ADVERTISEMENT

ಕೆ.ಸಿ ವ್ಯಾಲಿ 2ನೇ ಹಂತದ ಯೋಜನೆಗೆ ಟೆಂಡರ್

ಸದನದಲ್ಲಿ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 2:13 IST
Last Updated 10 ಫೆಬ್ರುವರಿ 2021, 2:13 IST

ಕೋಲಾರ: ‘ಅವಿಭಜಿತ ಕೋಲಾರ ಜಿಲ್ಲೆಯ ಅಂತರ್ಜಲ ವೃದ್ಧಿಗಾಗಿ ಜಾರಿಗೊಳಿಸಿರುವ 257 ಕೆರೆ ತುಂಬಿಸುವ ಕೆ.ಸಿ ವ್ಯಾಲಿ 2ನೇ ಹಂತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತದೆ’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಸದನದಲ್ಲಿ ಮಂಗಳವಾರ ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘₹ 455 ಕೋಟಿ ಅಂದಾಜು ವೆಚ್ಚದಲ್ಲಿ ಕೆ.ಸಿ ವ್ಯಾಲಿ ಯೋಜನೆ 2ನೇ ಹಂತದ ಕಾಮಗಾರಿಗೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ’ ಎಂದು ತಿಳಿಸಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶಕ್ಕೆ ರೂಪಿಸಿರುವ ಕೆ.ಸಿ ವ್ಯಾಲಿ ಯೋಜನೆಗೆ ನೂರಾರು ಕೋಟಿ ಖರ್ಚು ಮಾಡಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಕೆರೆಗಳಿಗೆ ನೀರು ಹರಿಯುತ್ತಿಲ್ಲ’ ಎಂದು ನಾರಾಯಣಸ್ವಾಮಿ ಸದನದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ‘ಈಗಾಗಲೇ ₹ 1,323 ಕೋಟಿ ಅಂದಾಜು ವೆಚ್ಚದಲ್ಲಿ ಕೆ.ಸಿ ವ್ಯಾಲಿ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮೊದಲ ಹಂತದಲ್ಲಿ 126 ಕೆರೆ ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ. ಕೆರೆಗಳು ಭರ್ತಿಯಾದರೆ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಯೋಜನೆಯಿಂದ ಈವರೆಗೆ 7.10 ಟಿಎಂಸಿ ನೀರು ಪಂಪ್ ಮಾಡಲಾಗಿದ್ದು, 82 ಕೆರೆ ಮತ್ತು 113 ಚೆಕ್‌ಡ್ಯಾಂಗಳಿಗೆ ನೀರು ತಂಬಿಸಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಬಿಡಬ್ಲ್ಯೂಎಸ್‌ಎಸ್‌ಬಿ) ಕರಾರಿನಂತೆ ದಿನಕ್ಕೆ 400 ಎಂಎಲ್‌ಡಿ ನೀರು ಹರಿಸಬೇಕು. ಸದ್ಯ 300 ಎಂಎಲ್‌ಡಿ ಮಾತ್ರ ನೀರು ಬರುತ್ತಿದೆ. ಯೋಜನೆಯ ಕರಾರಿನಂತೆ ಇನ್ನೂ 100 ಎಂಎಲ್‌ಡಿ ನೀರು ಹರಿಸಬೇಕು’ ಎಂದು ನಾರಾಯಣಸ್ವಾಮಿ ಆಗ್ರಹಿಸಿದರು.

ಸಂಧಾನ ವಿಫಲ: ‘ಜಿಲ್ಲೆಯ ಕೆರೆಗಳಲ್ಲಿ ಶೇ 50ರಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಿಸಲು ನಿರ್ಧರಿಸಲಾಗಿತ್ತು. ಆದರೆ, ಕೆರೆಗಳು ಪೂರ್ಣ ತುಂಬಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. ಈ ಸಂಬಂಧ ರೈತರು, ಗ್ರಾಮಸ್ಥರ ಜತೆ ನಡೆಸಿದ ಸಂಧಾನ ಸಭೆ ವಿಫಲವಾಗುದೆ. ಶೇ 50ರಷ್ಟು ಕೆರೆ ತುಂಬಿಸಿ ಮುಂದಿನ ಕೆರೆಗಳಿಗೆ ನೀರು ಹರಿಸಲು ಸಂಧಾನ ನಡೆಸಲಾಗುತ್ತಿದೆ’ ಎಂದು ಸಚಿವರು ವಿವರಿಸಿದರು.

‘ಯೋಜನೆ ವ್ಯಾಪ್ತಿಯ ಕಾಲುವೆ ಉದ್ದಕ್ಕೂ ಚೆಕ್‌ಡ್ಯಾಂಗಳ ಸಾಮರ್ಥ್ಯ ಹೆಚ್ಚಿರುವುದಿರಂದ ನೀರು ಬೇಗ ಮುಂದಿನ ಕೆರೆಗಳಿಗೆ ಹರಿಯುತ್ತಿಲ್ಲ. ಜತೆಗೆ ಶೇ 70ರಷ್ಟು ನೀರನ್ನು ಗುರುತ್ವಾಕರ್ಷಣೆ ಮೂಲಕವೇ ಹರಿಸುತ್ತಿದ್ದು, ಈ ಮಾರ್ಗದಲ್ಲಿ ಮರಳುಗಾರಿಕೆಯಿಂದ ಕೆರೆಗಳ ನೀರಿನ ಹಿಡಿತದ ಸಾಮರ್ಥ್ಯ ಕಡಿಮೆಯಾಗಿದೆ’ ಎಂದು ಸ್ಪಷ್ಟಪಡಿಸಿದರು.

ನೀರು ಕಳವು: ‘ರೈತರು ಅನಧಿಕೃತವಾಗಿ ಕೆ.ಸಿ ವ್ಯಾಲಿ ನೀರನ್ನು ಕಳವು ಮಾಡಿ ಕೃಷಿ ಚಟುವಟಿಕೆಗೆ ಬಳಸುತ್ತಿದ್ದಾರೆ. ಈ ಸಂಬಂಧ ಕಂದಾಯ ನಿರೀಕ್ಷಕರ ನೇತೃತ್ವದಲ್ಲಿ ದಾಳಿ ನಡೆಸಿ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ, ಪಂಪ್ ವಶಕ್ಕೆ ಪಡೆದು ಕ್ರಮ ಜರುಗಿಸಲಾಗಿದೆ. ನೀರು ಕಳವು ಮಾಡುವ ರೈತರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.