
ವೇಮಗಲ್: ಈ ಬಾರಿ ಉತ್ತಮ ಮಳೆಯಿಂದ ಹೋಬಳಿಯಲ್ಲಿ ಪ್ರಮುಖ ಬೆಳೆಯಾದ ರಾಗಿಯು ಸಮೃದ್ಧವಾಗಿ ಬೆಳೆದು, ಫಸಲಿಗೆ ಬಂದಿದೆ. ಹಾಗಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ವೇಮಗಲ್ ಹೋಬಳಿಯ ಕ್ಯಾಲನೂರು, ಶೆಟ್ಟಿಹಳ್ಳಿ, ಕಡಕಟ್ಟೂರು, ಚನ್ನಪ್ಪನಹಳ್ಳಿ, ಪುರಹಳ್ಳಿ, ಬೆಳಮಾರನಹಳ್ಳಿ, ಮಲಿಯಪ್ಪನಹಳ್ಳಿ, ಕಲ್ವಾ ಮಂಜಲಿ, ಸೀತಿ, ಬೈರಂಡಹಳ್ಳಿ, ಚಲ್ಡಿಗಾನಹಳ್ಳಿ, ಬೆಟ್ಟಹೂಸಪೂರ ಸೇರಿದಂತೆ ವಿವಿಧೆಡೆ ರಾಗಿ ಬೆಳೆ ಸಮೃದ್ಧವಾಗಿ ಬೆಳೆದು ನಿಂತಿದೆ.
ಕಳೆದ ಬಾರಿ ಮಳೆ ಕೊರತೆಯಿಂದ ಬಿತ್ತಿದ ಬೀಜಕ್ಕೂ ಕುತ್ತು ಬಂದಿತ್ತು. ಭಾರೀ ನಷ್ಟ ಅನುಭವಿಸಬೇಕಾಯಿತು. ಜಾನುವಾರುಗಳು ಮೇವಿನ ಕೊರತೆ ಎದುರಿಸಬೇಕಾಗಿತ್ತು. ಈ ಬಾರಿ ಉತ್ತಮ ಮಳೆಯಿಂದ ರಾಗಿ ಬೆಳೆ ಬಿತ್ತನೆ ಮಾಡಿದ್ದು, ಸಮೃದ್ಧವಾಗಿ ಬೆಳೆದು ನಿಂತಿದೆ.
ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ರೈತರಿಗೆ, ಬೆಲೆ ಇಳಿಕೆಯ ಭಯವೂ ಕಾಡುತ್ತಿದೆ. ಪ್ರಸ್ತುತ ರಾಗಿಗೆ ಉತ್ತಮ ಬೆಲೆ ಇದ್ದು, ಪೂರೈಕೆ ಹೆಚ್ಚಾಗಿ ಅದರ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ಆದರೂ, ಈ ಬಾರಿ ಉತ್ತಮ ಫಸಲು ಬಂದು ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ ರೈತರು.
ಈಗಾಗಲೇ ರಾಗಿ ಖರೀದಿಗೆ ನೋಂದಣಿ ಪ್ರಾರಂಭವಾಗಿದ್ದು ರೈತರು ಕೋಲಾರದ ಗದ್ದೆ ಕಣ್ಣೂರು ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬಹುದು.ಶ್ರೀಧರ್ ಕೃಷಿ ಅಧಿಕಾರಿಗಳು ವೇಮಗಲ್ ರೈತ ಸಂಪರ್ಕ ಕೇಂದ್ರ
ಸರ್ಕಾರವು ರೈತರಿಂದ ರಾಗಿ ಖರೀದಿಗೆ ಹೋಬಳಿ ಮಟ್ಟದಲ್ಲಿ ಕೂಡಲೇ ರಾಗಿ ಖರೀದಿ ಕೇಂದ್ರ ತೆರೆಯಬೇಕು. ರೈತರು ಕೇಂದ್ರಕ್ಕೆ ರಾಗಿ ನೀಡಿದ 10 ದಿನದೊಳಗೆ ಹಣ ಪಾವತಿಯಾಗಬೇಕು ಎಂದರು.ಕಲ್ವ ಮಂಜಲಿ ರಾಮು ಶಿವಣ್ಣ ರಾಜ್ಯ ಯುವ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.