ADVERTISEMENT

ಪೆಟ್ರೋಲ್‌, ಡೀಸೆಲ್ ಬೆಲೆ ಹೆಚ್ಚಳಕ್ಕೆ ವಿರೋಧ: ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಕೃಷಿ ಕಾಯ್ದೆ ರದ್ದುಗೊಳಿಸಲು ಒತ್ತಾಯಿಸಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 13:32 IST
Last Updated 14 ಫೆಬ್ರುವರಿ 2021, 13:32 IST
ಕೊಪ್ಪಳದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನತೆ
ಕೊಪ್ಪಳದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನತೆ   

ಕೊಪ್ಪಳ: ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಹಾಗೂ ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ಭಾನುವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ನಗರದ ಬನ್ನಿಕಟ್ಟಿಯ ಗೌರಿಶಂಕರ ದೇವಸ್ಥಾನದಿಂದ ಅಶೋಕ ವೃತ್ತದವರೆಗೆ ಅಲಂಕೃತ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಬಂದು ತಲುಪಿದರು.

ನಂತರ ಮಾತನಾಡಿದ ತಂಗಡಗಿ,‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿನಕ್ಕೊಂದು ಸುಳ್ಳು ಹೇಳುತ್ತ ಜನತೆಯನ್ನು ದಾರಿತಪ್ಪಿಸುತ್ತಿವೆ. ಈ ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯುವವರೆಗೆ ನಿರಂತರ ಹೋರಾಟ ಮಾಡಲಾಗುತ್ತದೆ’ ಎಂದು ಹೇಳಿದರು.

ADVERTISEMENT

‘₹50ಕ್ಕೆ ಲೀಟರ್‌ ಪೆಟ್ರೋಲ್‌ ನೀಡುವುದಾಗಿ ಹೇಳಿ ಈಗ ಬೆಲೆಯನ್ನು ₹100ಕ್ಕೆ ಹೆಚ್ಚಿಸಲಾಗಿದೆ. ಬಡವರಿಗೆ ಆಧಾರವಾದ ಎಲ್‌ಪಿಜಿ ದರ ಸಾವಿರ ತಲುಪುತ್ತಿದೆ. ಅಗತ್ಯ ದಿನ ಬಳಕೆ ವಸ್ತುಗಳ ಗಗನಕ್ಕೆ ಏರುತ್ತಿವೆ. ಇದರ ಮಧ್ಯೆ ವಿವಿಧ ಕೃಷಿ ಕಾಯ್ದೆ ರದ್ದುಗೊಳಿಸಲು ಹೋರಾಟ ಮಾಡುತ್ತಿರುವ ರೈತರ ಬೆಂಬಲಕ್ಕೆ ಬಾರದೇ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಬಿಜೆಪಿ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಮಳೆ, ಗಾಳಿಯಿಂದ ಹಾಳಾದ ಬೆಳೆಗೆ ಯಾವುದೇ ಪರಿಹಾರ ನೀಡಿಲ್ಲ. ಶೇ 25ರಷ್ಟು ಬೆಳೆವಿಮೆ ಪರಿಹಾರ ಬಂದಿಲ್ಲ. ಈಗ ಅನಾವಶ್ಯಕ ವಿಷಯಗಳ ಬಗ್ಗೆ ಮಾತನಾಡಿ ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಾಮಮಂದಿರಕ್ಕೆ ಈ ಹಿಂದೆ ಸಂಗ್ರಹಿಸಿದ ಹಣ ಎಲ್ಲಿ ಹೋಯಿತು. ಮತ್ತೆ ಈಗ ₹1,500 ಕೋಟಿ ಸಂಗ್ರಹಿಸಿದ್ದಾರೆ. ಅಲ್ಲದೆ ಮತ್ತೆ ದೇಗುಲ ನಿರ್ಮಾಣಕ್ಕೆ ಟೆಂಡರ್‌ ಕರೆದಿದ್ದಾರೆ. ಇದನ್ನೇ ಬಡವರಿಗೆ ಹಂಚುವ ಬದಲು ರಾಜಕೀಯಕ್ಕೆ ಧರ್ಮವನ್ನು ತರುತ್ತಿದ್ದಾರೆ’ ಎಂದು ಟೀಕಿಸಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ,‘ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಅಂತರಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದ್ದರೂ, ದೇಶದ ಜನರಿಗೆ ಕಡಿಮೆ ದರಕ್ಕೆ ನೀಡಲಾಗುತ್ತಿತ್ತು. ಇಂದು ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ’ ಎಂದು ದೂರಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ,ಸದಸ್ಯ ಗೂಳಪ್ಪ ಹಲಗೇರಿ, ಎಸ್.ಬಿ. ನಾಗರಳ್ಳಿ, ಮುಖಂಡ ಗುರುರಾಜ ಹಲಗೇರಿ, ಶಿವಶಂಕರರಡ್ಡಿ, ರವಿ ಕುರಗೋಡ, ಇಂದಿರಾ ಬಾವಿಕಟ್ಟಿ, ಮುತ್ತುರಾಜ ಕುಷ್ಟಗಿ, ಅಜೀಮ್ ಅತ್ತಾರ, ಕೃಷ್ಣ ಇಟ್ಟಂಗಿ, ಗವಿಸಿದ್ದಪ್ಪ ಚಿನ್ನೂರ, ಶಿವಕುಮಾರ್ ಶೆಟ್ಟರ್, ಗುರುರಾಜ್ ಹಲಗೇರಿ, ಕಾಟನ್ ಪಾಷಾ, ಅಮ್ಜದ್ ಪಟೇಲ್, ಕಿಶೋರಿ ಬೂದನೂರ, ಹನುಮಂತಪ್ಪ ಬೀಡನಾಳ, ಹನುಮೇಶ ಸೇರಿದಂತೆ ನಗರಸಭೆ, ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಸದಸ್ಯರು, ರೈತರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.