ADVERTISEMENT

ಕೋಲಾರ: ಒತ್ತುವರಿ ತೆರವು ಕಾರ್ಯ ಮಂದಗತಿ!

ಜಿಲ್ಲೆಯಲ್ಲಿ 75,194 ಎಕರೆ ವಿಸ್ತೀರ್ಣದ 3,232 ಕೆರೆ; 2 ತಿಂಗಳಲ್ಲಿ 344 ಕೆರೆಗಳ ಒತ್ತುವರಿ ತೆರವು

ಕೆ.ಓಂಕಾರ ಮೂರ್ತಿ
Published 6 ಮೇ 2025, 5:46 IST
Last Updated 6 ಮೇ 2025, 5:46 IST
ಕೋಲಾರದ ಅಮಾನಿಕೆರೆ
ಕೋಲಾರದ ಅಮಾನಿಕೆರೆ   

ಕೋಲಾರ: ಅಂತರ್ಜಲ ಹೆಚ್ಚಿಸುವ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಧಾರವಾಗಿರುವ ಮತ್ತು ಕೃಷಿ ಚಟುವಟಿಕೆಗಳಿಗೆ ನೀರು ಪೂರೈಸುವ ಜೀವನಾಡಿ ಕೆರೆಗಳಿಗೂ ಒತ್ತುವರಿ ಕಾಟ ತಪ್ಪಿಲ್ಲ. ಜಿಲ್ಲೆಯಲ್ಲಿ 75,194 ಎಕರೆ ವಿಸ್ತೀರ್ಣದಲ್ಲಿ 3,232 ಕೆರೆಗಳಿದ್ದು, ಒತ್ತುವರಿ ತೆರವು ಕಾರ್ಯಾಚರಣೆ ಮಂದಗತಿಯಲ್ಲಿ ಸಾಗಿದೆ.

ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಕೋಲಾರ ಕೂಡ ಒಂದು. ಆದರೆ, ಸರ್ವೆ ಆಗಿರುವುದು ತುಂಬಾ ಕಡಿಮೆ. ಶೇ 25 ಕೂಡ ಮುಗಿದಿಲ್ಲ ಎಂಬುದು ಗೊತ್ತಾಗಿದೆ. ನೂರಾರು ಕೆರೆಗಳ ಒತ್ತುವರಿ ತೆರವು ಬಾಕಿ ಇದೆ. ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶದಂತೆ ಜಿಲ್ಲಾ ಮಟ್ಟದಲ್ಲಿ ಸಮಿತಿಯನ್ನು ಕೂಡ ರಚಿಸಲಾಗಿದೆ.

ಕೆರೆಯ ಸುತ್ತಲೂ ಇರುವ ಜಮೀನು ಮಾಲೀಕರು ಒತ್ತುವರಿ ಮಾಡಿಕೊಂಡು ಬೆಳೆ ಬೆಳೆಯುವ ಜೊತೆಗೆ ತಮ್ಮದೇ ಜಮೀನು ಎನ್ನುವಂತೆ ಕೆಲವು ಕಡೆ ತಂತಿಬೇಲಿ ಹಾಕಿಕೊಂಡಿದ್ದಾರೆ. ಇನ್ನು ಕೆಲವರು ಕೆರೆಯ ತಗ್ಗಿನ ಭಾಗಕ್ಕೆ ಮಣ್ಣು ತುಂಬಿ, ಜಮೀನನ್ನು ಸಮತಟ್ಟು ಮಾಡಿಕೊಂಡಿರುವುದು ಜಿಲ್ಲೆಯ ವಿವಿಧೆಡೆ ಕಂಡು ಬಂದಿದೆ.

ADVERTISEMENT

ಕೆಲವರು ಕೆರೆಯ ಜಾಗವನ್ನು ಅತಿಕ್ರಮಣ ಮಾಡಿಕೊಂಡು ವಾಣಿಜ್ಯ ಚಟುವಟಿಕೆಗಳಿಗೆ ಬಳಸುವ ಹುನ್ನಾರ ನಡೆಸಿದ್ದಾರೆ. ಒಟ್ಟಾರೆ ಕೆರೆಗಳ ಒತ್ತುವರಿಯಿಂದ ವಿಸ್ತೀರ್ಣ ಕಡಿಮೆಯಾಗಿ, ನೀರು ಸಂಗ್ರಹಣಾ ಸಾಮರ್ಥ್ಯ ಇಳಿಕೆಯಾಗುತ್ತಿದೆ. ಇದು ಕೃಷಿ ಚಟುವಟಿಕೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೆ.ಸಿ.ವ್ಯಾಲಿ ಪರಿಣಾಮ ಬಿರು ಬೇಸಿಗೆಯಲ್ಲೂ ಜಿಲ್ಲೆಯ ಹಲವಾರು ಕೆರೆಗಳಲ್ಲಿ ನೀರು ತುಂಬಿಕೊಂಡಿದೆ.

ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ 5,939 ಎಕರೆ ವಿಸ್ತೀರ್ಣದ ಒಟ್ಟು 402 ಕೆರೆಗಳ ಸರ್ವೆ ಕಾರ್ಯ (ಅಳತೆ) ಪೂರ್ಣಗೊಂಡಿದೆ. ಈ ಪೈಕಿ 815 ಎಕರೆ ವಿಸ್ತೀರ್ಣದ 344 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಶ್ರೀನಿವಾಸಪುರ ತಾಲ್ಲೂಕಿನಲ್ಲೇ 138 ಕೆರೆಗಳ 505 ಎಕರೆ ವಿಸ್ತೀರ್ಣದ ಒತ್ತುವರಿ ತೆರವುಗೊಳಿಸಲಾಗಿದೆ.

ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಚುರುಕು ಮುಟ್ಟಿಸಿರುವ ಜಿಲ್ಲಾಧಿಕಾರಿ ಎಂ.ಆರ್‌.ರವಿ ಆಗಾಗ್ಗೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತ ಸಭೆ ನಡೆಸುತ್ತಲೇ ಇದ್ದಾರೆ.

‘ಜಿಲ್ಲೆಯ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತು ಕಾರ್ಯನಿರ್ವಾಹಣಾ ಪ್ರಾಧಿಕಾರ ರಚಿಸಲಾಗಿದೆ. ಕೆರೆಗಳ ಸಮಗ್ರ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಸಂಬಂಧಪಟ್ಟ ಇಲಾಖೆಗಳು, ಸಂಸ್ಥೆಗಳ ಜೊತೆ ಸಮನ್ವಯತೆ ಸಾಧಿಸಬೇಕು. ಅದಕ್ಕೆ ಸಮೀಕ್ಷೆ ನಡೆಸಿ ಕೆರೆ ಪ್ರದೇಶದ ಗಡಿ ಗುರುತಿಸಬೇಕು. ಕೆರೆ ಪ್ರದೇಶದಲ್ಲಿ ಯಾವುದೇ ಒತ್ತುವರಿ ಆಗದಿರುವುದನ್ನು ಖಚಿತಪಡಿಸಿಕೊಳ್ಳಬೇಕು, ಒತ್ತುವರಿ ಆಗಿದ್ದರೆ ತೆರವುಗೊಳಿಸಬೇಕು. ಈ ನಿಟ್ಟಿನಲ್ಲಿ ಡಿಡಿಎಲ್‌ಆರ್‌ ಹಾಗೂ ಎಡಿಎಲ್‌ಆರ್‌ಗಳು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು’ ಎಂದು ಈಗಾಗಲೇ ನಿರ್ದೇಶನ ನೀಡಿದ್ದಾರೆ.

ಕೆರೆಗಳ ಒತ್ತುವರಿ ತೆರವುಗೊಳಿಸಿದ ಬಳಿಕ ಆ ಕೆರೆಯನ್ನು ಸಂಬಂಧಪಟ್ಟ ಇಲಾಖೆಯ ಸುಪರ್ದಿಗೆ ಒಪ್ಪಿಸಿ, ಇಲಾಖೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಅಧಿಸೂಚನೆ ಹೊರಡಿಸಬೇಕು. ಮತ್ತೆ ಒತ್ತುವರಿಯಾದರೆ ಆಯಾ ಅಧಿಕಾರಿಯನ್ನು ಹೊಣೆಗಾರರನ್ನಾಗಿಸಿ ಮೊಕದ್ದಮೆ ದಾಖಲಿಸಬೇಕು ಎಂದು ಕೂಡ ತಾಕೀತು ಮಾಡಿದ್ದಾರೆ.

ಜಿಲ್ಲೆಯಲ್ಲಿ ಮುಳಬಾಗಿಲು (803) ಹಾಗೂ ಶ್ರೀನಿವಾಸಪುರ (617) ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಕೆರೆಗಳಿವೆ.

ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ 2,382 ಕೆರೆ, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 138 ಕೆರೆಗಳಿದ್ದು, ಇನ್ನುಳಿದವರು ಗ್ರಾಮ ಪಂಚಾಯಿತಿ ಹಾಗೂ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿವೆ. ಹಲವಾರು ಕೆರೆಗಳಿಗೆ ದಾಖಲೆಗಳೂ ಇಲ್ಲ.

ಕೋಲಾರ ತಾಲ್ಲೂಕಿನ ಲಕ್ಷ್ಮಿಸಾಗರ ಬಳಿಯ ಕೆರೆ

Highlights - ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ಸಭೆ ಮೇಲೆ ಸಭೆ 2 ತಿಂಗಳಲ್ಲಿ 5,939 ಎಕರೆ ವಿಸ್ತೀರ್ಣದ ಒಟ್ಟು 402 ಕೆರೆಗಳ ಸರ್ವೆ ಕಾರ್ಯ ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರದಲ್ಲಿ ಹೆಚ್ಚು ಕೆರೆಗಳು

Cut-off box - ಕೋಲಾರ ಜಿಲ್ಲೆಯಲ್ಲಿರುವ ಕೆರೆಗಳು ಅವುಗಳ ವಿಸ್ತೀರ್ಣ ತಾಲ್ಲೂಕು; ಕೆರೆಗಳು; ಎಕರೆ ಶ್ರೀನಿವಾಸಪುರ; 617; 17001 ಮಾಲೂರು; 541; 8739 ಕೋಲಾರ; 566; 19973 ಬಂಗಾರಪೇಟೆ; 387; 4785 ಕೆಜಿಎಫ್; 318; 7435 ಮುಳಬಾಗಿಲು; 803; 17261 ಒಟ್ಟು; 3232; 75194

Cut-off box - ಒತ್ತುವರಿ ತೆರವಿಗೆ ಸಿ.ಎಂ ಗಡುವು ರಾಜ್ಯದಲ್ಲಿ ಬಾಕಿ ಇರುವ ಕೆರೆಗಳ ಸರ್ವೆ ಕಾರ್ಯವನ್ನು ಬೇಗನೇ ಪೂರ್ಣಗೊಳಿಸಬೇಕು. ಕೆರೆ ಅಂಗಳಗಳನ್ನು ಒತ್ತುವರಿ ಮಾಡಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಿ ಒತ್ತುವರಿ ತೆರವುಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದರು. ಕೆರೆಗಳ ಸಮೀಕ್ಷೆಯನ್ನು ಮುಂದಿನ 30 ದಿನಗಳ ಒಳಗೆ ಮುಗಿಸಬೇಕೆಂದು ಎಲ್ಲ ಜಿಲ್ಲಾ ಪಂಚಾಯಿತಿಗಳ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಕೂಡ ಈಚೆಗೆ ಸೂಚಿಸಿದ್ದಾರೆ.

Cut-off box - 15ರೊಳಗೆ ಸರ್ವೆ ಮುಗಿಸಿ ಕೆರೆಗಳ ಸರ್ವೆ ಕಾರ್ಯ ವಿಳಂಬವಾಗುತ್ತಿರುವುದಕ್ಕೆ ಸರ್ವೆ ಇಲಾಖೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಎಂ.ಆರ್‌.ರವಿ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತ ಸಭೆಯಲ್ಲಿ ಈಗಾಗಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಮೇ 15ರೊಳಗೆ ಎಲ್ಲಾ ಕೆರೆಗಳನ್ನು ಸರ್ವೆ ಮಾಡಿ ಒತ್ತುವರಿ ತೆರವಿಗೆ ಕ್ರಮ ವಹಿಸಬೇಕು. ಕೆರೆಗಳ ಪುನರುಜ್ಜೀವನಗೊಳಿಸಿ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.