ADVERTISEMENT

ಹನುಮಸಾಗರ: ಘನತ್ಯಾಜ್ಯ ಘಟಕ ಸ್ಥಾಪನೆಗೆ ರೈತರ ವಿರೋಧ, ಸ್ಥಳಾಂತರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 6:36 IST
Last Updated 6 ಜುಲೈ 2025, 6:36 IST
ಹನುಮಸಾಗರದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಬೇರೆ ಕಡೆ ನಿರ್ಮಿಸಲು ರೈತರು ಗ್ರಾಪಂಗೆ ಮನವಿ ಸಲ್ಲಿಸಿದರು.
ಹನುಮಸಾಗರದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಬೇರೆ ಕಡೆ ನಿರ್ಮಿಸಲು ರೈತರು ಗ್ರಾಪಂಗೆ ಮನವಿ ಸಲ್ಲಿಸಿದರು.   

ಹನುಮಸಾಗರ: ಕುಷ್ಟಗಿ ರಸ್ತೆಯಲ್ಲಿರುವ ಸರ್ವೆ ನಂ. 41/1ರ ಜಮೀನಿನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಪ್ರಸ್ತಾವಕ್ಕೆ ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಗ್ರಾ.ಪಂಗೆ ಮನವಿ ಸಲ್ಲಿಸಿ, ಹಾನಿಯಾಗದಂತೆ ಬೇರೊಂದು ಸೂಕ್ತ ಸ್ಥಳದಲ್ಲಿ ಘಟಕ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಜ್ಞಾನೋದಯ ಶಿಕ್ಷಣ ಸಂಸ್ಥೆಯ ವಿಷ್ಣು ರಜಪೂತ ಮಾತನಾಡಿ, ‘ಜಾಗದ ಪಕ್ಕದಲ್ಲೇ ಬಸವರಾಜ ಮಾಳಗಿಮಣಿ ಅವರ ಜಮೀನಿನ ಸಮೀಪದಲ್ಲಿ ಸರ್ಕಾರದ 16 ಗುಂಟೆ ಗಾಂವಠಾಣಾ ಜಾಗವಿದ್ದು, ಅದನ್ನೇ ಬಳಸಿ ಘಟಕ ನಿರ್ಮಾಣಕ್ಕೆ ಅನುವು ಮಾಡಬೇಕು’ ಎಂದು ತಿಳಿಸಿದರು.

ಸದ್ಯ ಈ ಪ್ರದೇಶದ ಸುತ್ತಮುತ್ತ 200 ಮೀಟರ್ ಒಳಗೆ ಪ್ರವಾಸಿ ಮಂದಿರ, ಪದವಿ ಕಾಲೇಜು, ಖಾಸಗಿ ಶಾಲೆ, ವಸತಿ ನಿರ್ಮಾಣಗಳು ಹಾಗೂ ಕೃಷಿ ಭೂಮಿ ಇವೆ. ಘಟಕ ನಿರ್ಮಾಣದಿಂದ ವಿದ್ಯಾರ್ಥಿಗಳು, ರೈತರು ಮತ್ತು ಸಾರ್ವಜನಿಕರಿಗೆ ಆರೋಗ್ಯದ ತೊಂದರೆ ಉಂಟಾಗುವ ಭೀತಿಯಿದೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಘಟನೆ ಸ್ಥಳಕ್ಕೆ ಹಾಜರಿದ್ದ ಗ್ರಾ.ಪಂ ಕಾರ್ಯದರ್ಶಿ ಅಮರೇಶ ಕರಡಿ, ಮನವಿ ಪರಿಶೀಲಿಸಿ, ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ದಾಮೋದರ ಹಯಗ್ರೀವ, ಹುಲಗಪ್ಪ, ಯಮನೂರ ಹುಲ್ಲೂರ, ಎ.ಕೆ. ಡಾಲಾಯತ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.