
ಕೋಲಾರ: ಕೋಲಾರದ ಎಪಿಎಂಸಿ ಮಾರುಕಟ್ಟೆಯ ಟೊಮೆಟೊ ಮಂಡಿಯಲ್ಲಿ ಕೆಲಸ ಮಾಡುವ ಶಿವಣ್ಣ ಅವರ ಪುತ್ರ ಎಸ್.ಬತ್ತೇಶ್ ಕರ್ನಾಟಕ ರಾಜ್ಯ ಸೀನಿಯರ್ ಪುರುಷರ ಬ್ಯಾಸ್ಕೆಟ್‌ಬಾಲ್ ತಂಡಕ್ಕೆ ಆಯ್ಕೆ ಆಗುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಬ್ಯಾಸ್ಕೆಟ್‌ಬಾಲ್‌ನಲ್ಲಿ ಹಿಂದೆಲ್ಲಾ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕೀರ್ತಿ ಬೆಳಗಿರುವ ಜಿಲ್ಲೆಯಿಂದ ಸುಮಾರು 15 ವರ್ಷಗಳಿಂದ ಯಾರೂ ಸೀನಿಯರ್ ತಂಡಕ್ಕೆ ಆಯ್ಕೆ ಆಗಿರಲಿಲ್ಲ. ಈಗ ಪ್ರತಿಭಾವಂತ ಆಟಗಾರ ಬತ್ತೇಶ್ ಆ ಹೆಮ್ಮೆಯ ಸಾಧನೆಗೆ ಕಾರಣರಾಗಿದ್ದಾರೆ.
ಜ.4ರಿಂದ 11ರವರೆಗೆ ಚೆನ್ನೈನಲ್ಲಿ ನಡೆಯಲಿರುವ 75ನೇ ಸೀನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಕಣಕ್ಕಿಳಿಯಲಿದ್ದಾರೆ. ಒಟ್ಟು 12 ಆಟಗಾರರ ತಂಡ ಈಗಾಗಲೇ ಪ್ರಯಾಣಿಸಿದ್ದು, ಅಭ್ಯಾಸದಲ್ಲಿ ತೊಡಗಿದೆ. ಈ ತಂಡಕ್ಕೆ ಅರವಿಂದ್ ನಾಯಕರಾಗಿದ್ದು, ತಂಗಚನ್ ಮುಖ್ಯ ಕೋಚ್ ಆಗಿದ್ದಾರೆ.
ನಗರ ಹೊರವಲಯದ ಕೊಂಡರಾಜನಹಳ್ಳಿಯ ಬತ್ತೇಶ್, ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿಯಲ್ಲಿ ಓದುತ್ತಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿರುವ ಕ್ರೀಡಾ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು, ತರಬೇತಿ ಪಡೆಯುತ್ತಿದ್ದಾರೆ.
‘ರಾಜ್ಯ ಸೀನಿಯರ್ ತಂಡದಲ್ಲಿ ಸ್ಥಾನ ಸಿಕ್ಕಿರುವುದಕ್ಕೆ ತುಂಬಾ ಖುಷಿ ಆಗುತ್ತಿದೆ. ಮುಂಬರುವ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಭರವಸೆ ಇದೆ. ನನ್ನ ಮೇಲೆ ಇಟ್ಟಿರುವ ನಿರೀಕ್ಷೆ ಉಳಿಸಿಕೊಳ್ಳುತ್ತೇನೆ’ ಎಂದು ಬತ್ತೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬ್ಯಾಸ್ಕೆಟ್‌ಬಾಲ್ ಆಟಕ್ಕೆ ಬೇಕಾದಂತೆ 6.7 ಅಡಿ ಎತ್ತರವಿರುವ ಅವರು ಕೋಲಾರದ ಕನಕ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡದಲ್ಲಿ ಆಡುತ್ತಾ ಹಂತಹಂತವಾಗಿ ಮೇಲೇರಿದ್ದಾರೆ. ಈಚೆಗೆ ಪಂಜಾಬ್‌ನ ಲೂದಿಯಾನದಲ್ಲಿ ನಡೆದ 18 ವರ್ಷದೊಳಗಿನವರ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
ಕೋಲಾರದ ಗ್ರೀನ್ ವ್ಯಾಲಿ ಪಬ್ಲಿಕ್ ಶಾಲೆಯಲ್ಲಿ ಓದಿರುವ ಅವರು ಕೋಚ್‌ಗಳಾದ ಬಾಲಕೃಷ್ಣ, ರಘು ಅವರ ಮಾರ್ಗದರ್ಶನದಲ್ಲಿ ಆಟದ ಕೌಶಲ ಹೆಚ್ಚಿಸಿಕೊಳ್ಳುತ್ತಿದ್ದಾರೆ. ನಿತ್ಯ ಐದಾರು ಗಂಟೆ ಅಭ್ಯಾಸ ನಡೆಸುತ್ತಾರೆ. ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟ ಸೇರಿದಂತೆ ರಾಜ್ಯಮಟ್ಟದ ಹಲವಾರು ಟೂರ್ನಿಗಳಲ್ಲಿ ಪಾಲ್ಗೊಂಡು ಟ್ರೋಫಿ ಜಯಿಸಿದ್ದಾರೆ.
ಮೊದಲ ಬಾರಿ ಕರ್ನಾಟಕ ರಾಜ್ಯ ಸೀನಿಯರ್ ಬ್ಯಾಸ್ಕೆಟ್‌ಬಾಲ್ ತಂಡದಲ್ಲಿ ಸ್ಥಾನ ಪಡೆದಿರುವುದು ತುಂಬಾ ಸಂತಸ ತಂದಿದೆ. ರಾಷ್ಟ್ರೀಯ ಸೀನಿಯರ್ ತಂಡದಲ್ಲಿ ಆಡಬೇಕೆಂಬುದು ನನ್ನ ಕನಸುಬತ್ತೇಶ್ ಬ್ಯಾಸ್ಕೆಟ್‌ಬಾಲ್ ಆಟಗಾರ ಕೋಲಾರ
15 ವರ್ಷಗಳ ಬಳಿಕ ಆಯ್ಕೆಯಾದ ಜಿಲ್ಲೆಯ ಆಟಗಾರ ಆಯ್ಕೆ ಕೊಂಡರಾಜನಹಳ್ಳಿ ಹುಡುಗ,
ಸದ್ಯ ಬೆಂಗಳೂರಿನ ಕ್ರೀಡಾ ಹಾಸ್ಟೆಲ್‌ನಲ್ಲಿ ವಾಸ್ತವ್ಯ
ಜ.4ರಿಂದ 11ರವರೆಗೆ ಚೆನ್ನೈನಲ್ಲಿ ನಡೆಯಲಿರುವ ಚಾಂಪಿಯನ್‌ಷಿಪ್
ನಮ್ಮ ಜಿಲ್ಲೆಯಿಂದ ಸುಮಾರು 15 ವರ್ಷಗಳ ಬಳಿಕ ರಾಜ್ಯ ಸೀನಿಯರ್ ತಂಡದಲ್ಲಿ ಸ್ಥಾನ ಪಡೆದ ಆಟಗಾರ ಬತ್ತೇಶ್. ಅವರು ನಮ್ಮ ಕ್ಲಬ್‌ನಲ್ಲಿ ಆಡಿದ್ದಾರೆ. ಉದಯೋನ್ಮುಖ ಆಟಗಾರಅಂಚೆ ಅಶ್ವಥ್ ಕನಕ ಬ್ಯಾಸ್ಕೆಟ್‌ಬಾಲ್ ಕ್ಲಬ್ ಕೋಲಾರ