
ಎಪಿಎಂಸಿಯಲ್ಲಿ ರೈತರಿಗೆ ಕೆ.ಜಿಗೆ ಕೇವಲ ₹ 10 ಲಭ್ಯ | ಮುಂದಿನ ಮೂರು ತಿಂಗಳು ಇದೇ ದರ ಮುಂದುವರಿಕೆ ಸಾಧ್ಯತೆ | ಕೋಲಾರದತ್ತ ತಲೆಹಾಕದ ಹೊರರಾಜ್ಯಗಳ ವರ್ತಕರು
ಕೋಲಾರ: ಹೊಸ ವರ್ಷದ ಆರಂಭದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 60ರವರೆಗೆ ತಲುಪಿದ್ದ ಟೊಮೆಟೊ ಧಾರಣೆ ವಾರದಿಂದ ಭಾರಿ ಕುಸಿತ ಕಂಡಿದೆ. ಈಗ ₹ 100 ಕ್ಕೆ ಐದು ಕೆ.ಜಿ ಟೊಮೆಟೊ ಸಿಗುತ್ತಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆ ಹರಾಜಿನಲ್ಲಿ 15 ಕೆ.ಜಿ. ತೂಕದ ಬಾಕ್ಸ್ ಟೊಮೆಟೊ ₹200ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಸಾಧಾರಣ ಗುಣಮಟ್ಟದ ಟೊಮೆಟೊ ₹ 150ಕ್ಕೆ ಹರಾಜಾಗುತ್ತಿದೆ. ಇದರಿಂದ ರೈತರಿಗೆ ಕೆ.ಜಿಗೆ ಕೇವಲ ₹ 10 ಸಿಗುತ್ತಿದೆ.
ಹೊರರಾಜ್ಯಗಳಲ್ಲಿ ರೈತರು ಈಗ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆಯುತ್ತಿರುವುದು ಈ ಕುಸಿತಕ್ಕೆ ಕಾರಣ ಎಂಬುದು ಗೊತ್ತಾಗಿದೆ. ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಅಲ್ಲಿಯೇ ಹೆಚ್ಚು ಫಸಲು ಬಂದಿದೆ. ಹೀಗಾಗಿ, ಆ ಭಾಗದ ವರ್ತಕರು ಖರೀದಿಗೆ ಬರುತ್ತಿಲ್ಲ. ಇದರಿಂದ ಇಲ್ಲಿನ ಎಂಪಿಎಂಸಿಯಲ್ಲಿ ಚಟುವಟಿಕೆಗಳು ಕಡಿಮೆ ಆಗಿವೆ.
‘ಹೊರರಾಜ್ಯಗಳಿಂದ ಟೊಮೆಟೊಗೆ ಬೇಡಿಕೆ ಕುಸಿದಿರುವ ಕಾರಣ ಟೊಮೆಟೊ ಧಾರಣೆಯಲ್ಲಿ ಗಣನೀಯ ಕುಸಿತವಾಗಿದೆ. ಮುಂದಿನ ಮೂರು ತಿಂಗಳು ಇದೇ ರೀತಿ ಮುಂದುವರಿಯಲಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ದೇಶದ ಬಹುತೇಕ ಭಾಗಗಳಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಈ ಸಮಯದಲ್ಲಿ ಸದಾ ಇಷ್ಟೇ ದರ ಇರುತ್ತದೆ’ ಎಂದರು.
ಏಷ್ಯಾದ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎನಿಸಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಸದ್ಯ 8 ಸಾವಿರ ಕ್ವಿಂಟಲ್ ಅಂದರೆ ಸುಮಾರ 50 ಸಾವಿರ ಬಾಕ್ಸ್ ಟೊಮೆಟೊ ಆವಕವಾಗುತ್ತಿದೆ. ಚಿತ್ರದುರ್ಗ, ತುಮಕೂರು ಹಾಗೂ ಹೊರರಾಜ್ಯಗಳಿಂದಲೇ ಹೆಚ್ಚು ಟೊಮೆಟೊ ಇಲ್ಲಿಗೆ ಪೂರೈಕೆ ಆಗುತ್ತಿದೆ.
ಜಿಲ್ಲೆಯಲ್ಲಿ ರೈತರು ಈಗ ತೀರಾ ಕಡಿಮೆ ಪ್ರಮಾಣದಲ್ಲಿ ಟೊಮೆಟೊ ಬೆಳೆ ಬೆಳೆದಿದ್ದು, ಗುಣಮಟ್ಟವೂ ಕಡಿಮೆ ಆಗಿದೆ.
ಜನವರಿ ಆರಂಭದಲ್ಲಿ ಟೊಮೆಟೊ ದರ ಏರಿಕೆ ಆಗಿತ್ತು. ಆಗ 15 ಕೆ.ಜಿ. ತೂಕದ ಬಾಕ್ಸ್ ಟೊಮೆಟೊ ₹ 850 ರವರೆಗೆ ಮಾರಾಟ ಆಗಿತ್ತು. ಟೊಮೆಟೊ ಬೆಳೆಗಾರರು ಹಾಗೂ ವರ್ತಕರ ಖುಷಿಯಲ್ಲಿದ್ದರು. ಈಗ ದಿಢೀರನೇ ಕುಸಿತ ಕಂಡಿರುವುದು ಟೊಮೆಟೊ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.
ಸ್ಥಳೀಯವಾಗಿ ಕೇವಲ ಶೇ 5ರಷ್ಟು ಟೊಮೆಟೊ ಕೋಲಾರ ಎಪಿಎಂಸಿಗೆ ಬರುತ್ತಿದೆ. ಇನ್ನುಳಿದ ಶೇ 95ರಷ್ಟು ಟೊಮೆಟೊ ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬರುತ್ತಿದೆಕಿರಣ್ ಕಾರ್ಯದರ್ಶಿ ಕೋಲಾರ ಎಪಿಎಂಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.