ADVERTISEMENT

ಕುಷ್ಟಗಿ: ಸರ್ಕಾರಿ ಪ್ರಾಥಮಿಕ ಶಾಲೆಯ ಬಯಲೇ ಶೌಚಾಲಯ, ಕೈಗೆಟಕುವ ವಿದ್ಯುತ್‌ ತಂತಿ

ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 7:01 IST
Last Updated 11 ಜುಲೈ 2025, 7:01 IST
ಹಿರೇತೆಮ್ಮಿನಾಳ ಸರ್ಕಾರಿ ಶಾಲೆ ಶೌಚಾಲಯ ಕಾಮಗಾರಿ ಮುಗಿಯದಿರುವುದು
ಹಿರೇತೆಮ್ಮಿನಾಳ ಸರ್ಕಾರಿ ಶಾಲೆ ಶೌಚಾಲಯ ಕಾಮಗಾರಿ ಮುಗಿಯದಿರುವುದು   

ಕುಷ್ಟಗಿ: ಕಿತ್ತುಹೋದ ಬಾಗಿಲುಗಳು, ಮಕ್ಕಳ ಕೈಗೆಟಕುವ ವಿದ್ಯುತ್‌ ತಂತಿ, ಬಯಲು ಶೌಚಾಲಯವೇ ಗತಿ. ಶಾಲೆ ಬಳಿ ಆವರಿಸಿದ ಮಲೀನ ನೀರು...

–ಇದು ತಾಲ್ಲೂಕಿನ ಸಂಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇತೆಮ್ಮಿನಾಳ ಸರ್ಕಾರಿ ಪ್ರಾಥಮಿಕ ಶಾಲೆಯ ಚಿತ್ರಣ. ಒಂದೆಡೆ ಮೂಲಸೌಲಭ್ಯಗಳ ಕೊರತೆ. ಮತ್ತೊಂದೆಡೆ ಜೀವಕ್ಕೆ ಅಪಾಯ ಒಡ್ಡುವಂತೆ ಜೋತುಬಿದ್ದ ವಿದ್ಯುತ್‌ ತಂತಿ. ಜೊತೆಗೆ ನೈರ್ಮಲ್ಯದ ಕೊರತೆ. ಇಂಥ ಪರಿಸರ ವಿದ್ಯಾರ್ಥಿಗಳ ಸುಗಮ ಓದಿಗೆ ಅಡ್ಡಿಯಾಗಿದೆ. ಈ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದರೂ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಸಮಸ್ಯೆ ಕುರಿತು ಈಚೆಗೆ ಮಕ್ಕಳ ಸಹಾಯವಾಣಿ ‘1098’ಗೆ ಕರೆಯೂ ಬಂದಿತ್ತು. ಅದರನ್ವಯ ಈಚೆಗೆ ಅಲ್ಲಿಗೆ ಭೇಟಿ ನೀಡಿದ ಮಕ್ಕಳ ಸಹಾಯವಾಣಿ ಸಿಬ್ಬಂದಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರನ್ನು ಸಂಪರ್ಕಿಸಲು ಹಲವು ಸಲ ಫೋನ್‌ ಕರೆ ಮಾಡಿದರೂ ಸ್ಪಂದಿಸಲಿಲ್ಲ. ಅಷ್ಟೇ ಅಲ್ಲ, ವಿಷಯ ಗಮನಕ್ಕೆ ಬಂದು ನಾಲ್ಕೈದು ದಿನಗಳಾದರೂ ಏನೂ ಸ್ಪಂದನೆ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಕಳವಳ.

ADVERTISEMENT

ಅನೇಕ ತಿಂಗಳಾದರೂ ಶೌಚಾಲಯ ಕಟ್ಟಡ ಮುಗಿದಿಲ್ಲ. ಮಕ್ಕಳು ಶೌಚಕ್ಕೆ ಬಯಲಿಗೆ ತೆರಳುತ್ತಾರೆ. ಸುತ್ತಲಿನ ಪರಿಸರ ಮಲಿನಗೊಂಡಿದೆ. ಅಡುಗೆ ಕೊಠಡಿ ಕಾಮಗಾರಿಯೂ ಅಪೂರ್ಣವಾಗಿದ್ದು, ಹಳೆಯ ಕಾಗದಪತ್ರಗಳ ಸಂಗ್ರಹ ತಾಣವಾಗಿದೆ. ಮಕ್ಕಳು ನೀರು ಕುಡಿಯಲು ನಲ್ಲಿ ಬಳಿ ಹೋದರೆ ವಿದ್ಯುತ್‌ ವೈರ್‌ಗಳು ಕೈಗೆ ಸಿಗುವಂತಿವೆ. ಅದೃಷ್ಟವಶಾತ್ ಈವರೆಗೂ ತೊಂದರೆಯಾಗಿಲ್ಲ. ಕಳಪೆ ಕಾಮಗಾರಿಯಿಂದಾಗಿ ಕೆಲ ಕೊಠಡಿಗಳ ಬಾಗಿಲುಗಳು ಕಿತ್ತುಹೋಗಿದ್ದು, ಶಾಲೆ ದುಸ್ಥಿತಿಗೀಡಾಗಿದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ತಿಳಿಸಿದರೂ ಈ ಸಂಬಂಧ ಸೂಕ್ತ ಕ್ರಮವಾಗಿಲ್ಲ ಎಂಬುದು ಸ್ಥಳೀಯರ ಆರೋಪ‍.

ಕಾಮಗಾರಿ ಅಪೂರ್ಣಗೊಂಡ ಕೊಠಡಿಯಲ್ಲಿ ಪಠ್ಯಪುಸ್ತಕಗಳನ್ನು ಬಿಸಾಡಿರುವುದು
ಮಕ್ಕಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಕರ್ತವ್ಯ. ಅಗತ್ಯ ಕ್ರಮಕೈಗೊಂಡು ವರದಿ ನೀಡುವಂತೆ ಪಿಡಿಒಗೆ ಸೂಚಿಸಿದ್ದೇನೆ
ಪಂಪಾಪತಿ ಹಿರೇಮಠ ತಾಲ್ಲೂಕು ಪಂಚಾಯಿತಿ ಇಒ

ಗ್ರಾಮಸಭೆ ನಡೆಸಿಲ್ಲ ಆಸಕ್ತಿಯೂ ಇಲ್ಲ’:

‘ಕುಷ್ಟಗಿ ತಾಲ್ಲೂಕು ಸೇರಿ ಜಿಲ್ಲೆಯ ಬಹಳಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ನಡೆಸದಿರುವುದು ಅವಕಾಶ ಇದ್ದರೂ ನರೇಗಾದಲ್ಲಿ ಮೂಲಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಆಸಕ್ತಿ ತೋರದಿರುವುದು ತಿಳಿದಿದೆ. ಈ ಬಗ್ಗೆ ಆಯೋಗದಲ್ಲಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಸೂಚಿಸುತ್ತೇವೆ’ ಎನ್ನುತ್ತಾರೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ.ಜಿ.ರಾಮತ್ನಾಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.