ಕೊಪ್ಪಳ: ಯೂರಿಯಾ ರಸಗೊಬ್ಬರಕ್ಕಾಗಿ ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂಭಾಗದಲ್ಲಿ ಐದು ಗ್ರಾಮಗಳ ಹಲವು ರೈತರು ಸೋಮವಾರ ರಾತ್ರಿಯಿಂದಲೇ ಮಲಗಿದ್ದರು. ಅದರಲ್ಲಿ ಕೆಲವರಿಗೆ ಮಾತ್ರ ಗೊಬ್ಬರ ಲಭಿಸಿದರೆ, ಇನ್ನೂ ಕೆಲವರು ಬರಿಗೈಯಲ್ಲಿ ವಾಪಸ್ ಹೋದರು.
ಸೋಮವಾರ ರಾತ್ರಿ 11 ಗಂಟೆಯಿಂದಲೇ ಸಂಘದ ಮುಂಭಾಗದಲ್ಲಿ ಗೊಂಡಬಾಳ, ಹೊಸಳ್ಳಿ, ಬಹದ್ದೂರ್ ಬಂಡಿ, ಮುದ್ದಾಬಳ್ಳಿ ಹಾಗೂ ಹ್ಯಾಟಿ ಗ್ರಾಮದ ರೈತರು ಮಲಗಿದ್ದರು. ಇನ್ನೂ ಕೆಲವರು ಪ್ಲಾಸ್ಟಿಕ್ ಚೀಲದಲ್ಲಿ ಆಧಾರ್ ಕಾರ್ಡ್ ಹಾಗೂ ಇಟ್ಟಿಗೆಯನ್ನು ತಂದು ಸರತಿಗೆ ಇಟ್ಟಿದ್ದರು. ಮಂಗಳವಾರ ಬೆಳಗಿನ ಜಾವ ರೈತರ ಸಂಖ್ಯೆ ಹೆಚ್ಚುತ್ತಲೇ ಹೋದರೂ ಸೊಸೈಟಿಗೆ ಯೂರಿಯಾದ 450 ಚೀಲಗಳ ಮಾತ್ರ ಬಂದಿದ್ದರಿಂದ ಎಲ್ಲರಿಗೂ ಲಭ್ಯವಾಗಲಿಲ್ಲ.
‘ಪ್ರತಿ ಆಧಾರ್ ಕಾರ್ಡ್‌ಗೆ ಎರಡು ಚೀಲ ಮಾತ್ರ ರಸಗೊಬ್ಬರ ಕೊಡಲಾಗುತ್ತದೆ. ಸರ್ಕಾರ ಕಡಿಮೆ ಗೊಬ್ಬರ ಕೊಟ್ಟು ರೈತರ ನಡುವೆಯೇ ಜಗಳ ಹಚ್ಚುತ್ತಿವೆ. ನಾಗರಪಂಚಮಿ ಹಬ್ಬವನ್ನೂ ಲೆಕ್ಕಿಸದೇ ರಾತ್ರಿಯಿಂದಲೇ ಸರತಿಯಲ್ಲಿದ್ದರೂ ಗೊಬ್ಬರ ಸಿಗಲಿಲ್ಲ’ ಎಂದು ಕೆಲ ರೈತರು ಬೇಸರ ವ್ಯಕ್ತಪಡಿಸಿದರು.
ಯೂರಿಯಾ ಕೊರತೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳ ಜೊತೆ ಸಭೆ ನಡೆಸಿ ’ಕೃತಕ ಅಭಾವ ಸೃಷ್ಟಿಸಿ ಹೆಚ್ಚುವರಿ ಬೆಲೆಗೆ ಮಾರಾಟ ಮಾಡಿದರೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ’ ನಿರ್ದೇಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.