ADVERTISEMENT

ಕೃಷಿ ಹೊಂಡದ ಲಾಭ: ಬಂಪರ್ ಬೆಳೆಯಲ್ಲಿ ರೈತ

ಕೃಷ್ಣಮೂರ್ತಿ
Published 16 ಜುಲೈ 2019, 20:00 IST
Last Updated 16 ಜುಲೈ 2019, 20:00 IST
ಕೆಜಿಎಫ್ ಗೊಲ್ಲಹಳ್ಳಿ ಬಳಿ ರೈತ ವೇಣುಗೋಪಾಲ್ ಬೆಳೆದಿರುವ ಬಜ್ಜಿ ಮೆಣಸಿನಕಾಯಿ.
ಕೆಜಿಎಫ್ ಗೊಲ್ಲಹಳ್ಳಿ ಬಳಿ ರೈತ ವೇಣುಗೋಪಾಲ್ ಬೆಳೆದಿರುವ ಬಜ್ಜಿ ಮೆಣಸಿನಕಾಯಿ.   

ಕೆಜಿಎಫ್: ಕೃಷಿ ಹೊಂಡ ಎಂತಹ ಸಹಾಯವನ್ನು ರೈತರಿಗೆ ನೀಡುತ್ತಿದೆ ಎಂಬುದಕ್ಕೆ ಗೊಲ್ಲಹಳ್ಳಿಯ ರೈತ ವೇಣುಗೋಪಾಲ್ ಕೃಷಿ ಸಾಧನೆ ಉದಾಹರಣೆಯಾಗಿದೆ.

ನಗರಕ್ಕೆ ಹೊಂದಿಕೊಂಡಂತೆ ಇರುವ ಗೊಲ್ಲಹಳ್ಳಿ ಬಳಿ ಮಸ್ಕಂ ರೈತ ವೇಣುಗೋಪಾಲ್ ಮೂರೂವರೆ ಎಕರೆ ಜಮೀನಿನಲ್ಲಿ ಬೆಳೆದಿರುವ ಬಜ್ಜಿ ಮೆಣಸಿನಕಾಯಿ, ಎಲಕೋಸು, ಟೊಮೆಟೊ ಮತ್ತು ಚೆಂಡು ಹೂ ಬಂಪರ್ ಲಾಭವನ್ನು ತಂದುಕೊಟ್ಟಿದೆ.

ಜಮೀನಿನಲ್ಲಿರುವ ಕೃಷಿ ಹೊಂಡಕ್ಕೆ ತಮ್ಮದೇ ಜಮೀನಿನಲ್ಲಿ ಕೊರೆದಿರುವ ಕೊಳವೆಬಾವಿಯಿಂದ ನೀರು ಹಾಯಿಸಲಾಗುತ್ತಿದೆ. ಸಮೀಪದ ಅನೇಕ ಕೊಳವೆಬಾವಿಗಳು ಬತ್ತಿ ಹೋಗಿದ್ದರೂ, ಈ ರೈತನ ಕೊಳವೆಬಾವಿಯಲ್ಲಿ ನೀರು ಇನ್ನೂ ಬರುತ್ತಿರುವುದು ಅವರ ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ. ಕೊಳವೆಬಾವಿ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಿಕೊಂಡು ಬೇಕಾದಷ್ಟು ಪ್ರಮಾಣದಲ್ಲಿ ಬೆಳೆಗಳಿಗೆ ನೀರು ಹಾಯಿಸಲಾಗುತ್ತಿದೆ.

ADVERTISEMENT

ಪ್ಲಾಸ್ಟಿಕ್ ನೆಲಹಾಸು ಮಧ್ಯೆ ಬೆಳೆದು, ಅದಕ್ಕೆ ಹನಿ ನೀರಾವರಿ ಮಾಡಲಾಗಿದೆ. ಈಗ ಮಾರುಕಟ್ಟೆಯಲ್ಲಿ ಬಜ್ಜಿ ಮೆಣಸಿನಕಾಯಿಗೆ ಉತ್ತಮ ಧಾರಣೆ ಇದೆ. ಮಾರ್ಚ್‌ ತಿಂಗಳಲ್ಲಿ ನಾಟಿ ಮಾಡಿದ್ದ ಮೆಣಸಿನಕಾಯಿ ಈಗಾಗಲೇ ಆರು ಬಾರಿ ಕಟಾವು ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 70 ಆಸುಪಾಸಿನಲ್ಲಿ ಬೆಲೆ ಇರುವುದು ಲಾಭ ಎಂದು ವೇಣುಗೋಪಾಲ್ ಹೇಳುತ್ತಾರೆ.

ಸಾಮಾನ್ಯವಾಗಿ ಚೆಂಡು ಹೂಗೆ ಬೇಡಿಕೆ ಬರುವುದು ಕಷ್ಟವೇ. ಆದರೆ ಎಲ್ಲೆಡೆ ನೀರಿನ ಅಭಾವವಿರುವುದರಿಂದ ಚೆಂಡು ಹೂ ಬೆಳೆ ಬೆಳೆಯುವವರು ಕಡಿಮೆಯಾಗಿದ್ದರಿಂದ, ಚೆಂಡು ಹೂ ಕೂಡ ಕೈ ತುಂಬಿಸಲಿದೆ. ಪ್ರಸ್ತುತ ಕೆ.ಜಿ ಗೆ ₹ 80 ಹೂ ಬಿಕರಿಯಾಗುತ್ತಿದೆ. ಚೆಂಡು ಹೂಗಳನ್ನು ವಿ.ಕೋಟೆ ಮಾರುಕಟ್ಟೆಯಲ್ಲಿ ಮಾರುತ್ತೇನೆ. ಅಲ್ಲಿಂದ ಅದು ಗುಂಟೂರು, ರಾಜಮಂಡ್ರಿ ಮತ್ತು ವಿಜಯವಾಡ ಮಾರುಕಟ್ಟೆಗಳಿಗೆ ಹೋಗುತ್ತದೆ ಎಂದು ವೇಣು ವಿತರಣೆ ಜಾಲವನ್ನು ತಿಳಿಸುತ್ತಾರೆ.

ಬಜ್ಜಿ ಮೆಣಸಿನಕಾಯಿ ಮತ್ತು ಚೆಂಡು ಹೂ ಜತೆಗೆ ಟೊಮೆಟೊ ಮತ್ತು ನೆಲಕೋಸಿಗೆ ಕೂಡ ಬೇಡಿಕೆ ಇದೆ. ಅದು ಕೂಡ ಲಾಭವನ್ನು ಹೆಚ್ಚಿಸಬಹುದೆಂಬ ನಿರೀಕ್ಷೆಯಲ್ಲಿ ಅವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.