ್ಮೆ ಒಳಚರಂಡಿ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಅವರಿಗೆ ಕಳೆದ ವರ್ಷ ಬಿಜೆಪಿ ಸೇರುವಾಗ ಪಕ್ಷದ ಪ್ರಮುಖರು ಟಿಕೆಟ್‌ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸೇರಿದಾಗಿನಿಂದ ಕ್ಷೇತ್ರದಲ್ಲಿ ಸುತ್ತಾಡುತ್ತಾ ಪ್ರಚಾರ ನಡೆಸುತ್ತಿದ್ದಾರೆ. ಸಮಾವೇಶ ಹಮ್ಮಿಕೊಂಡು ಶಕ್ತಿ ಪ್ರದರ್ಶಿಸುತ್ತಿದ್ದಾರೆ. ಪದೇಪದೇ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ‘ಯಾರಿಗೆ ಟಿಕೆಟ್‌ ಕೊಟ್ಟರೂ ಅವರ ಪರ ಕೆಲಸ ಮಾಡುವೆ’ ಎನ್ನುತ್ತಿದ್ದಾರೆ.

ಇದೆಲ್ಲದರ ನಡುವೆ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಓಂಶಕ್ತಿ ಛಲಪತಿ ಮತ್ತೊಮ್ಮೆ ಟಿಕೆಟ್‌ಗೆ ಕಸರತ್ತು ನಡೆಸಿದ್ದಾರೆ. ಈಚೆಗೆ ನರಸಾಪುರ ಬಳಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಏರ್ಪಡಿಸಿದ್ದರು. ಸ್ಥಳೀಯರಾಗಿರುವ ಅವರು ಓಂಶಕ್ತಿ ಛಲಪತಿ ಫೌಂಡೇಷನ್‌ ಹೆಸರಿನಲ್ಲಿ ಕೋವಿಡ್‌ ಕಾಲದಲ್ಲಿ ಕ್ಷೇತ್ರದ ಜನರಿಗೆ ಸಹಾಯ ಮಾಡಿದ್ದಾರೆ. ಅಲ್ಲದೆ, ಮೇಲ್ ಮರವತ್ತೂರು ಓಂಶಕ್ತಿ ದೇವಸ್ಥಾನಕ್ಕೆ ತೆರಳಲು ಕ್ಷೇತ್ರದ ಸಾವಿರಾರು ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದ್ದಾರೆ.

ಹೀಗಾಗಿ, ಹೈಕಮಾಂಡ್‌ ಒಲವು ಯಾರ ಕಡೆ ಇದೆ ಎಂಬ ಗೊಂದಲ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿದೆ. ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ, ಜೆಡಿಎಸ್‌ನಿಂದ ಸಿಎಂಆರ್‌ ಶ್ರೀನಾಥ್‌ ಹೆಸರು ಬಹುತೇಕ ಖಚಿತವಾಗಿದ್ದು, ಬಿಜೆಪಿಯಿಂದ ಅಭ್ಯರ್ಥಿ ಯಾರು ಎಂಬ ಕುತೂಹಲ ಕ್ಷೇತ್ರದ ಮತದಾರರಲ್ಲಿದೆ.

ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಘೋಷಿಸುವ ಮುನ್ನ ಕಾಂಗ್ರೆಸ್‌ ಗೊಂದಲದಲ್ಲಿ ಮುಳಗಿತ್ತು. ಬಿಜೆಪಿ ಹಾಗೂ ಜೆಡಿಎಸ್‌ ನಡುವೆಯೇ ಹಣಾಹಣಿ ಎಂಬ ವಾತಾವರಣ ನೆಲೆಸಿತ್ತು. ಅದರೀಗ ರಾಜಕೀಯ ಚಿತ್ರಣ ಬದಲಾಗಿದೆ.

ತೆರೆಮರೆಯಲ್ಲಿ ಓಂಶಕ್ತಿ ಕಸರತ್ತು

ಕೋಲಾರ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಓಂಶಕ್ತಿ ಛಲಪತಿ ಟಿಕೆಟ್‌ಗಾಗಿ ಮತ್ತೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಅವರು ಬಿ.ಎಲ್‌. ಸತೋಷ್‌, ಸಿ.ಟಿ. ರವಿ, ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಜೊತೆ ಸಂಪರ್ಕ ಹೊಂದಿದ್ದಾರೆ. ಸದ್ಯ ಅವರು ಚಿಂತಾಮಣಿ ಕ್ಷೇತ್ರದ ಬಿಜೆಪಿ ಉಸ್ತುವಾರಿ ಕೂಡ.

ಸ್ಪರ್ಧಿಸದಿರುವಂತೆ ಪ್ರಕಾಶ್‌ಗೆ ಒತ್ತಡ?

ಕೋಲಾರದಲ್ಲಿ ಸ್ಪರ್ಧಿಸದಿರುವಂತೆ ಕುರುಬ ಸಮುದಾಯದಿಂದಲೇ ವರ್ತೂರು ಪ್ರಕಾಶ್‌ ಅವರ ಮೇಲೆ ಒತ್ತಡ ಬರುತ್ತಿರುವುದು ಗೊತ್ತಾಗಿದೆ. ಆದರೆ, ಪ್ರಕಾಶ್‌ ಈ ವಿಚಾರ ಅಲ್ಲಗಳೆದಿದ್ದರು. ‘ಟಿಕೆಟ್‌ ಆಕಾಂಕ್ಷಿಯಾಗಿದ್ದು, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಹಲವಾರು ಬಾರಿ ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡದಂತೆ ಸಮುದಾಯದ ಪ್ರಮುಖ ಮುಖಂಡರು, ಸ್ವಾಮೀಜಿಗಳು ಮನವೊಲಿಸಲು ಪ್ರಯತ್ನಿಸುವ ಯತ್ನ ನಡೆಯುತ್ತಲೇ ಇದೆ.

ಓದಿ...

**

ಸಚಿವ ಡಾ.ಸುಧಾಕರ್‌ ನೇತೃತ್ವದಲ್ಲಿ ತೆರಳಿ ಗುತ್ತಿಗೆದಾರ ಕೃಷ್ಣಾರೆಡ್ಡಿ ಅವರಿಗೆ ಬಿಜೆಪಿಗೆ ಆಹ್ವಾನ ನೀಡಲಾಗಿದೆಯೇ ಹೊರತೂ ಟಿಕೆಟ್‌ ಕೊಡುವುದಾಗಿ ಹೇಳಿಲ್ಲ. ನಾನೂ ಸಚಿವರ ಜತೆಯಲ್ಲಿದ್ದೆ

– ವರ್ತೂರು ಪ್ರಕಾಶ್‌, ಬಿಜೆಪಿ ಟಿಕೆಟ್‌ ಆಕಾಂಕ್ಷಿ, ಕೋಲಾರ

ಕ್ಷೇತ್ರದ ಜನರ ಮಧ್ಯೆಯೇ ಇದ್ದು ಕೆಲಸ ಮಾಡುತ್ತಿದ್ದೇನೆ. ಟಿಕೆಟ್‌ಗೆ ನಾನೂ ಪ್ರಬಲ ಆಕಾಂಕ್ಷಿ. ತಳಮಟ್ಟದಿಂದ ಬಿಜೆಪಿ ಕಟ್ಟಿದ್ದೇನೆ. ಕೆಲವರು ಈಗ ಬಂದು ಪ್ರಚಾರದಲ್ಲಿ ತೊಡಗಿದ್ದಾರೆ

– ಓಂಶಕ್ತಿ ಛಲಪತಿ, ಬಿಜೆಪಿ ಟಿಕೆಟ್‌ ಆಕಾಂಕ್ಷಿ, ಕೋಲಾರ

ಬಿಜೆಪಿ ಸದೃಢವಾಗಿದ್ದು, ಹಲವಾರು ಆಕಾಂಕ್ಷಿಗಳಿದ್ದಾರೆ. ಹೊಸ ಅಭ್ಯರ್ಥಿ ಹುಡುಕುವ ಅವಶ್ಯವಿಲ್ಲ. ಗೆಲ್ಲುವ ಅಭ್ಯರ್ಥಿಗೆ ವರಿಷ್ಠರು ಟಿಕೆಟ್‌ ಘೋಷಿಸುತ್ತಾರೆ. ಯಾವುದೇ ಗೊಂದಲ ಇಲ್ಲ

–ಡಾ.ಕೆ.ಎನ್‌.ವೇಣುಗೋಪಾಲ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.