ADVERTISEMENT

ಪಹಣಿಗೆ ಆಧಾರ್‌ ಜೋಡಣೆ–ಶೇ 17ರಷ್ಟು ಪೂರ್ಣ: ರಾಜ್ಯಕ್ಕೆ ಕೋಲಾರ ಜಿಲ್ಲೆ ಪ್ರಥಮ

ಕೆ.ಓಂಕಾರ ಮೂರ್ತಿ
Published 15 ಮಾರ್ಚ್ 2024, 5:55 IST
Last Updated 15 ಮಾರ್ಚ್ 2024, 5:55 IST
ಅಕ್ರಂ ಪಾಷಾ
ಅಕ್ರಂ ಪಾಷಾ   

ಕೋಲಾರ: ಪಹಣಿಗಳೊಂದಿಗೆ (ಆರ್‌ಟಿಸಿ) ಆಧಾರ್‌ ಜೋಡಣೆ ಕಾರ್ಯ (ನನ್ನ ಆಸ್ತಿ ಅಭಿಯಾನ) ಭರದಿಂದ ನಡೆಯುತ್ತಿದ್ದು, ಕೋಲಾರ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ.

ಜಿಲ್ಲೆಯಲ್ಲಿ ಆಧಾರ್‌ ಜೋಡಣೆ ಆಗದ 10,05,558 ಆರ್‌ಟಿಸಿ ವಾರಸುದಾರರಿದ್ದಾರೆ. ಅವರಲ್ಲಿ ಮಾರ್ಚ್‌ 14ರವರೆಗೆ 75,007 ಪಹಣಿಗಳನ್ನು ಆಧಾರ್‌ಗೆ ಜೋಡಣೆ ಮಾಡಲಾಗಿದೆ. ಈ ಪ್ರಮಾಣ ಶೇ 17.31ರಷ್ಟಿದೆ. 84,182 ಮಂದಿ ವಾರಸುದಾರರು ಮೃತರಾಗಿರುವುದು ಗೊತ್ತಾಗಿದೆ. ಜಿಲ್ಲಾಧಿಕಾರಿ ಅಕ್ರಂ ಪಾಷ ಮಾರ್ಗದರ್ಶನದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿದ್ದಾರೆ.

ವಿಜಯನಗರ ಜಿಲ್ಲೆಯು (ಶೇ 16.97) ಎರಡನೇ ಸ್ಥಾನದಲ್ಲಿದೆ. ಚಾಮರಾಜನಗರದಲ್ಲಿ ಈವರೆಗೆ ಕೇವಲ ಶೇ 0.88, ರಾಯಚೂರು ಜಿಲ್ಲೆಯಲ್ಲಿ ಶೇ 1.31ರಷ್ಟು ಸಾಧನೆ ಆಗಿದೆ. ಸುಮಾರು 25 ಜಿಲ್ಲೆಗಳು ಇನ್ನೂ ಶೇ 10ರ ಗಡಿ ದಾಟಿಲ್ಲ.

ADVERTISEMENT

ನೋಂದಣಿ ಸಮಯದಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ನೇರವಾಗಿ ತಲುಪಿಸಲು ಪಹಣಿಗಳೊಂದಿಗೆ ಆಧಾರ್‌ ಜೋಡಣೆ ಕಾರ್ಯ ಆರಂಭಿಸಲಾಗಿದೆ. ಗ್ರಾಮ ಲೆಕ್ಕಿಗರು ಮನೆಮನೆಗೆ ತೆರಳಿ ಪಹಣಿ ಮತ್ತು ಆಧಾರ್ ಜೋಡಣೆ ಕಾರ್ಯ ಮಾಡುತ್ತಾರೆ.

‘ಆರ್‌ಟಿಸಿ–ಆಧಾರ್‌ ಜೋಡಣೆ ಕೆಲಸ ಮುಗಿಸಿದರೆ ನಕಲಿಗೆ ಅವಕಾಶ ಇರುವುದಿಲ್ಲ. ಬೆಳೆ ಪರಿಹಾರ ನೀಡುವಲ್ಲಿ ಗೊಂದಲವೂ ಇರುವುದಿಲ್ಲ. ಮ್ಯುಟೇಷನ್ ಸೇರಿ ಎಲ್ಲಾ ಸರ್ಕಾರಿ ಸೇವೆಗಳನ್ನೂ ಸುಲಭವಾಗಿ ಮನೆ ಬಾಗಿಲಿಗೆ ತಲುಪಿಸಬಹುದು’ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ‘ಪ್ರಜಾವಾಣಿ’ಗೆ ತಿಳಿಸಿದರು.

ಹಲವು ಜಿಲ್ಲೆಗಳಲ್ಲಿ ಯಾರದ್ದೋ ಕೃಷಿ ಭೂಮಿಗೆ, ಅದೇ ಹೆಸರಿನ ಮತ್ಯಾರಿಗೋ ಪರಿಹಾರ ನೀಡಿರುವ, ಒಂದು ಜಿಲ್ಲೆಯ ರೈತರ ಪರಿಹಾರ ಹಣ ಮತ್ತೊಂದು ಜಿಲ್ಲೆಯ ರೈತರಿಗೆ ನೀಡಿರುವ ಮತ್ತು ವಿವಿಧ ರೀತಿಯಲ್ಲಿ ಹಣ ದುರುಪಯೋಗವಾದ ಪ್ರಕರಣ ಗಮನಕ್ಕೆ ಬಂದಿವೆ. ಪಹಣಿಗೆ ಆಧಾರ್ ಲಿಂಕ್ ಮಾಡುವ ಮೂಲಕ ಇಂತಹ ಅಕ್ರಮ ತಡೆಗಟ್ಟಲು ಸರ್ಕಾರ ಮುಂದಾಗಿದೆ.

ರೈತರು ತಮ್ಮ ಪಹಣಿಗಳಿಗೆ ಸ್ವಯಂ ಪ್ರೇರಿತರಾಗಿ ಆಧಾರ್‌ ಸೀಡಿಂಗ್‌ ಮಾಡಲು ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ಈ ಕಾರ್ಯ ಕುಂಠಿತಗೊಂಡಿದೆ. ಈ ನಿಟ್ಟಿನಲ್ಲಿ ಪಹಣಿಗಳಿಗೆ ಆಧಾರ್‌ ಸೀಡಿಂಗ್‌ ಕಾರ್ಯ ಉತ್ತೇಜಿಸಲು ಮತ್ತು ರೂಪುರೇಷೆ ಸಿದ್ಧಪಡಿಸಲು ಕಂದಾಯ ಇಲಾಖೆ ಆಯುಕ್ತ ಪೊಮ್ಮಲ ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ರಾಜ್ಯ ಸರ್ಕಾರ ಸಮಿತಿ ಕೂಡ ರಚಿಸಿತ್ತು. ಈ ಸಮಿತಿಯಲ್ಲಿ ಅಕ್ರಂ ಪಾಷಾ ಕೂಡ ಇದ್ದಾರೆ.

ರಾಜ್ಯದಲ್ಲಿ ಆರ್‌ಟಿಸಿಗೆ ಆಧಾರ್‌ ಜೋಡಣೆಯಲ್ಲಿ ಮೊದಲ 7 ಸ್ಥಾನದಲ್ಲಿರುವ ಜಿಲ್ಲೆಗಳು ಜಿಲ್ಲೆ; ಆರ್‌ಟಿಸಿ ವಾರಸುದಾರರು; ಜೋಡಣೆ; ಸಾಧನೆ (ಶೇ) ಕೋಲಾರ; 1005558; 75007; 17.31 ವಿಜಯನಗರ; 634219; 63733; 16.97 ಬೀದರ್‌; 583290; 62481; 16.47 ಬಳ್ಳಾರಿ; 510062; 52797; 16.09 ಗದಗ; 704347; 77885; 14.76 ಧಾರವಾಡ; 1076861; 12890; 11.21 ಕಲಬುರಗಿ; 832375; 45261; 8.59 * ಮಾರ್ಚ್‌ 14ರವರೆಗಿನ ಅಂಕಿಅಂಶಗಳು

ರಾಜ್ಯದಲ್ಲಿ ಲ್ಯಾಂಡ್‌ ಬೀಟ್‌ನಲ್ಲಿ ಮೊದಲ 7 ಸ್ಥಾನದಲ್ಲಿರುವ ಜಿಲ್ಲೆಗಳು ಜಿಲ್ಲೆ; ಸರ್ಕಾರಿ ಭೂಮಿ; ಜಿಯೋ ಫೆನ್ಸಿಂಗ್‌ ಪೂರ್ಣ (ಶೇ) ಕೋಲಾರ; 37782; 38.14 ಯಾದಗಿರಿ; 22199; 32.48 ಬಳ್ಳಾರಿ; 59405; 29.38 ತುಮಕೂರು; 81213; 28.33 ಹಾವೇರಿ; 36001; 25.64 ಕಲಬುರಗಿ; 32831; 2409 ವಿಜಯಪುರ; 53690; 21.86 * ಮಾರ್ಚ್‌ 14ರವರೆಗಿನ ಅಂಕಿಅಂಶಗಳು

ಲ್ಯಾಂಡ್‌ ಬೀಟ್‌ನಲ್ಲೂ ಅಗ್ರಸ್ಥಾನ

ಸರ್ಕಾರಿ ಆಸ್ತಿಗಳ ಒತ್ತುವರಿ ತಪ್ಪಿಸಲು ಹಾಗೂ ಸಂರಕ್ಷಣೆಗಾಗಿ ತರಲಾಗಿರುವ ಲ್ಯಾಂಡ್‌ ಬೀಟ್‌ನಲ್ಲೂ (ಜಿಯೊ ಫೆನ್ಸಿಂಗ್‌) ಕೋಲಾರ ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದ ಕಂದಾಯ ಇಲಾಖೆಯು ಈ ನೂತನ ಯೋಜನೆಯನ್ನು ಜಾರಿ ಮಾಡಿದ್ದು ಸರ್ಕಾರಿ ಜಮೀನಿನ ಒತ್ತುವರಿ ತೆರವು ಮಾಡಿ ಅದರ ಭಾವಚಿತ್ರ ಮತ್ತು ಇನ್ನಿತರೆ ವಿವರಗಳನ್ನು ಲ್ಯಾಂಡ್ ಬೀಟ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ‘ಲ್ಯಾಂಡ್‌ ಬೀಟ್‌ ತಂತ್ರಾಂಶದ ಮೂಲಕ ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಎಲ್ಲಾ ಜಮೀನುಗಳಿಗೆ ಜಿಯೋ ಫೆನ್ಸಿಂಗ್ ಮಾಡುತ್ತಾರೆ. ಒತ್ತುವರಿ ಮಾಡಿದ್ದಲ್ಲಿ ಅಂತಹ ಆಸ್ತಿಗಳ ವಿವರ ಲಭ್ಯವಾಗುತ್ತದೆ’ ಎಂದು ಅಕ್ರಂ ಪಾಷಾ ತಿಳಿಸಿದರು. ‘ಈ ವಿಭಾಗದಲ್ಲಿ ಜಿಲ್ಲೆಯು ಅಗ್ರಸ್ಥಾನಕ್ಕೇರಲು ಕಂದಾಯ ಇಲಾಖೆ ತಂಡ ಕಾರಣ. ತಹಶೀಲ್ದಾರ್‌ ಕಂದಾಯ ನಿರೀಕ್ಷಕರು ಗ್ರಾಮಾಧಿಕಾರಿಗಳ ಶ್ರಮವಿದ್ದು ಅವರನ್ನು ಅಭಿನಂದಿಸುತ್ತೇನೆ’ ಎಂದರು.

ಸಚಿವರಿಂದ ಶ್ಲಾಘನೆ ವಿಎಗಳಿಗೆ ಲ್ಯಾಪ್‌ಟಾಪ್‌!

ಆಧಾರ್‌ ಜೋಡಣೆ ಹಾಗೂ ಸರ್ಕಾರಿ ಜಾಗದ ಜಿಯೋ ಫೆನ್ಸಿಂಗ್‌ನಲ್ಲಿ ಕೋಲಾರ ಜಿಲ್ಲೆ ನಿಗದಿತ ಗುರಿ ಮುಟ್ಟಿ ಸಾಧನೆ ಮಾಡಿರುವುದಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ 10 ಗ್ರಾಮ ಲೆಕ್ಕಿಗರಿಗೆ (ವಿಎ) ಲ್ಯಾಪ್‌ಟಾಪ್‌ ನೀಡಿ ಅಭಿನಂದಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದರು.

ರೈತರಿಗೆ ನಿಗದಿತ ಸಮಯದಲ್ಲಿ ಸರ್ಕಾರದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪಹಣಿಗಳಿಗೆ ಆಧಾರ್‌ ಜೋಡಣೆ ಕಾರ್ಯ ನಡೆಸುತ್ತಿದ್ದು ನಮ್ಮ ಜಿಲ್ಲೆ ಅಗ್ರಸ್ಥಾನದಲ್ಲಿದೆ.
-ಅಕ್ರಂ ಪಾಷಾ, ಜಿಲ್ಲಾಧಿಕಾರಿ ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.