
ಅಂಜನಾದ್ರಿ ಬೆಟ್ಟದ ವಿಹಂಗಮ ನೋಟ
–ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಗಂಗಾವತಿ: ತಾಲ್ಲೂಕಿನ ಅಂಜನಾದ್ರಿಯಲ್ಲಿ ಇಬ್ಬರು ಸ್ವಾಮೀಜಿಗಳ ನಡುವೆ ನಡೆದ ಗಲಾಟೆ ತಾರಕಕ್ಕೆ ಏರಿದ್ದು, ಅಂಜನಾದ್ರಿ ಬೆಟ್ಟದ ಅರ್ಚಕ ವಿದ್ಯಾದಾಸ ಬಾಬಾ ಹಾಗೂ ಅವರ ಬೆಂಬಲಿಗರ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿವೆ.
ಡಿ.23ರಂದು ಅಂಜನಾದ್ರಿ ಬೆಟ್ಟದಲ್ಲಿ ನಡೆದ ಗಲಾಟೆಯ ಭಾಗವಾಗಿ ಹೊಸಪೇಟೆಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ದೂರು ಆಧರಿಸಿ ಎರಡು, ಎಫ್‌ಐಆರ್ ಹಾಗೂ ಪಿಎಸ್‌ಐ ವೆಂಕಟೇಶ ಚವಾಣ್ ನೀಡಿದ ದೂರಿನ ಮೇರೆಗೆ ಪೊಲೀಸರು ಒಂದು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ. ವಿದ್ಯಾದಾಸ ಬಾಬಾ ಜೊತೆಗಿದ್ದ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
23ರಂದು ಸಂಜೆಯೇ ವಿದ್ಯಾದಾಸ ಬಾಬಾ ಆನ್‌ಲೈನ್ ಮೂಲಕ ಹಾಗೂ ಅದೇ ದಿನ ರಾತ್ರಿ ಖುದ್ದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಜೊತೆಗೆ ಅಂಜನಾದ್ರಿ ಬೆಟ್ಟದಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಗೋವಿಂದಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಜಾತಿ ನಿಂದನೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ಎರಡೂ ದೂರುಗಳನ್ನು ತಿರಸ್ಕಾರ ಮಾಡಿದ್ದಾರೆ ಎಂದು ಗೊತ್ತಾಗಿದೆ.
ವಿಡಿಯೊ ವೈರಲ್: ಡಿ. 24ರಂದು ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಪೊಲೀಸರೊಂದಿಗೆ ಪಂಚನಾಮೆಗೆ ಅಂಜನಾದ್ರಿ ಬೆಟ್ಟಕ್ಕೆ ಹೋಗಿದ್ದಾಗ ನಡೆದ ಗಲಾಟೆಯ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಹಿಂದಿಯಲ್ಲಿ ಮಾತನಾಡುವ ವ್ಯಕ್ತಿಯೊಬ್ಬ ಕಬ್ಬಿಣದ ಪೈಪ್ ಎತ್ತಿಕೊಂಡು ಬಂದು ನೆಲಕ್ಕೆ ಬಿಸಾಡಿದ್ದಾನೆ. ಜೊತೆಗೆ ಗೋವಿಂದಾನಂದ ಸ್ವಾಮೀಜಿಗೆ ನಿಂದನೆ ಮಾಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.