ADVERTISEMENT

ಮಾವಿನ ಮರಕ್ಕೆ ಕೊಡಲಿ ಹಾಕಿದ ಬೆಳೆಗಾರ

ಆರ್.ಚೌಡರೆಡ್ಡಿ
Published 29 ಜನವರಿ 2021, 2:01 IST
Last Updated 29 ಜನವರಿ 2021, 2:01 IST
ಯಾಂತ್ರಿಕ ರಂಪದಿಂದ ಮಾವಿನ ಮರದ ಕೊಂಬೆ ರೆಂಬೆ ಕತ್ತರಿಸುತ್ತಿರುವುದು
ಯಾಂತ್ರಿಕ ರಂಪದಿಂದ ಮಾವಿನ ಮರದ ಕೊಂಬೆ ರೆಂಬೆ ಕತ್ತರಿಸುತ್ತಿರುವುದು   

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಫಲ ಕೊಡದ ಮಾವಿನ ಮರಗಳನ್ನು ಕೊಯ್ದು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ. ಅಲ್ಪಸ್ವಲ್ಪ ಹೂವನ್ನು ಮುಡಿಗೇರಿಸಿಕೊಂಡಿರುವ ಮರಗಳೂ ಧರೆಗುರುಳುತ್ತಿವೆ.

ಬದಲಾದ ಪರಿಸ್ಥಿತಿಯಲ್ಲಿ ತಾಲ್ಲೂಕಿನ ಜನರ ಜೀವನಾಡಿಯಾದ ಮಾವು ಕೈಕೊಟ್ಟಿದೆ. ಮಳೆ ಹಾಗೂ ಅಂತರ್ಜಲದ ಕೊರತೆಯಿಂದಾಗಿ ಮಾವಿನ ಮರಗಳು ಒಣಗುತ್ತಿವೆ. ಕೊಂಬೆ ರೆಂಬೆಯಲ್ಲಿ ಒಣಗಿದ ಕಡ್ಡಿ ಕಾಣಿಸಿಕೊಂಡರೆ, ಹೂ ಬರುವುದು ನಿಲ್ಲುತ್ತದೆ. ದಿನ ಕಳೆದಂತೆ ಅವು ಒಣಗಿ ಹುಳುಗಳ ಪಾಲಾಗುತ್ತವೆ. ಅವುಗಳನ್ನು ತೋಟಗಳಲ್ಲಿ ಉಳಿಸಿಕೊಂಡರೂ ಲಾಭವಿಲ್ಲದ ಪರಿಣಾಮವಾಗಿ ತೆರವುಗೊಳಿಸುವ ಕಾರ್ಯ ಚುರುಕುಗೊಂಡಿದೆ.

ತಾಲ್ಲೂಕಿನಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವನ್ನು ಬೆಳೆಯಲಾಗುತ್ತಿದೆ. ವಿವಿಧ ವಯೋಮಾನದ ಮರಗಳು ತಾಲ್ಲೂಕಿನಾದ್ಯಂತ ಹರಡಿಕೊಂಡಿವೆ. ಇತ್ತೀಚಿನ ವರ್ಷಗಳಲ್ಲಿ ಎಳೆಯ ಮರಗಳಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಹೂ ಬರುತ್ತಿದೆ. ಉಳಿದಂತೆ ವಯಸ್ಸಾದ ಮರಗಳನ್ನು ಬಂಜೆತನ ಕಾಡುತ್ತಿದೆ.

ADVERTISEMENT

ಇದರಿಂದ ಬೇಸತ್ತ ರೈತರು ಒಲ್ಲದ ಮನಸ್ಸಿನಿಂದ ಮಾವಿನ ಮರಗಳನ್ನು ಕಡಿದುಹಾಕುತ್ತಿದ್ದಾರೆ. ವಿಚಿತ್ರವೆಂದರೆ, ಸೌದೆಗೆ ಬೆಲೆ ಇಲ್ಲ. ಹಾಗಾಗಿ ಮರದ ವ್ಯಾಪಾರಿಗಳು ಮಾವಿನ ಮರ ಖರೀದಿಸಲು ಮುಂದಾಗುತ್ತಿಲ್ಲ. ಉಚಿತವಾಗಿ ನೀಡಿದರೆ ಮಾತ್ರ ಮರಗಳನ್ನು ಕಡಿದು ಸಾಗಿಸುತ್ತಿದ್ದಾರೆ. ಹಣ ಕೊಟ್ಟು ಬುಡ ತೆಗೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ಅಂದಾಜಿನಂತೆ ತಾಲ್ಲೂಕಿನಲ್ಲಿ ಈಗಾಗಲೆ 2 ಸಾವಿರ ಹೆಕ್ಟೇರ್‌ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಮಾವಿನ ಮರಗಳನ್ನು ತೆರವುಗೊಳಿಸಲಾಗಿದೆ. ಹೂ ಬರುತ್ತಿರುವ ಈ ದಿನಗಳಲ್ಲೂ ಮರಗಳು ನೆಲಕಚ್ಚುತ್ತಿವೆ.

‘ಬಂಜೆ ಮರಗಳನ್ನು ತೋಟದಲ್ಲಿಟ್ಟುಕೊಂಡು ಏನು ಮಾಡುವುದು? ಕುಟುಂಬಕ್ಕೆ ಅನ್ನ ಕೊಡುತ್ತಿದ್ದ ಮರಗಳು ಒಣಗಿ ನಿಸ್ಪ್ರಯೋಜಕವಾಗುತ್ತಿವೆ. ಮನಸ್ಸಿಲ್ಲದ ಮನಸ್ಸಿನಿಂದ ಮರಗಳನ್ನು ತೆಗೆಯಲಾಗುತ್ತಿದೆ’ ಎಂಬುದು ಮಾವು ಬೆಳೆಗಾರರ ಅಳಲು.

ಗ್ರಾಮೀಣ ಪ್ರದೇಶದಲ್ಲಿ ಅಡುಗೆ ಅನಿಲ ಬಳಸಿ ಅಡುಗೆ ಮಾಡಲು ಪ್ರಾರಂಭಿಸಿದ ಮೇಲೆ, ಸೌದೆಗೆ ಬೇಡಿಕೆ ಇಲ್ಲ. ಇನ್ನು ಪಟ್ಟಣ ಪ್ರದೇಶದಲ್ಲಿ ಒಲೆಗಾಗಿ ಸೌದೆ ಖರೀದಿ ನಿಂತಿದೆ. ಹಾಗಾಗಿ ಮರದ ವ್ಯಾಪಾರಿಗಳು ಮಾವಿನ ಮರಗಳನ್ನು ಕೊಯ್ದು ಪ್ಲೇವುಡ್ ತಯಾರಿಕಾ ಕಾರ್ಖಾನೆಗಳಿಗೆ ಮಾರುತ್ತಿದ್ದಾರೆ. ಆದರೆ, ರೈತರಿಗೆ ಕಾಸು ಕೊಡುತ್ತಿಲ್ಲ. ಕೊಟ್ಟರೂ ಅತ್ಯಲ್ಪ ಮಾತ್ರ.

ಕೆಲವರು ಮಾವಿನ ಮಗಳನ್ನು ತೆರವುಗೊಳಿಸಿ, ಆ ಜಾಗದಲ್ಲಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಇನ್ನು ಕೆಲವರು ಮಾವಿನ ಬುಡಗಳನ್ನು ತೆಗೆದು ಮತ್ತೆ ಹೊಸದಾಗಿ, ಮಾವಿನ ಸಸಿ ನಾಟಿ ಮಾಡುತ್ತಿದ್ದಾರೆ. ಬೆರಳೆಣಿಕೆಯಷ್ಟು ರೈತರು ಮಾತ್ರ ಚಿಗುರೊಡೆಯಲು ಬಿಟ್ಟು ಕಡ್ಡಿ ಕಸಿ ಮಾಡಿಸುತ್ತಿದ್ದಾರೆ. ಮಾವನ್ನು ಅದೃಷ್ಟದ ಬೆಳೆ ಎಂದು ನಂಬಿರುವ ಹೆಚ್ಚಿನ ಸಂಖ್ಯೆಯ ರೈತರು ಮತ್ತೆ ಮಾವಿಗೆ ಮಣೆ ಹಾಕುತ್ತಿದ್ದಾರೆ.

ನೀರಿನ ಕೊರತೆ ಎದುರಿಸುತ್ತಿರುವ ಕಡೆ ಗೋಡಂಬಿ ಬೆಳೆಸುವುದು ಲಾಭದಾಯಕ ಎಂದು ಸಾರಲಾಗುತ್ತಿದ್ದರೂ, ರೈತರು ಕಿವಿಗೊಡುತ್ತಿಲ್ಲ. ಗೋಡಂಬಿ ವಿಸ್ತರಣಾ ಯೋಜನೆ ಲಾಭ ಪಡೆದುಕೊಳ್ಳಲು ಮುಂದಾಗುತ್ತಿಲ್ಲ. ಅವರ ಮೊದಲ ಹಾಗೂ ಕೊನೆಯ ಆಯ್ಕೆ ಮಾವು ಮಾತ್ರ ಆಗಿದೆ. ಮಾವಿನ ಮರಗಳ ಮಧ್ಯೆ ಅಂತರ ಬೇಸಾಯ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.