ADVERTISEMENT

ಕೊಪ್ಪಳದಲ್ಲಿ ‘ಅಕ್ಕ ಕೆಫೆ’ ಆರಂಭ: ಗಂಗಾವತಿಯಲ್ಲಿ ‘ಸಂಚಾರ ಕೆಫೆ’ಗೆ ಸಿದ್ಧತೆ  

ಪ್ರಮೋದ ಕುಲಕರ್ಣಿ
Published 9 ಅಕ್ಟೋಬರ್ 2025, 5:39 IST
Last Updated 9 ಅಕ್ಟೋಬರ್ 2025, 5:39 IST
ಕೊಪ್ಪಳದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿರುವ ಅಕ್ಕ ಕೆಫೆಯ ನೋಟ –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಕೊಪ್ಪಳದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿರುವ ಅಕ್ಕ ಕೆಫೆಯ ನೋಟ –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ   

ಕೊಪ್ಪಳ: ಆರ್ಥಿಕ ಸ್ವಾವಲಂಬನೆ ಹಾಗೂ ಆಹಾರ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಸಹಭಾಗಿತ್ವ ಹೆಚ್ಚಿಸುವ ಉದ್ದೇಶದಿದ್ದಾಗ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಅಕ್ಕ ಕೆಫೆಯ ಮೊದಲ ಶಾಖೆಯನ್ನು ಜಿಲ್ಲಾಕೇಂದ್ರದಲ್ಲಿ ಆರಂಭಿಸಲಾಗಿದ್ದು, ಬುಧವಾರ ಕಾರ್ಯಾರಂಭ ಮಾಡಿದೆ.

ಸ್ಥಳೀಯತೆಗೆ ತಕ್ಕಂತೆ ಮಹಿಳಾ ಸಬಲೀಕರಣ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಇಲ್ಲಿನ ಜಿಲ್ಲಾ ಪಂಚಾಯಿತಿ ಗಂಗಾವತಿಯಲ್ಲಿ ಅಕ್ಕ ಕೆಫೆಯನ್ನು ’ಸಂಚಾರ ಕೆಫೆ’ಯನ್ನಾಗಿ ಮಾರ್ಪಡಿಸಲು ಮುಂದಾಗಿದೆ.

ಗಂಗಾವತಿ ಭಾಗದಲ್ಲಿ ಆನೆಗೊಂದಿ, ಸಾಣಾಪುರ, ಅಂಜನಾದ್ರಿ, ಪಂಪಾಸರೋವರ ಹೀಗೆ ಅನೇಕ ಪ್ರವಾಸೋದ್ಯಮದ ಉತ್ತೇಜನಕ್ಕೆ ಅನುಕೂಲವಾಗುವ ಐತಿಹಾಸಿಕ ಸ್ಥಳಗಳಿವೆ. ವಿಶ್ವವಿಖ್ಯಾತ ಹಂಪಿಗೆ ಬರುವ ದೇಶ, ವಿದೇಶಗಳ ಪ್ರವಾಸಿಗರು ಆನೆಗೊಂದಿ ಭಾಗಕ್ಕೆ ಬರುವುದು ಸಾಮಾನ್ಯ. ಅವರಿಗೆ ಮನೆಯ ಊಟದ ಸ್ವಾದ ಉಣಬಡಿಸಲು ಗಂಗಾವತಿ ತಾಲ್ಲೂಕು ಪ್ರವಾಸೋದ್ಯಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ’ಸಂಚಾರ ಅಕ್ಕ ಕೆಫೆ’ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇನ್ನೊಂದು ಸಂಚಾರ ಅಕ್ಕ ಕೆರೆ ಕುಕನೂರಿನಲ್ಲಿ ಆರಂಭವಾಗಲಿದೆ. ಈ ಕೆಫೆಗಳು ಬಸ್‌ನಲ್ಲಿ ಸಿದ್ಧತೆ ಮಾಡಲಾಗುತ್ತದೆ. ಅಕ್ಕ ಕೆಫೆ ’ಒಲವಿನ ಊಟ’ ಎನ್ನುವ ಅಡಿಬರಹ ಹೊಂದಿದೆ.

ADVERTISEMENT

ಕೊಪ್ಪಳದಲ್ಲಿ ಕಾರ್ಯಾರಂಭ: ಅ. 6ರಂದು ಜಿಲ್ಲಾಕೇಂದ್ರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಆರಂಭಿಸಿರುವ ಅಕ್ಕ ಕೆಫೆ ಉದ್ಘಾಟಿಸಿದ್ದರು. ಈ ಕೇಂದ್ರ ಬುಧವಾರ ಕಾರ್ಯಾರಂಭ ಮಾಡಿದೆ.

ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಉಪನೋಂದಣಾಧಿಕಾರಿ ಕಚೇರಿ, ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಉಪವಿಜ್ಞಾನ ಪ್ರಾದೇಶಿಕ ಕೇಂದ್ರಗಳು ಇದ್ದು, ಅಲ್ಲಿನ ಸಿಬ್ಬಂದಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾರ್ವಜನಿಕರಿಗೆ ಕೆಫೆಯಿಂದ ಅನುಕೂಲವಾಗಲಿದೆ. 

ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಮಿಷನ್‌ ಜೊತೆಗೂಡಿ ರಾಜ್ಯ ಸರ್ಕಾರ ಜಿಲ್ಲೆಗೆ ಎರಡು ಅಕ್ಕ ಕೆಫೆಗಳನ್ನು ಮಂಜೂರು ಮಾಡಿದೆ. ಮೊದಲ ಹಂತದಲ್ಲಿ ಕೊಪ್ಪಳದಲ್ಲಿ ಕಾರ್ಯಾರಂಭ ಮಾಡಿದ್ದು, ಇನ್ನೊಂದು ತಿಂಗಳಲ್ಲಿ ಯಲಬುರ್ಗಾದಲ್ಲಿ ಆರಂಭವಾಗಲಿದೆ. ಎರಡನೇ ಹಂತದಲ್ಲಿ ಎಲ್ಲಾ ತಾಲ್ಲೂಕುಗಳಿಗೆ ಕೆಫೆ ಸೌಲಭ್ಯ ಸಿಗಲಿದೆ. ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಸಂಜೀವಿನಿ ಒಕ್ಕೂಟದ ಉಸ್ತುವಾರಿಯಲ್ಲಿ ಅಕ್ಕ ಕೆಫೆ ಕಾರ್ಯನಿರ್ವಹಿಸಲಿದ್ದು, ’ಅಕ್ಕಂದಿರೇ’ ನಿರ್ವಹಣೆ ಮಾಡುತ್ತಾರೆ.

ಇಲ್ಲಿನ ಕೆಫೆಯಲ್ಲಿ ಅಡುಗೆ ಸಿಬ್ಬಂದಿ, ಸಹಾಯಕರು ಹಾಗೂ ಹೋಟೆಲ್‌ ಉಸ್ತುವಾರಿಗಳು ಮಹಿಳೆಯರೇ ಇದ್ದಾರೆ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಕಾಫಿ, ಟೀ, ದೊರೆಯಲಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಸಮಿತಿ ಕೆಫೆಗೆ ಭೇಟಿನೀಡಿ ಶುಚಿತ್ವ, ಆಹಾರದ ಗುಣಮಟ್ಟ, ರುಚಿ ಪರಿಶೀಲಿಸಿ ‘ಅಕ್ಕ ಕೆಫೆ‘ ಕಾರ್ಯವೈಖರಿ ಮೇಲೆ ಕಣ್ಗಾವಲು ವಹಿಸಲಿದೆ. ಕೆಫೆಗೆ ಬೇಕಾಗುವ ಕಟ್ಡಡ ಹಾಗೂ ಇನ್ನಿತರ ಸೌಲಭ್ಯವನ್ನು ಎನ್‌ಆರ್‌ಎಲ್‌ಎಂನಿಂದ ₹15 ಲಕ್ಷ ಮತ್ತು ಜಿಲ್ಲಾ ಪಂಚಾಯಿತಿಯಿಂದ ₹5 ಲಕ್ಷ ಒದಗಿಸಲಾಗಿದೆ.   

ಕೊಪ್ಪಳದ ಅಕ್ಕ ಕೆಫೆಯ ಸಿಬ್ಬಂದಿ. ಎಡದಿಂದ; ಹನುಮವ್ವ ಹನುಮಕ್ಕ ಮಧುಶ್ರೀ ಮಂಜುಳಾ

ಇಂದರಗಿ ತಂಡದಿಂದ ನಿರ್ವಹಣೆ

ಕೊಪ್ಪಳ: ತಾಲ್ಲೂಕಿನ ಪ್ರಿಯಾಂಕ ಹಾಗೂ ನೇತ್ರಾವತಿ ಮಹಿಳಾ ಸಂಘದ ಸದಸ್ಯೆಯರು ಇಲ್ಲಿನ ಅಕ್ಕ ಕೆಫೆ ನಿರ್ವಹಣೆ ಮಾಡುತ್ತಿದ್ದಾರೆ. ಪ್ರಿಯಾಂಕ ಸಂಘದ ಮಂಜುಳಾ ಹನುಮವ್ವ ನೇತ್ರಾವತಿ ಸಂಘದ ಮಧುಶ್ರೀ ರೇಖಾ ಹಾಗೂ ಹನುಮವ್ವ ಕೆಲಸ ಮಾಡುತ್ತಿದ್ದು ಇವೆರೆಲ್ಲರೂ ಹಿಂದೆ ತಮ್ಮೂರಿನಲ್ಲಿ ಹೋಟೆಲ್‌ ನಡೆಸಿದ ಅನುಭವ ಹೊಂದಿದ್ದಾರೆ.

ಮೊದಲ ದಿನ ಲವಲವಿಕೆಯಿಂದ ಕೆಲಸ ಮಾಡುತ್ತಿದ್ದ ’ಅಕ್ಕ ಕೆಫೆ’ ಸಿಬ್ಬಂದಿ ಗ್ರಾಹಕರನ್ನು ಮಾತನಾಡಿಸಿ ತಿನಿಸು ಕೊಡುತ್ತಿದ್ದರು. ಮತ್ತೊಮ್ಮೆ ನಮ್ಮ ಕೆಫೆಗೇ ಬನ್ನಿ ಎಂದು ಮನವಿ ಮಾಡುತ್ತಿದ್ದರು.

’ಆರಂಭದಲ್ಲಿ ಇಡ್ಲಿ ದೋಸೆ ವಡಾ ಫಲಾವ್‌ ತಯಾರಿಸುತ್ತಿದ್ದೇವೆ. ಒಂದು ವಾರ ವ್ಯಾಪಾರ ನೋಡಿಕೊಂಡು ಸಿರಿಧಾನ್ಯಕ್ಕೆ ಉತ್ತೇಜನ ನೀಡಲು ನವಣಕ್ಕಿ ಫಲಾವ್‌ ರಾಗಿ ಗಂಜಿ ರಾಗಿ ರೊಟ್ಟಿ ತಯಾರಿಸಲು ಯೋಜನೆ ರೂಪಿಸಿಕೊಂಡಿದ್ದೇವೆ. ಮನೆಯ ಸ್ವಾದದಂತೆಯೇ ಇಲ್ಲಿಯೂ ಅಡುಗೆ ಮಾಡುತ್ತೇವೆ. ಅತಿಯಾಗಿ ಮಸಾಲೆ ಬಳಸುವುದಿಲ್ಲ’ ಎಂದು ಅಕ್ಕ ಕೆಫೆಯ ಸಿಬ್ಬಂದಿ ಮಂಜುಳಾ ಹೇಳಿದರು.

ಕೊಪ್ಪಳದಲ್ಲಿ ಕೇಂದ್ರ ಆರಂಭವಾಗಿದ್ದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಗಂಗಾವತಿ ಭಾಗದಲ್ಲಿ ಸಂಚಾರ ಅಕ್ಕ ಕೆಫೆ ಆರಂಭಿಸಲಾಗುವುದು. ಬಸ್‌ನಲ್ಲಿಯೇ ಕೆಫೆ ನಿರ್ಮಿಸಲಾಗುವುದು. 
–ಪ್ರಕಾಶ ವಡ್ಡರ, ಯೋಜನಾ ನಿರ್ದೇಶಕ ಜಿಲ್ಲಾ ಪಂಚಾಯಿತಿ ಕೊಪ್ಪಳ 
ಮಹಿಳೆಯರ ಸ್ವಾವಲಂಬನೆ ಹಾಗೂ ಹೋಟೆಲ್‌ ಉದ್ಯಮದಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚಾಗಲು ಅಕ್ಕ ಕೆಫೆ ಅನುಕೂಲವಾಗಲಿದೆ. ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲಿಯೂ ಕೆಫೆಗಳನ್ನು ಆರಂಭಿಸಲಾಗುವುದು.
–ವರ್ಣಿತ್‌ ನೇಗಿ, ಜಿಲ್ಲಾ ಪಂಚಾಯಿತಿ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.