ಕನಕಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಆಯುಧ ಪೂಜೆ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ಗುರುವಾರ ವಿಜೃಂಭಣೆಯಿಂದ ನಡೆಯಿತು.
ದಸರಾ ಅಂಗವಾಗಿ ಕನಕಾಚಲಪತಿ ದೇವಸ್ಥಾನದ ಅಶ್ವಾರೋಹಣ ಉಚ್ಚಾಯ ಹಾಗೂ ವೀರಶೈವ ಸಮಾಜದ ವೀರಭದ್ರ ದೇವರ ಪಲ್ಲಕ್ಕಿ ಮೆರವಣಿಗೆ ಗುರುವಾರ ಸಡಗರ, ಸಂಭ್ರಮದಿಂದ ನೆರವೇರಿತು.
ಪ್ರತಿವರ್ಷದಂತೆ ಅಶ್ವಾರೋಹಣ ಉಚ್ಚಾಯ ಕನಕಾಚಲಪತಿ ದೇಗುಲದಿಂದ ಎಪಿಎಂಸಿ ಮಳಿಗೆ, ವಾಲ್ಮೀಕಿ, ಮಡಿವಾಳ ಮಾಚಿದೇವ ವೃತ್ತದ ಮೂಲಕ ಬಾಬುಸಾಬ ಕಲ್ಲುಗೋಡೆ ಅವರ ಹೊಲದಲ್ಲಿರುವ ಬನ್ನಿ ಗಿಡದವರೆಗೆ ನಡೆಯಿತು. ಬನ್ನಿ ಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿ ಐದು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಎದುರ ಹನುಮಪ್ಪ ದೇವಸ್ಥಾನದವರೆಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಉಚ್ಚಾಯ ಕನಕಾಚಲಪತಿ ದೇಗುಲ ತಲುಪಿದ ನಂತರ ಬನ್ನಿ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜನತೆ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ ಹಂಚಿಕೊಂಡರು. ಜಾತಿ, ಧರ್ಮದ ಬೇಧ ಭಾವವಿಲ್ಲದೆ ವಿನಿಮಯ ನಡೆಯಿತು.
ಮರಾಠ ಹಾಗೂ ಭಾವಸಾರ ಕ್ಷತ್ರಿಯ ಸಮಾಜದವರು ತ್ರಿವೇಣಿ ಸಂಗಮದಲ್ಲಿ ಘಟ ವಿಸರ್ಜನೆ ಮಾಡಿದರು. ಪಟ್ಟಣದ ಎಲ್ಲಾ ದೇಗುಲಗಳಿಗೆ ಭಕ್ತರು ತೆರಳಿ ಬನ್ನಿ ನೀಡಿ ಧನ್ಯತೆ ಮೆರೆದರು. ಬಹುತೇಕ ವಾರ್ಡ್‌ಗಳಲ್ಲಿ ಬನ್ನಿ ಗಿಡದ ಹತ್ತಿರ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.