
ನಿಯಮಿತ ತಪಾಸಣೆ ನಡೆಸಲು ಸೂಚನೆ | ಅಂಗನವಾಡಿ ಆಹಾರ, ಶಾಲಾ,ಕಾಲೇಜುಗಳಲ್ಲಿ ಕಣ್ಗಾವಲು ವಹಿಸಿ | ಬೇಕರಿ ಉತ್ಪನ್ನಗಳ ಮೇಲೆ ನಿಗಾ ವಹಿಸಲು ನಿರ್ದೇಶನ
ಕೊಪ್ಪಳ: ‘ರಸ್ತೆ ಬದಿ ದೊರೆಯುವ ಗೋಬಿ ಮಂಚೂರಿ, ಪಾನಿಪೂರಿ ಮುಂತಾದ ಚಾರ್ಟ್ಸ್‌ಗಳಲ್ಲಿ ಕೃತಕ ಬಣ್ಣ ಹಾಗೂ ನಿಷೇಧಿತ ವಸ್ತುಗಳನ್ನು ಬೆರೆಸದಂತೆ ಸರ್ಕಾರ ಆದೇಶಿಸಿದೆ. ಈ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆಯೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರೂ ಆದ ಸುರೇಶ ಇಟ್ನಾಳ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವತಿಯಿಂದ ನಡೆದ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು.
‘ಜಿಲ್ಲೆಯ ಎಲ್ಲ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ತಯಾರಾಗುವ ಫಾಸ್ಟ್ ಫುಡ್‌ಗಳಲ್ಲಿ ಕೃತಕ ಬಣ್ಣಗಳನ್ನು ಹಾಗೂ ಆಹಾರದ ರುಚಿ ಹೆಚ್ಚಿಸುವ ನಿಷೇಧಿತ ವಸ್ತುಗಳನ್ನು ಬಳಸದಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದಾಗ್ಯೂ ಕೆಲ ಅಂಗಡಿಗಳಲ್ಲಿ ನಿಷೇಧಿತ ವಸ್ತುಗಳು ಹಾಗೂ ಕೃತಕ ಬಣ್ಣಗಳ ಬಳಕೆ ನಡೆಯುತ್ತಿದೆ. ಇಂತಹ ಹೋಟೆಲ್, ರಸ್ತೆ ಬದಿ ಅಂಗಡಿಗಳನ್ನು ಗುರುತಿಸಿ, ಅದರ ಮಾಲೀಕರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಿ. ರುಚಿ ಹೆಚ್ಚಿಸುವ ನಿಷೇಧಿತ ವಸ್ತುಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕ’ ಎಂದರು.
‘ಜಿಲ್ಲೆಯ ಎಲ್ಲ ವಸತಿ ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಹಾಗೂ ಶಾಲೆಗಳಲ್ಲಿ ನೀಡುವ ಆಹಾರಗಳಲ್ಲಿ ಬಳಸುವ ದಿನಸಿ ವಸ್ತುಗಳ ಗುಣಮಟ್ಟ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು. ಆಹಾರ ಸಾಮಗ್ರಿ ಶೇಖರಿಸುವ ಗೋದಾಮುಗಳಲ್ಲಿ ನಿಯಮಾನುಸಾರ ಸ್ವಚ್ಛತೆ ಹಾಗೂ ಸುರಕ್ಷತೆ ನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಹಳ್ಳಿಗಳಲ್ಲಿ ಹಾಲು ಸಂಗ್ರಹಣಾ ಕೇಂದ್ರಗಳಿಗೆ ಗುಣಮಟ್ಟ ಪರೀಕ್ಷೆಯ ಮಾನದಂಡಗಳನ್ನು ನೀಡಲಾಗಿದೆ. ಆ ಮಾನದಂಡಗಳನ್ವಯ ಗುಣಮಟ್ಟದ ಹಾಲನ್ನು ಮಾತ್ರ ಹಾಲು ಮಾರಾಟಗಾರರಿಂದ ಸಂಗ್ರಹಿಸಬೇಕು’ ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಂಕಿತ ಅಧಿಕಾರಿ ಡಾ.ಅಲಕನಂದಾ ಮಳಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಆಹಾರ ಇಲಾಖೆ ಉಪನಿರ್ದೇಶಕ ವಿಶ್ವನಾಥ, ಅಬಕಾರಿ ಇಲಾಖೆ ಡಿವೈಎಸ್‌ಪಿ ಬಿ.ಆಂಜನೇಯ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.