ಕೋಲಾರ: ‘ಶಾಸಕ ಗಾಲಿ ಜನಾರ್ದನ ರೆಡ್ಡಿ ವಾಲ್ಮೀಕಿ ಸಮುದಾಯದ ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಹೀಯಾಳಿಸಿದ್ದಾರೆ. ವಾಲ್ಮೀಕಿ ಸಮುದಾಯ ಹಾಗೂ ಶ್ರೀರಾಮುಲು ಅಭಿಮಾನಿಗಳ ಬಳಗವು ಈ ನಡೆಯನ್ನು ತೀವ್ರವಾಗಿ ಖಂಡಿಸಿದೆ’ ಎಂದು ಜಿಲ್ಲಾ ವಾಲ್ಮೀಕಿ ಸಮುದಾಯದ ಮುಖಂಡ ನರಸಿಂಹಯ್ಯ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಜನಾರ್ದನ ರೆಡ್ಡಿ ಅವರು ಶ್ರೀರಾಮುಲು ಸಹಕಾರದಿಂದ ರಾಜಕಾರಣದಲ್ಲಿ ಬೆಳೆದಿದ್ದಾರೆ. ಆದರೆ, ಈಗ ಅವರ ವಿರುದ್ಧವೇ ನೀಡುತ್ತಿರುವ ಹೇಳಿಕೆ ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಈ ಹಿಂದೆ ಅಧಿಕಾರ ಹಿಡಿಯುವಲ್ಲಿ ಶ್ರೀರಾಮುಲು ಪ್ರಮುಖ ಪಾತ್ರವಹಿಸಿದ್ದರು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಶ್ರೀರಾಮುಲು ಅವರಿಗೆ ರಾಜ್ಯಸಭಾ ಸದಸ್ಯತ್ವ ನೀಡಿ ಕೇಂದ್ರದ ಸಚಿವರನ್ನಾಗಿ ಮಾಡಬೇಕು’ ಎಂದು ಆಗ್ರಹಿಸಿದರು.
‘ಶ್ರೀರಾಮುಲು ವಿರುದ್ಧ ತಾತ್ಸಾರದ ಮಾತನಾಡಿರುವ ರೆಡ್ಡಿ ಬಹಿರಂಗವಾಗಿ ಕ್ಷೆಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.
ಸಮುದಾಯದ ಮುಖಂಡರಾದ ನವೀನ್, ನಾಗರಾಜ್, ಮುನಿಯಪ್ಪ, ಮಾಲೂರು ಕೃಷ್ಣಪ್ಪ, ಐತರಾಸನಹಳ್ಳಿ ನರಸಿಂಹಪ್ಪ, ಗರುಡುನಹಳ್ಳಿ ಬಾಬು, ನರಸಾಪುರ ವೆಂಕಟೇಶ್, ಚಿಕ್ಕಕಡತೂರು ಶ್ರೀನಿವಾಸ್, ಹುಂಗೇನಹಳ್ಳಿ ವೆಂಕಟೇಶ್, ಕುಡುವನಹಳ್ಳಿ ಆನಂದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.