ಮುಳಬಾಗಿಲು: ತಾಲ್ಲೂಕಿನ ಬಾಳಸಂದ್ರ ಮೊರಾರ್ಜಿ ದೇಸಾಯಿ ವಸತಿ ನಿಲಯದ ವಿದ್ಯಾರ್ಥಿಯನ್ನು ವಾರ್ಡನ್ ತಮ್ಮ ಸೊಂಟದ ಬೆಲ್ಟ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ವಿದ್ಯಾರ್ಥಿ ತಾಯಿ ಆರೋಪ ಮಾಡಿದ್ದಾರೆ. ವಿದ್ಯಾರ್ಥಿಯನ್ನು ಥಳಿಸಿರುವುದನ್ನು ವಾರ್ಡನ್ ಒಪ್ಪಿಕೊಂಡಿದ್ದು, ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ಮೂರ‍್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದ ಸೋಮವಾರ ಪೋಷಕರ ಸಭೆ ವೇಳೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ನೂರಾರು ಮಂದಿ ವಸತಿ ಶಾಲೆ ಬಳಿ ಜಮಾಯಿಸಿದ್ದರು. ಸ್ಥಳಕ್ಕೆ ಬಂದ ನಂಗಲಿ ಪೊಲೀಸರು ಜನರನ್ನು ಚದುರಿಸಿದರು. ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ನಿರ್ದೇಶಕ ಶ್ರೀನಿವಾಸ್ ಭೇಟಿ ನೀಡಿ ಮಾಹಿತಿ ಪಡೆದರು.
6ನೇ ತರಗತಿ ವಿದ್ಯಾರ್ಥಿ ಎಸ್.ಅನಂತಪುರ ಗ್ರಾಮದ ಅಂಜನ್ ಕುಮಾರ್ ಮೇಲೆ ವಾರ್ಡನ್ ಮಹೇಶ್ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿ ತಾಯಿ ಅಶ್ವಿನಿ ಆರೋಪ ಮಾಡಿದರು.
ಮೂಲತಃ ಕೋಲಾರ ತಾಲ್ಲೂಕಿನ ಸೂಲೂರು ಗ್ರಾಮದ ಈ ವಿದ್ಯಾರ್ಥಿಯ ತಂದೆ ಇತ್ತೀಚೆಗೆ ಮೃತಪಟ್ಟಿದ್ದರು. ನಂತರ ಆತ ತಾಯಿಯ ತವರೂರು ಎಸ್.ಅನಂತಪುರಕ್ಕೆ ತೆರಳಿದ್ದ. ನಂತರ ಆತನನ್ನು ಮೊರಾರ್ಜಿ ಶಾಲೆಗೆ ಸೇರಿಸಲಾಗಿತ್ತು.
‘ವಸತಿ ನಿಲಯದಲ್ಲಿ ದೆವ್ವ ಇದೆ ಎಂದು ಸಹಪಾಠಿಗಳನ್ನು ಅಂಜನ್ ಕುಮಾರ್ ಹೆದರಿಸುತ್ತಿದ್ದ. ಹಾಸ್ಟೆಲ್ ವಿದ್ಯಾರ್ಥಿಗಳು ಈ ವಿಷಯವನ್ನು ತನ್ನ ಗಮನಕ್ಕೆ ತಂದಿದ್ದರು’ ಎಂದು ವಾರ್ಡನ್ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
‘ಮಕ್ಕಳು ತುಂಟಾಟ ಮಾಡುವುದು ಸಹಜ. ಬುದ್ಧಿವಾದ ಹೇಳಬೇಕಾದ ವಾರ್ಡನ್ ತಮ್ಮ ಸೊಂಟದ ಬೆಲ್ಟ್ ತೆಗೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಜರ್ಜರಿತಗೊಂಡ ಮಗ ಸ್ಥಳದಲ್ಲೇ ಕುಸಿದು ಬಿದ್ದ ನಂತರವೂ ವಾರ್ಡನ್ ಒದ್ದಿದ್ದಾರೆ’ ಎಂದು ವಿದ್ಯಾರ್ಥಿ ತಾಯಿ ಆರೋಪಿಸಿದರು.
ಅಂಜನ್ ಕುಮಾರ್ ಮೇಲೆ ತಾನು ನಡೆಸಿದ ಹಲ್ಲೆ ವಿಷಯವನ್ನು ಯಾರಿಗೂ ತಿಳಿಸಬಾರದು ಎಂದು ವಾರ್ಡನ್ ಇತರ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದರು. ಹೀಗಾಗಿ, ಈ ಘಟನೆ ನಡೆದು ಮೂರ್ನಾಲ್ಕು ದಿನಗಳಾದರೂ ಯಾರಿಗೂ ಗೊತ್ತಿರಲಿಲ್ಲ ಎಂದರು.
ಸೋಮವಾರ ಶಾಲೆಯಲ್ಲಿ ಪೋಷಕರ ಸಭೆಗೆ ಬಂದಾಗ ತನ್ನ ಮಗನ ಮೇಲೆ ಹಲ್ಲೆ ನಡೆದಿರುವ ಸಂಗತಿ ಗೊತ್ತಾಯಿತು. ಈ ಬಗ್ಗೆ ವಾರ್ಡನ್ ಮಹೇಶ್ ಅವರನ್ನು ವಿಚಾರಿಸಿದೆವು. ‘ಶಾಲೆಯಲ್ಲಿ ದೆವ್ವ ಇದೆ ಎಂದು ಇತರ ವಿದ್ಯಾರ್ಥಿಗಳನ್ನು ಹೆದರಿಸುತ್ತಿದ್ದ. ಹೀಗಾಗಿ ಹೊಡೆದೆ’ ಎಂದು ಅವರು ತಮ್ಮ ಕೃತ್ಯ ಸಮರ್ಥಿಸಿಕೊಂಡರು. ಅವರಿಗೆ ಹಲ್ಲೆ ನಡೆಸಿದ ಬಗ್ಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ವಿದ್ಯಾರ್ಥಿ ತಾಯಿ ಅಶ್ವಿನಿ ದೂರಿದರು.
ಶಾಲಾ ಆವರಣದಲ್ಲಿ ಮತ್ತೊಮ್ಮೆ ಇಂಥ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗುವುದುಕುಮಾರ ರಾಜ್ ಪ್ರಾಂಶುಪಾಲ
ನೀರು ಪಾಲಾಗಿದ್ದ ಮೂವರು ವಿದ್ಯಾರ್ಥಿಗಳು:
ಇತ್ತೀಚೆಗೆ ಮುರುಡೇಶ್ವರ ಪ್ರವಾಸಕ್ಕೆ ಹೋಗಿದ್ದಾಗ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದ ಮೂವರು ಮಕ್ಕಳು ಇದೇ ಶಾಲೆ ವಿದ್ಯಾರ್ಥಿಗಳು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಶಿಕ್ಷಣ ಇಲಾಖೆಯು ಶಾಲೆಯ ಪ್ರಾಂಶುಪಾಲ ಹಾಗೂ ವಿದ್ಯಾರ್ಥಿಗಳ ಜೊತೆ ಪ್ರವಾಸಕ್ಕೆ ಹೋಗಿದ್ದ ಶಿಕ್ಷಕರು ಮತ್ತು ಇತರ ಸಿಬ್ಬಂದಿಯನ್ನು ಅಮಾನತು ಮಾಡಿತ್ತು. ಘಟನೆ ನಡೆದು ಒಂದು ವರ್ಷವೂ ಆಗಿಲ್ಲ. ಆಗಲೇ ವಸತಿ ಶಾಲೆ ವಾರ್ಡನ್ ವಿದ್ಯಾರ್ಥಿ ಮೈಮೇಲೆ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ್ದಾರೆ. ಇದು ಪೋಷಕರಲ್ಲಿ ಆತಂಕ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.