ADVERTISEMENT

ಹನುಮ ಮಾಲೆ ವಿಸರ್ಜನೆ | ಸಿಂಗಾರಗೊಂಡ ಗಂಗಾವತಿ, ಕೊಪ್ಪಳದಲ್ಲಿ ಭವ್ಯ ಶೋಭಾಯಾತ್ರೆ

ಡಿ. 5ರಂದು ಅಂಜನಾದ್ರಿಯಲ್ಲಿ ಹನುಮಮಾಲಾ ವಿಸರ್ಜನೆಗೆ ಅದ್ದೂರಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 5:59 IST
Last Updated 4 ಡಿಸೆಂಬರ್ 2022, 5:59 IST
ಕೊಪ್ಪಳ ನಗರದಲ್ಲಿ ಶನಿವಾರ ನಡೆದ ಹನುಮ ಮಾಲಾಧಾರಿಗಳ ಶೋಭಾಯಾತ್ರೆಯಲ್ಲಿ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಜನತೆ
ಕೊಪ್ಪಳ ನಗರದಲ್ಲಿ ಶನಿವಾರ ನಡೆದ ಹನುಮ ಮಾಲಾಧಾರಿಗಳ ಶೋಭಾಯಾತ್ರೆಯಲ್ಲಿ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಜನತೆ   

ಗಂಗಾವತಿ (ಕೊಪ್ಪಳ ಜಿಲ್ಲೆ): ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಸೋಮವಾರ ಹನುಮಮಾಲಾ ವಿಸರ್ಜನೆ ನಡೆಯಲಿದ್ದು, ಇದಕ್ಕಾಗಿ ನಗರ ಹಾಗೂ ಅಂಜನಾದ್ರಿ ಬೆಟ್ಟ ಅಲಂಕೃತಗೊಂಡಿದೆ.

ಗಂಗಾವತಿಯಲ್ಲಿ ಸೋಮವಾರ (ಡಿ. 5) ಬೆಳಿಗ್ಗೆ ಹನುಮಮಾಲಾ ಸಂಕೀರ್ತನಾ ಯಾತ್ರೆಯೂ ಜರುಗಲಿದ್ದು, ನಗರದ ಪ್ರಮುಖ ವೃತ್ತಗಳಲ್ಲಿ ಓಂ ಹಾಗೂ ಆಂಜನೇಯ ಚಿತ್ರದ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ಯಾತ್ರೆಯಲ್ಲಿ 20 ಸಾವಿರ ಭಕ್ತರು ಪಾಲ್ಗೊಳ್ಳಲಿದ್ದು, 14 ಅಡಿ ಎತ್ತರದ ಆಂಜನೇಯನ ಮೂರ್ತಿಯ ಮೆರವಣಿಗೆ ನಡೆಸಲು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಿದ್ಧತೆ ನಡೆಸಿದೆ.

ಯಾತ್ರೆ ಅದ್ದೂರಿಯಾಗಿ ನಡೆಸಲು ಎಪಿಎಂಸಿಯಿಂದ ಕೃಷ್ಣದೇವರಾಯ ವೃತ್ತದವರೆಗೆ ನಗರದ ಪ್ರಮುಖ ವೃತ್ತಗಳಲ್ಲಿ, ಸಂಗಾಪುರ ಗ್ರಾಮದಿಂದ ಅಂಜನಾದ್ರಿವರೆಗೆ 20 ಸಾವಿರ ಭಿತ್ತಚಿತ್ರಗಳು, ಮೂರು ಸಾವಿರ ಓಂ ಧ್ವಜಗಳು ಮತ್ತು ಐದು ಸಾವಿರ ಆಂಜನೇಯನ ಚಿತ್ರದ ಧ್ವಜಗಳನ್ನು ಕಟ್ಟಲಾಗಿದೆ.

ADVERTISEMENT

ಮುಂಬರುವ ದಿನಗಳಲ್ಲಿ ಚುನಾವಣೆಯೂ ನಡೆಯಲಿರುವ ಕಾರಣ ಹಾಲಿ, ಮಾಜಿ ಜನಪ್ರತಿನಿಧಿಗಳು, ಟಿಕೆಟ್‌ ಆಕಾಂಕ್ಷಿಗಳು ಮತ್ತು ಹಿಂದೂಪರ ಸಂಘಟನೆಗಳ ಬ್ಯಾನರ್‌ಗಳು ಪ್ರತಿ ಗ್ರಾಮಗಳಲ್ಲಿ ರಾರಾಜಿಸುತ್ತಿವೆ.

ಸ್ಥಳಾಂತರ

ಹನುಮಮಾಲಾ ವಿಸರ್ಜನೆ ವೇಳೆ ರಸ್ತೆ ಬದಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ವ್ಯಾಪಾರಸ್ಥರು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರೂ ಒಪ್ಪಿಗೆ ನೀಡಲಿಲ್ಲ.

‘ರಸ್ತೆ ಬದಿ ವ್ಯಾಪಾರಸ್ಥರೆಲ್ಲ ಸೇರಿ ವ್ಯಾಪಾರಕ್ಕೆ ಗುರುತಿಸಿದ ಸ್ಥಳ ಚಿಕ್ಕದಾಗಿದೆ. ಖರೀದಿಗೆ ಬರುವ ಭಕ್ತರಿಗೆ ಸಂಚಾರಕ್ಕೆ ಮಾರ್ಗವೇ ಇಲ್ಲ‘ ಎಂದು ಪೊಲೀಸ್ ಅಧಿಕಾರಿಗಳಿಗೆ ಶಾರದಮ್ಮ ಮನವಿ ಮಾಡಿದರು.

ನಂತರ ಪೊಲೀಸ್ ಅಧಿಕಾರಿಗಳು ‘ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ರೂಪುರೇಷೆಯಂತೆ ಹನುಮಮಾಲಾ ವಿಸರ್ಜನೆಗೆ ಎಲ್ಲ ಸಿದ್ಧತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಏಕಾಏಕಿ ನಿರ್ಧಾರ ಬದಲಿಸಿ, ವ್ಯವಸ್ಥೆ ಹಾಳು ಮಾಡಲು ಸಿದ್ದವಿಲ್ಲ’ ಎಂದು ಪೊಲೀಸರು ವ್ಯಾಪಾರಿಗಳಿಗೆ ಹೇಳಿದರು.

ಶೋಭಾಯಾತ್ರೆ:

ಹನುಮಮಾಲಾ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಕೊಪ್ಪಳದಲ್ಲಿ ಅದ್ದೂರಿಯಾಗಿ ಶೋಭಾಯಾತ್ರೆ ನಡೆಯಿತು.

ನಗರ ಪೊಲೀಸ್‌ ಠಾಣೆಯ ಸಮೀಪದ ಹನುಮಾನ್‌ ಮಂದಿರದಿಂದ (ಹಠಗಾರ ಪೇಟೆಯ ಆಂಜನೇಯ ದೇವಸ್ಥಾನ) ಮೂಲಕ ಆರಂಭವಾದ ಯಾತ್ರೆ ಸಿಂಪಿ ಲಿಂಗಣ್ಣ ಮಾರ್ಗದ ಮೂಲಕ ಸಾಗಿತು. ಹಲವಾರು ಭಕ್ತರು ಭಕ್ತಿಯಿಂದ ಯಾತ್ರೆಯಲ್ಲಿ ಪಾಲ್ಗೊಂಡು ಆಂಜನೇಯನಿಗೆ ಜೈಕಾರ ಹಾಕಿದರು. ಯುವಕರು ಡಿ.ಜೆ. ಅಬ್ಬರಕ್ಕೆ ಕುಣಿದು ಸಂಭ್ರಮಿಸಿದರು.

ಬ್ಯಾನರ್‌ಗೆ ಆಕ್ಷೇಪ:

‘2016ರ ಹನುಮಮಾಲೆ ಸಂಕೀರ್ತನಾ ಯಾತ್ರೆಯಲ್ಲಿ ಸೃಷ್ಟಿಯಾದ ಗಲಭೆಗೆ ಪುಷ್ಠಿ ನೀಡಿದ್ದ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅಂದು ಹನುಮಾಲಾಧಾರಿಗಳು ಮತ್ತು ರಾಮಭಕ್ತರನ್ನು ಕಳ್ಳರೆಂದು ಹೇಳಿಕೆ ನೀಡಿದ್ದರು. ಈಗ ಅದೇ ಹನುಮ ಮಾಲಾಧಾರಿಗಳನ್ನು ಸ್ವಾಗತಿಸಿ ಬ್ಯಾನರ್ ಅಳವಡಿಸಿದ್ದು ಮತಗಳ ಓಲೈಕೆಗಾಗಿ’ ಎಂದು ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರಬರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮುಸ್ಲಿಮರ ವ್ಯಾಪಾರಕ್ಕೆ ವಿರೋಧ ಸರಿಯಲ್ಲ’

ಕುಷ್ಟಗಿ: ಮಂದಿರ, ಮಸೀದಿ, ಚರ್ಚ್ ವಿಷಯಗಳಲ್ಲಿ ಜಾತಿ ಜಗಳ ಹಚ್ಚುವುದು ಬಿಜೆಪಿಗೆ ರೂಢಿಯಾಗಿದೆ. ಅಂಜನಾದ್ರಿಯಲ್ಲಿ ಹಿಂದೂಗಳನ್ನು ಹೊರತುಪಡಿಸಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಬೇಡ ಎನ್ನುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಆರೋಪಿಸಿದರು.

ಇಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಧರ್ಮಗಳ ಮಧ್ಯೆ ಬಿರುಕು ಮೂಡಿಸುವ ಕೆಲಸ ಆರಂಭಿಸಿದೆ. ಅದರ ಭಾಗವೇ ಈಗ ಅಂಜನಾದ್ರಿಯಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎನ್ನುವ ತಗಾದೆ ತೆಗೆದಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.