ಕೋಲಾರ: ಉದ್ಘಾಟನೆಗೆ ಮುನ್ನವೇ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕಾರಿಡಾರ್‌ನಲ್ಲಿ ವಾಹನಗಳ ಸಂಚಾರಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು (ಎನ್‌ಎಚ್‌ಎಐ) ಟೋಲ್ ಶುಲ್ಕ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ್ದು, ಸದ್ಯದಲ್ಲೇ ಜಾರಿಗೆ ಬರಲಿದೆ.
ಕಾರು, ಜೀಪು ವಾಹನ ಚಾಲಕರು ಹೊಸಕೋಟೆ ಸಮೀಪದ ಹೆಡಗಿನಬೆಲೆ ಟೋಲ್ ಪ್ಲಾಜಾದಿಂದ ಕೆಜಿಎಫ್‌ನ ಸುಂದರಪಾಳ್ಯ ಟೋಲ್ ಪ್ಲಾಜಾವರೆಗಿನ ಸಂಚಾರಕ್ಕೆ 71 ಕಿ.ಮೀಗೆ ₹ 185 ಶುಲ್ಕ ಪಾವತಿಸಬೇಕಾಗುತ್ತದೆ. ಅದೇ ದಿನ ಮರು ಸಂಚಾರ ಮಾಡುವುದಾದರೆ ₹ 275 ದರ ತೆರಬೇಕು. ಕೆಜಿಎಫ್‌ನ ಸುಂದರಪಾಳ್ಯ ಟೋಲ್ ಪ್ಲಾಜಾದಿಂದ ಹೊಸಕೋಟೆ ಕಡೆಗೆ ಬರುವಾಗ ತುಸು ಹೆಚ್ಚು ಶುಲ್ಕವಿರಲಿದ್ದು, ಏಕಮುಖ ಸಂಚಾರಕ್ಕೆ ₹ 190, ಮರು ಸಂಚಾರಕ್ಕೆ ₹ 280 ಶುಲ್ಕ ಇರಲಿದೆ. ತಿಂಗಳ ಪಾಸ್‌ಗೆ (50 ಟ್ರಿಪ್–ಏಕಮುಖ ಸಂಚಾರ) ₹ 6,105 ಶುಲ್ಕವಿರಲಿದೆ.
ಇದೇ ರೀತಿ ಬೇರೆ ಬೇರೆ ಮಾದರಿಯ ವಾಹನಗಳಿಗೆ, ಕಿ.ಮೀಗೆ ಅನುಗುಣವಾಗಿ ಶುಲ್ಕದಲ್ಲಿ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಪ್ರಯಾಣದ ಕಿ.ಮೀಗೆ ತಕ್ಕಂತೆ ಟೋಲ್ ಶುಲ್ಕ ವಿಧಿಸಲಾಗುತ್ತದೆ.
‘ಎಕ್ಸ್‌ಪ್ರೆಸ್ ವೇ ಕಾರಿಡಾರ್‌ನಲ್ಲಿ ಟೋಲ್ ಶುಲ್ಕ ಸಂಗ್ರಹ ಇನ್ನೂ ಆರಂಭವಾಗಿಲ್ಲ. ಯಾವಾಗ ಜಾರಿ ಮಾಡಬೇಕು ಎಂಬುದನ್ನು ಚರ್ಚಿಸಿ ನಿರ್ಧರಿಸಲಾಗುವುದು. ಕೆಲವೊಂದು ಪ್ರಕ್ರಿಯೆ ನಡೆಯಬೇಕಿದೆ’ ಎಂದು ಯೋಜನಾ ನಿರ್ದೇಶಕಿ ಅರ್ಚನಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಹೆದ್ದಾರಿಯಲ್ಲಿ ಹೊಸಕೋಟೆ ಸಮೀಪ ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಹೆಡಗಿನಬೆಲೆಯಲ್ಲಿ ಟೋಲ್ ಪ್ಲಾಜಾ ಇದೆ. ಅದನ್ನು ಬಿಟ್ಟರೆ ಕೆಜಿಎಫ್‌ನ ಬೆಮಲ್ ನಗರ ಬಳಿ ಕೃಷ್ಣಾವರಂನಲ್ಲಿ ಟೋಲ್ ಪ್ಲಾಜಾ ಇದೆ. ಇನ್ನು ಕೊನೆಯದಾಗಿ ಕೆಜಿಎಫ್ ತಾಲ್ಲೂಕಿನ ಗಡಿ ಸುಂದರಪಾಳ್ಯದಲ್ಲೊಂದು ಟೋಲ್ ಪ್ಲಾಜಾ ಇದೆ. ಹೊಸಕೋಟೆಯಿಂದ ಇದೇ ರಸ್ತೆಯಲ್ಲಿ ಮಾಲೂರು ಕಡೆಗೆ ಪ್ರಯಾಣಿಸಬೇಕಾದರೆ ಅಗ್ರಹಾರ ಬಳಿ ಟೋಲ್ ಪ್ಲಾಜಾ ಸಿಗುತ್ತದೆ.
ಹೊಸಕೋಟೆಯಿಂದ ಕೆಜಿಎಫ್‌ಗೆ ತೆರಳುವ ವಾಹನ ವಾಹನವನ್ನು ಹೆಡಗಿನಬೆಲೆ ಟೋಲ್ ಪ್ಲಾಜಾದಲ್ಲಿ ಸ್ಕ್ಯಾನ್ ಮಾಡಲಾಗುತ್ತದೆ. ಕಾರು, ಜೀಪು ಚಾಲಕರು ಕೃಷ್ಣಾವರಂ ಟೋಲ್ ದಾಟಬೇಕಾದರೆ ₹ 155, ಸುಂದರಪಾಳ್ಯದ ಟೋಲ್ ಪ್ಲಾಜಾ ದಾಟಬೇಕಾದರೆ ₹ 185 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮಾಲೂರು ಕಡೆಗೆ ಪ್ರಯಾಣಿಸುವವರು ಅಗ್ರಹಾರ ಟೋಲ್ ಪ್ಲಾಜಾದಲ್ಲಿ ₹ 65 ಹಣ ಪಾವತಿಸಬೇಕು.
ಸದ್ಯ ಈ ರಸ್ತೆಯಲ್ಲಿ ಕಾರು, ಜೀಪು, ಮಿನಿ ಬಸ್, ಬಸ್, ಲಾರಿಗಳ ಪ್ರವೇಶಕ್ಕೆ ಮಾತ್ರ ಅವಕಾಶವಿದ್ದು, ದ್ವಿಚಕ್ರ ವಾಹನ, ಟ್ರ್ಯಾಕ್ಟರ್ ಹಾಗೂ ಆಟೊಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಲಘು ವಾಣಿಜ್ಯ, ಸರಕು ವಾಹನ, ಮಿನಿ ಬಸ್‌ಗಳಿಗೆ ಹೊಸಕೋಟೆಯಿಂದ ಕೆಜಿಎಫ್ (ಸುಂದರಪಾಳ್ಯ) ಏಕಮುಖ ಟ್ರಿಪ್‌ಗೆ ₹ 295 ಹಾಗೂ ಮರು ಟ್ರಿಪ್‌ಗೆ ₹ 445 ಶುಲ್ಕ ನಿಗದಿ ಮಾಡಲಾಗಿದೆ. ಟ್ರಕ್, ಬಸ್ ಇನ್ನಿತರ ವಾಹನಗಳಿಗೆ ಏಕಮುಖ ಟ್ರಿಪ್‌ಗೆ ₹ 620 ಹಾಗೂ ಮರು ಟ್ರಿಪ್‌ಗೆ ₹ 930 ಶುಲ್ಕ ನಿಗದಿ ಮಾಡಲಾಗಿದೆ. ಸುಂದರಪಾಳ್ಯದಿಂದ ಹೊಸಕೋಟೆ ಕಡೆಗೆ ಶುಲ್ಕದಲ್ಲಿ ಕ್ರಮವಾಗಿ ₹ 10 ಹಾಗೂ ₹ 15 ಹೆಚ್ಚಾಗುತ್ತದೆ.
ಸುಮಾರು ₹ 17 ಸಾವಿರ ಕೋಟಿ ವೆಚ್ಚದ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್ ವೇ ಕಾರಿಡಾರ್‌ನ ರಾಜ್ಯದ ಪಾಲಿನ ಕಾಮಗಾರಿ ಈಗಾಗಲೇ ಮುಗಿದು, ಏಳು ತಿಂಗಳಿನಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ತಮಿಳುನಾಡಿನ ಭಾಗದ ಕಾಮಗಾರಿ ಇನ್ನೂ ಮುಗಿದಿಲ್ಲ. ಹೀಗಾಗಿ, ಇನ್ನೂ ಉದ್ಘಾಟನೆಯಾಗಿಲ್ಲ.
ನಾಲ್ಕು ಪಥದ ಈ ಹೆದ್ದಾರಿಯು ಹೊಸಕೋಟೆಯಿಂದ ಮಾಲೂರು, ಬಂಗಾರಪೇಟೆ, ಬೇತಮಂಗಲ, ಕೆಜಿಎಫ್ ನಗರವನ್ನು ಸಂಪರ್ಕಿಸುತ್ತದೆ. ನಂತರ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯದ ಕೆಲ ನಗರಗಳ ಮೂಲಕ ಹಾದು ಚೆನ್ನೈ (ಶ್ರೀಪೆರಂಬುದೂರು) ತಲುಪುತ್ತದೆ. ಒಟ್ಟು 288 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇ ಇದಾಗಿದೆ. ಬೆಂಗಳೂರು–ಚೆನ್ನೈ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುವುದು ಕೂಡ ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ.
ಟೋಲ್ ಶುಲ್ಕ ಸಂಗ್ರಹಕ್ಕೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದುಎಂ.ಮಲ್ಲೇಶ್ ಬಾಬು ಸಂಸದ
ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕಾರಿಡಾರ್‌ನಲ್ಲಿ ಸದ್ಯಕ್ಕೆ ಶುಲ್ಕ ಸಂಗ್ರಹ ಮಾಡುತ್ತಿಲ್ಲ. ಜಾರಿ ಮಾಡುವ ಮುನ್ನ ಸಾರ್ವಜನಿಕರ ಗಮನಕ್ಕೆ ತರುತ್ತೇವೆಅರ್ಚನಾ ಯೋಜನಾ ನಿರ್ದೇಶಕಿ ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್
ಹೊಸಕೋಟೆಯಿಂದ ಕೆಜಿಎಫ್‌ವರೆಗಿನ ಈ ಎಕ್ಸ್‌ಪ್ರೆಸ್ ವೇ ಕಾರಿಡಾರ್‌ನಲ್ಲ್ಇ ಈಚೆಗೆ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಕೆಜಿಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 7ಕ್ಕೂ ಅಧಿಕ ಮಂದಿ ಮೃತಪಟ್ಟರೆ ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಸಂಬಂಧ ಕೆಡಿಎಫ್ ಸಭೆಯಲ್ಲಿ ಪ್ರಸ್ತಾಪವಾಗಿ ಚರ್ಚೆ ಆಗಿತ್ತು. ಪೊಲೀಸರನ್ನು ನಿಯೋಜಿಸಲು ಸಂಸದ ಎಂ.ಮಲ್ಲೇಶ್ ಬಾಬು ಸೂಚನೆ ನೀಡಿದ್ದರು. ನಿರ್ಬಂಧವಿದ್ದರೂ ದ್ವಿಚಕ್ರ ವಾಹನ ಸವಾರರು ಅನಧಿಕೃತವಾಗಿ ಹೆದ್ದಾರಿಗೆ ಪ್ರವೇಶ ಮಾಡುತ್ತಿರುವುದು ಕಂಡುಬರುತ್ತಿದೆ. ಅಲ್ಲದೇ ಕಾರುಗಳು ಅತಿ ವೇಗದಲ್ಲಿ ಚಲಿಸುತ್ತಿರುವುದು ಅಪಘಾತಕ್ಕೆ ಕಾರಣ ಎಂಬ ಚರ್ಚೆಯೂ ನಡೆದಿದೆ. ಆದರೆ ಕೆಲವೆಡೆ ಹೆದ್ದಾರಿ ನಿರ್ಮಾಣ ಅವೈಜ್ಞಾನಿಕವಾಗಿದೆ ಎಂದು ವಾಹನ ಚಾಲಕರು ದೂರಿದ್ದಾರೆ. ಗಂಟೆಗೆ ಗರಿಷ್ಠ 120 ಕಿ.ಮೀ ವೇಗ ಮಿತಿ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.