
ಕೊಪ್ಪಳ: ‘ಒನಕೆ ಓಬವ್ವ ಭಾರತದ ಧೀರ ಮಹಿಳೆಯಾಗಿದ್ದು, ಅವರ ಗುಣಗಳನ್ನು ನಮ್ಮ ಮಕ್ಕಳಿಗೆ ಕಲಿಸಬೇಕಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಒನಕೆ ಓಬವ್ವ ಜಯಂತಿ ಅಂಗವಾಗಿ ಒನಕೆ ಓಬವ್ವನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ‘ಓಬವ್ವ ಕರ್ನಾಟಕ ಅಷ್ಟೇ ಅಲ್ಲ, ಅವರು ಭಾರತದ ಮಾಣಿಕ್ಯವಾಗಿದ್ದಾರೆ. ಶತ್ರು ಸೈನ್ಯ ಚಿತ್ರದುರ್ಗ ಕೋಟೆಗೆ ನುಗ್ಗಿದಾಗ ಪುರುಷರಿಗಿಂತ ಹೆಚ್ಚಿನ ಶೌರ್ಯದಿಂದ ಓಬವ್ಬ ಒಬ್ಬೊಬ್ಬರನ್ನಾಗಿ ಸದೆ ಬಡಿದ ಧೈರ್ಯ ಮತ್ತು ಸಾಹಸವನ್ನು ಸ್ಮರಿಸಲೇಬೇಕಿದೆ’ ಎಂದರು.
ಸಮಾಜದ ಮುಖಂಡ ಕೃಷ್ಣ ಇಟ್ಟಂಗಿ ಮಾತನಾಡಿ, ‘ಒನಕೆ ಓಬವ್ವ ಜಯಂತಿಯನ್ನು ಹಿಂದಿನ ಸರ್ಕಾರದಲ್ಲಿ ಜಾರಿಗೆ ತರಲಾಗಿದೆ. ಈ ವರ್ಷ ಸಮಯದ ಅಭಾವದಿಂದ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮ ಅಚ್ಚುಕಟ್ಟಾಗಿ ಆಚರಿಸುವ ಜಿಲ್ಲಾಡಳಿತಕ್ಕೆ ಅಭಿನಂದನೆಗಳು ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಗದೀಶ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪುಪ್ಷಲತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಚಲವಾದಿ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮ ಹೊಸಮನಿ, ಕೊಪ್ಪಳ ನಗರಸಭೆ ಸದಸ್ಯ ರಾಜಶೇಖರ, ತಹಶೀಲ್ದಾರ್ ರಾಜು ಪಿರಂಗಿ, ರವಿಕುಮಾರ್, ಗವಿಸಿದ್ದಪ್ಪ ಬೆಲ್ಲದ, ಹನುಮಂತಪ್ಪ, ಶಾಂತಕುಮಾರ್, ಗವಿಸಿದ್ದಪ್ಪ ಚಲವಾದಿ, ಡಿ.ಕೆ.ಬೆಲ್ಲದ, ಶಿವಾನಂದ ದೊಡ್ಡಮನಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.