ADVERTISEMENT

21 ಎಕರೆ ಭೂ ಕಬಳಿಕೆ ಆರೋಪ: ಕೃಷ್ಣಬೈರೇಗೌಡ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ದೂರು

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 12:54 IST
Last Updated 5 ಜನವರಿ 2026, 12:54 IST
   

ಕೋಲಾರ: ಜಿಲ್ಲೆಯ ನರಸಾಪುರ ಹೋಬಳಿಯ ಗರುಡನಪಾಳ್ಯದ ಸರ್ವೆ ಸಂಖ್ಯೆ 46 ಹಾಗೂ 47ರಲ್ಲಿ ಒಟ್ಟು 21.16 ಎಕರೆ ಭೂ ಕಬಳಿಕೆ ಆರೋಪ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ ವಿರುದ್ಧ ಜಿಲ್ಲಾ ಲೋಕಾಯುಕ್ತ ಪೊಲೀಸರಿಗೆ ಬಿಜೆಪಿ ದೂರು ನೀಡಿದೆ.

ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ಆ ಪಕ್ಷದ ಮುಖಂಡರಾದ ವಿ.ವಿಜಯಕುಮಾರ್‌ ಹಾಗೂ ಎಸ್‌.ಎಂ.ಅನಿಲ್‌ ಕುಮಾರ್‌ ಸೋಮವಾರ ನಗರದ ಲೋಕಾಯುಕ್ತ ಕಚೇರಿಗೆ ವಕೀಲರೊಂದಿಗೆ ಬಂದು ಲೋಕಾಯುಕ್ತ ಡಿವೈಎಸ್ಪಿ ವೆಂಕಟೇಶ್ ಅವರಿಗೆ ದೂರಿನ ಪತ್ರ ನೀಡಿದ್ದು ತನಿಖೆಗೆ ಆಗ್ರಹಿಸಿದ್ದಾರೆ.

ಗರುಡನಪಾಳ್ಯದಲ್ಲಿ ಸಚಿವರು ಕೆರೆ ಮತ್ತು ಸ್ಮಶಾನದ ಜಮೀನು ಕಬಳಿಸಿ ತಮ್ಮ ಹಾಗೂ ಕುಟುಂಬದ ಹೆಸರಿಗೆ ಮಾಡಿಕೊಂಡಿರುವ ಆರೋಪವಿದೆ. ದಾಖಲೆಗಳನ್ನು ತಿರುಚಿ ಕೆರೆ ಇರುವ ಸರ್ವೆ ಸಂಖ್ಯೆ 46ರಲ್ಲಿ 20.16 ಎಕರೆ ಹಾಗೂ ಸ್ಮಶಾನವಿರುವ ಸರ್ವೆ ಸಂಖ್ಯೆ 47ರಲ್ಲಿ 1 ಎಕರೆ ಭೂಮಿ ಕಬಳಿಸಿದ್ದಾರೆ. ಇದರಲ್ಲಿ ಕೋಲಾರ ತಹಶೀಲ್ದಾರ್‌ ಹಾಗೂ ಕಂದಾಯ ಇಲಾಖೆಯ ಇತರ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ, ‘ಸರ್ಕಾರಿ ಜಮೀನು ಉಳಿಸಲು ಹೋರಾಟ ಮಾಡುತ್ತಿರುವುದಾಗಿ ಹೇಳುವ ಕೃಷ್ಣಬೈರೇಗೌಡ ವಿರುದ್ಧವೇ ಭೂ ಕಬಳಿಕೆ ಆರೋಪವಿದೆ. ಈ ಅನುಮಾನ ಬಗೆಹರಿಸಿಕೊಳ್ಳಲು ಸಮಗ್ರ ತನಿಖೆ ನಡೆಯಬೇಕು. ಯಾರು ದಾಖಲೆ ಸೃಷ್ಟಿ ಮಾಡಿದ್ದಾರೆ? ಯಾರೆಲ್ಲಾ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗಬೇಕು. ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಬೆಳಗಾವಿ ಅಧಿವೇಶನದ ವೇಳೆ ಆರೋಪ: ಕಂದಾಯ ಸಚಿವ ಕೃಷ್ಣಬೈರೇಗೌಡ ಭೂ ಕಬಳಿಕೆ ಮಾಡಿದ್ದಾರೆ ಎಂದು ಬೆಳಗಾವಿ ಅಧಿವೇಶನದ ವೇಳೆ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶಗೌಡ ಆರೋಪ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ಪೂರಕ ದಾಖಲೆ ಬಿಡುಗಡೆ ಮಾಡಿದ್ದರು.

ಈ ಸಂಬಂಧ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಪ್ರಸ್ತಾಪ ಮಾಡಿ ತನಿಖೆಗೆ ಆಗ್ರಹಿಸಿದ್ದರು. ತಮ್ಮ ಮೇಲಿನ ಆರೋಪ ಸಂಬಂಧ ಸಚಿವರು ವಿವರವಾಗಿ ಉತ್ತರ ನೀಡಿ ‘ಇದು ಪಿತ್ರಾರ್ಜಿತ ಆಸ್ತಿ. ಯಾವುದೇ ತನಿಖೆಗೆ ಸಿದ್ಧ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.