ಕೋಲಾರ: ಬಹಳ ದಿನಗಳಿಂದ ಕುತೂಹಲ ಕೆರಳಿಸಿರುವ ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಮುಲ್) ಆಡಳಿತ ಮಂಡಳಿಯ 2025–2030ರ ಅವಧಿಯ ಅಧ್ಯಕ್ಷರ ಆಯ್ಕೆಗೆ ಶನಿವಾರ ಚುನಾವಣೆ ನಡೆಯಲಿದ್ದು, ಬಹುಮತ ಹೊಂದಿರುವ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.
ಒಕ್ಕೂಟದಲ್ಲಿ ಕಾಂಗ್ರೆಸ್ ಬೆಂಬಲಿತ ಹೆಚ್ಚು ನಿರ್ದೇಶಕರಿದ್ದು, ಪಕ್ಷದ ವರಿಷ್ಠರು ರೂಪಿಸಿರುವ ಸಂಧಾನ ಸೂತ್ರದಂತೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ನಾಮಪತ್ರ ಸಲ್ಲಿಸಲಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಜೆಡಿಎಸ್–ಬಿಜೆಪಿ ಮೈತ್ರಿಕೂಟ ಈವರೆಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಮೈತ್ರಿಕೂಟ ಬೆಂಬಲಿತ ಕೇವಲ ನಾಲ್ವರು ನಿರ್ದೇಶಕರಿದ್ದಾರೆ. ಹೀಗಾಗಿ, ಆ ಕಡೆಯಿಂದ ಸ್ಪರ್ಧೆ ಅನುಮಾನ. ಇದರಿಂದ ಮತ್ತೊಮ್ಮೆ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿರುವ ನಂಜೇಗೌಡರ ಹಾದಿ ಸುಗಮವಾಗುವ ಸಾಧ್ಯತೆ ಇದೆ.
ಒಕ್ಕೂಟದಲ್ಲಿ ಚುನಾಯಿತ 13 ಹಾಗೂ ಸರ್ಕಾರದ 5 ಪ್ರತಿನಿಧಿಗಳು ಸೇರಿ ಒಟ್ಟು 18 ನಿರ್ದೇಶಕ ಸ್ಥಾನಗಳಿವೆ. ಅಧ್ಯಕ್ಷ ಸ್ಥಾನಕ್ಕೆ ಒಬ್ಬರಿಗಿಂತ ಹೆಚ್ಚು ಮಂದಿ ನಾಮಪತ್ರ ಸಲ್ಲಿಸಿ ಸ್ಪರ್ಧೆ ನಡೆದರೆ ಗೆಲ್ಲಲು 10 ಮತಗಳು ಬೇಕಾಗುತ್ತವೆ. ಅದರಲ್ಲೂ ಎನ್‌ಡಿಡಿಬಿ ಪ್ರತಿನಿಧಿ ಸಾಮಾನ್ಯವಾಗಿ ಬರುವುದಿಲ್ಲ. ಹೀಗಾಗಿ, 9 ಮತಗಳು ಲಭಿಸಿದರೆ ಅಧ್ಯಕ್ಷರಾಗಬಹುದು. ಸದ್ಯ ಕಾಂಗ್ರೆಸ್ ಬೆಂಬಲಿತರು 9 ನಿರ್ದೇಶರು ಹಾಗೂ ಒಬ್ಬ ನಾಮನಿರ್ದೇಶಿತ ನಿರ್ದೇಶಕ ಇದ್ದು, ಬಹುಮತವಿದೆ. ಜೆಡಿಎಸ್–ಬಿಜೆಪಿ ಬಳಿ ನಾಲ್ವರು ನಿರ್ದೇಶಕರಿದ್ದಾರೆ.
ನಂಜೇಗೌಡ ಅಲ್ಲದೇ ಮೊದಲ ಬಾರಿ ನಿರ್ದೇಶಕರಾಗಿ ಆಯ್ಕೆ ಆಗಿರುವ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೂಡ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿ ಕಾರಣ ಕಾಂಗ್ರೆಸ್‌ನಲ್ಲಿ ಗೊಂದಲ, ತಿಕ್ಕಾಟ ಉಂಟಾಗಿತ್ತು. ಇಬ್ಬರೂ ವಿವಿಧ ವೇದಿಕೆಗಳಲ್ಲಿ ತಮಗೆ ಅವಕಾಶ ಮಾಡಿಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಅವರ ಪರವಾಗಿ ಬೆಂಬಲಿಗರೂ ಬ್ಯಾಟಿಂಗ್ ಮಾಡಲು ಆರಂಭಿಸಿದ್ದರು.
ಜಿಲ್ಲಾ ಕಾಂಗ್ರೆಸ್ ಶಾಸಕರು, ಮುಖಂಡರು, ಪಕ್ಷ ಬೆಂಬಲಿತ ನೂತನ ನಿರ್ದೇಶಕರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಜೊತೆ ಪ್ರತ್ಯೇಕವಾಗಿ ನಡೆಸಿದ ಸತತ ಸಭೆಗಳ ಬಳಿಕ ಸಂಧಾನ ಸೂತ್ರ ಏರ್ಪಟ್ಟಿದೆ.
ಆ ಸೂತ್ರದಂತೆ ನಂಜೇಗೌಡ ಅವರನ್ನು ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಸುವುದು. ಆ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ನಾರಾಯಣಸ್ವಾಮಿ ಅವರನ್ನು ಕೆಎಂಎಫ್ ಡೆಲಿಗೇಟ್ ಆಗಿ ನಿಯೋಜಿಸಲು ತೀರ್ಮಾನಿಸಲಾಗಿದೆ. ಅದಕ್ಕೆ ಕಾಂಗ್ರೆಸ್‌ನ ಎರಡೂ ಬಣಗಳು ಒಪ್ಪಿಗೆ ಸೂಚಿಸಿವೆ ಎಂಬುದು ಗೊತ್ತಾಗಿದೆ. ಶುಕ್ರವಾರ ಕೂಡ ಕೆ.ಆರ್.ರಮೇಶ್ ಕುಮಾರ್ ನೇತೃತ್ವದ (ಘಟಬಂಧನ್) ಬಣ ಹಾಗೂ ಕೆ.ಎಚ್.ಮುನಿಯಪ್ಪ ನೇತೃತ್ವದ ಬಣದ ಮುಖಂಡರು ಬೆಂಗಳೂರಿನಲ್ಲಿ ಸಭೆ ನಡೆಸುವುದರಲ್ಲಿ ನಿರತರಾಗಿದ್ದರು.
ಒಟ್ಟು 13 ನಿರ್ದೇಶಕರ ಪೈಕಿ ಘಟಬಂಧನ್ ಬೆಂಬಲಿತ ಏಳು ನಿರ್ದೇಶಕರಿದ್ದಾರೆ. ಕೆ.ಎಚ್.ಮುನಿಯಪ್ಪ ಬಣದ ನಾರಾಯಣಸ್ವಾಮಿ ಹಾಗೂ ಮಹಾಲಕ್ಷ್ಮಿ ಇದ್ದಾರೆ.
ಶನಿವಾರ ನಡೆಯಲಿರುವ ಚುನಾವಣೆಗೆ ಮುನ್ನ ಕಾಂಗ್ರೆಸ್ ಬೆಂಬಲಿತ ಎಲ್ಲಾ 9 ನಿರ್ದೇಶಕರು ಜೊತೆಗೂಡಿ ಸಭೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಈ ಸಭೆಯಲ್ಲಿ ನಂಜೇಗೌಡ ಹಾಗೂ ನಾರಾಯಣಸ್ವಾಮಿ ಕೂಡ ಭಾಗವಹಿಸುವ ನಿರೀಕ್ಷೆ ಇದ್ದು, ಕುತೂಹಲ ಮೂಡಿಸಿದೆ. ಜೊತೆಗೆ ಕಾಂಗ್ರೆಸ್‌ನಲ್ಲೇ ಉಂಟಾಗಿದ್ದ ತಿಕ್ಕಾಟಕ್ಕೆ ‘ತಾತ್ಕಾಲಿಕ’ ತೆರೆ ಬೀಳುವ ನಿರೀಕ್ಷೆ ಇದೆ. ಆದರೆ, ಕೊನೆ ಕ್ಷಣದಲ್ಲಿ ಚುನಾವಣೆ ಯಾವ ತಿರುವು ಪಡೆದುಕೊಳ್ಳಬಹುದು ಎಂಬ ಕುತೂಹಲ ರಾಜಕೀಯ ಪಕ್ಷಗಳಲ್ಲಿ ಹಾಗೂ ಸಹಕಾರ ವಲಯದಲ್ಲಿ ಇದೆ.
ಕೋಮುಲ್ ಅಧ್ಯಕ್ಷ ಸ್ಥಾನದ ಚುನಾವಣೆಯು ಶನಿವಾರ ಒಕ್ಕೂಟದ ಮುಖ್ಯ ಕಚೇರಿಯ ಆಡಳಿತ ಮಂಡಳಿ ಸಭಾಂಗಣದಲ್ಲಿ ಚುನಾವಣಾಧಿಕಾರಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್ ನೇತೃತ್ವದಲ್ಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿರುತ್ತದೆ. ಮಧ್ಯಾಹ್ನ 2 ಗಂಟೆವರೆಗೆ ಉಮೇದುವಾರಿಕೆ ಹಿಂಪಡೆಯಲು ಕಾಲಾವಕಾಶ ಕೊಡಲಾಗುತ್ತದೆ. ನಂತರ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತಾರೆ. ಮಧ್ಯಾಹ್ನ 2.30ರಿಂದ 3.30ರವರೆಗೆ ಮತದಾನ ನಡೆಯಲಿದೆ. ನಂತರ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಆಗಲಿದೆ. ಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು ಪೊಲೀಸರು ಬಿಗಿ ಬಂದೋಬಲ್ತ್ ಕಲ್ಪಿಸಿದ್ದಾರೆ.
ಜೆಡಿಎಸ್–ಬಿಜೆಪಿ ಮೈತ್ರಿಕೂಟದ ಮುಖಂಡರು ಕಾಂಗ್ರೆಸ್ ಬೆಂಬಲಿತರ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಕಸ್ಮಾತ್ ‘ಕೈ’ ಬಣಗಳಲ್ಲಿ ಮತ್ತೆ ಏನಾದರೂ ಒಡಕು ಉಂಟಾದರೆ ಅದನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಕೊನೆ ಗಳಿಗೆವರೆಗೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಆದರೆ ಅವರ ಬಳಿ ಇರುವುದು ಕೇವಲ ನಾಲ್ವರು ನಿರ್ದೇಶಕರು. ಹೀಗಾಗಿ ಸುಖಾಸುಮ್ಮನೇ ಅಭ್ಯರ್ಥಿ ನಿಲ್ಲಿಸಿ ಮುಖಭಂಗ ಅನುಭವಿಸುವಂಥ ಹೆಜ್ಜೆ ಇಡುವ ಸಾಧ್ಯತೆ ಕಡಿಮೆ. ‘ಎನ್‌ಡಿಎ ಬಳಿ ಬಹುಮತ ಇಲ್ಲ ನಿಜ. ಆದರೆ ಕೋಮುಲ್ ಅಭಿವೃದ್ಧಿ ನಮ್ಮ ಉದ್ದೇಶ. ಹೀಗಾಗಿ ಕೊನೆಯ ಕ್ಷಣದವರೆಗೆ ಕಾದು ನೋಡುತ್ತೇವೆ. ಉತ್ತಮ ವ್ಯಕ್ತಿಗೆ ನಮ್ಮ ಬೆಂಬಲವಿರುತ್ತದೆ’ ಎಂದು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.