ADVERTISEMENT

ಟೊಮೆಟೊ ದರ ದಿಢೀರ್‌ ಕುಸಿತ: ವಾರದ ಹಿಂದೆ ₹750 ಇದ್ದ ಬಾಕ್ಸ್‌ ₹300ಕ್ಕೆ ಇಳಿಕೆ!

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 0:30 IST
Last Updated 3 ಸೆಪ್ಟೆಂಬರ್ 2025, 0:30 IST
ಕೋಲಾರ ಎಂಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಹರಾಜು
ಕೋಲಾರ ಎಂಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಹರಾಜು   

ಕೋಲಾರ: ಮಳೆ, ಮೋಡ ಕವಿದ ವಾತಾವರಣ ಮತ್ತು ರೋಗಬಾಧೆಯಿಂದ ಗುಣಮಟ್ಟ ಕಳೆದುಕೊಳ್ಳುತ್ತಿರುವ ಟೊಮೆಟೊ ಧಾರಣೆ ಮಾರುಕಟ್ಟೆಯಲ್ಲಿ ದಿಢೀರ್‌ ಕುಸಿತ ಕಂಡಿದೆ. 

ವಾರದ ಹಿಂದೆ ಕೋಲಾರ ಎಪಿಎಂಸಿ ಹರಾಜಿನಲ್ಲಿ ₹750ಕ್ಕೆ ಮಾರಾಟವಾಗಿದ್ದ 15 ಕೆ.ಜಿ ಟೊಮೆಟೊ ಬಾಕ್ಸ್‌ ಈಗ ₹300ಕ್ಕೆ ಕುಸಿದಿದೆ. ಗುಣಮಟ್ಟದ ಟೊಮೆಟೊ ಬಾಕ್ಸ್‌ಗೆ ಮಾತ್ರ ₹300 ಇದ್ದರೆ, ಇನ್ನುಳಿದ ಟೊಮೆಟೊ ಬಾಕ್ಸ್‌ಗಳು ಕೇವಲ ₹100ಕ್ಕೆ ಮಾರಾಟವಾಗುತ್ತಿವೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೊ ಬೆಲೆ ₹15ರಿಂದ ₹20 ಇದೆ. ಹೆಚ್ಚು ಟೊಮೆಟೊ ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಸುಗ್ಗಿ ಮುಗಿಯುತ್ತಿದೆ. ಸಾಲು, ಸಾಲು ಹಬ್ಬಗಳಿಂದಾಗಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಬೆಳೆಗಾರರು ದರ ಕುಸಿತದಿಂದ ನಿರಾಶರಾಗಿದ್ದಾರೆ.

ADVERTISEMENT

ಎಪಿಎಂಸಿ ಮಾರುಕಟ್ಟೆಗೆ ಮಂಗಳವಾರ 17 ಸಾವಿರ ಕ್ವಿಂಟಲ್‌ ಅಂದರೆ 1.25 ಲಕ್ಷ ಬಾಕ್ಸ್‌ ಟೊಮೆಟೊ ಆವಕವಾಗಿದೆ. ಹಿಂದೆ ಇದೇ ಅವಧಿಯಲ್ಲಿ ದಿನಕ್ಕೆ 30 ಸಾವಿರ ಕ್ವಿಂಟಲ್‌ವರೆಗೆ ಟೊಮೆಟೊ ಮಾರುಕಟ್ಟೆಗೆ ಪೂರೈಕೆ ಆಗುತಿತ್ತು.

‘ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ರಾಜ್ಯಗಳಲ್ಲಿ ಟೊಮೆಟೊಗೆ ಬೇಡಿಕೆ ಇದೆ. ಗುಣಮಟ್ಟದ ಟೊಮೆಟೊ ಮಾರುಕಟ್ಟೆಗೆ ಬರುತ್ತಿಲ್ಲ. ಗುಣಮಟ್ಟವಿಲ್ಲದಿದ್ದರೆ ಖರೀದಿ ಮಾಡಲ್ಲ. ಲಾರಿಯಲ್ಲಿ ಒಯ್ದರೂ ಮಾರಾಟವಾಗದೆ ಟೊಮೆಟೊ ಹಾಳಾಗುತ್ತಿದೆ. ಹೀಗಾಗಿ, ಟೊಮೆಟೊ ಸಾಗಿಸಲು ವರ್ತಕರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ಕಿರಣ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ ಟೊಮೆಟೊ ಬೆಳೆಯುವ ಪ್ರದೇಶದ ವಿಸ್ತೀರ್ಣ ತಗ್ಗಿಲ್ಲ. ಹವಾಮಾನ ವೈಪರೀತ್ಯ, ರೋಗಬಾಧೆ ಕಾರಣಗಳಿಂದ ಫಸಲು ಕಡಿಮೆ ಆಗಿದೆ ಎನ್ನುತ್ತಾರೆ ಅವರು.

ಕೋಲಾರದ ಎಪಿಎಂಸಿ ಟೊಮೆಟೊ ಮಾರಾಟದಲ್ಲಿ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿದೆ. ಚಿತ್ರದುರ್ಗದ ಚಳ್ಳಕೆರೆ ಸೇರಿ ವಿವಿಧೆಡೆಯ ಟೊಮೆಟೊ ಕೂಡಾ ಬರಲಿದೆ. ಇಲ್ಲಿಂದ ಬೆಂಗಳೂರು ಹೊರತುಪಡಿಸಿ 15ರಿಂದ 20 ರಾಜ್ಯಗಳಿಗೆ ಪೂರೈಕೆ ಆಗಲಿದೆ.

ಮಳೆ ಕಾರಣ ಟೊಮೆಟೊ ಗುಣಮಟ್ಟಕ್ಕೆ ಹೊಡೆತಬಿದ್ದಿದೆ. ಫಸಲೂ ಕಡಿಮೆ ಆಗಿದ್ದು ದರವಿಲ್ಲ. ಹೀಗಾಗಿ ಈ ಟೊಮೆಟೊ ಋತುವಿನಲ್ಲಿ ಮಾರುಕಟ್ಟೆಗೆ ರೈತರಿಗೆ ನಷ್ಟ ಉಂಟಾಗಿದೆ.
–ಕಿರಣ್‌ ಕೋಲಾರ, ಎಪಿಎಂಸಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.