ADVERTISEMENT

ಕನಕಗಿರಿ: ಕಾಂಗ್ರೆಸ್‌ ಬಣಗಳ ಕಿತ್ತಾಟ ಬಯಲಿಗೆ

ಸದಸ್ಯ ಅನಿಲಕುಮಾರ‌ ಬಿಜ್ಜಳ ಮೇಲೆ ಹಲ್ಲೆಗೆ ಯತ್ನ ಆರೋಪ; ಡಿಆರ್ ವಾಹನ‌ ಮೊಕ್ಕಾಂ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 4:32 IST
Last Updated 3 ಮಾರ್ಚ್ 2026, 4:32 IST
<div class="paragraphs"><p>ಕಾಂಗ್ರೆಸ್</p></div>

ಕಾಂಗ್ರೆಸ್

   

ಕನಕಗಿರಿ: ಇಲ್ಲಿನ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಸದಸ್ಯರ ಮಧ್ಯೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಸೋಮವಾರ ಬಯಲಿಗೆ ಬಿದ್ದಿದೆ.

ಡಿ.17ರಂದು ಪಟ್ಟಣ‌ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾದ ದಿನದಿಂದಲೂ ಕಾಂಗ್ರೆಸ್‌ನ ಎರಡು ಗುಂಪುಗಳ ಮಧ್ಯೆ ಮುಸುಕಿನ‌ ಗುದ್ದಾಟ ನಡೆದಿತ್ತು. ಹಾಲಿ
ಅಧ್ಯಕ್ಷೆ ತನುಶ್ರೀ ಟಿಜೆ ರಾಮಚಂದ್ರ ಅವರ ಆಯ್ಕೆಗೆ ಒಂದು ಗುಂಪು ಬಲವಾಗಿ ವಿರೋಧ ವ್ಯಕ್ತಪಡಿಸಿತ್ತು. ಸಚಿವ ಶಿವರಾಜ ತಂಗಡಗಿ ಅವರು ಮಧ್ಯಸ್ಥಿಕೆ ವಹಿಸಿ ಎರಡು ಬಣದವರನ್ನು ಕೂಡಿಸಿಕೊಂಡು ತನುಶ್ರೀ ಅವರು ಆಯ್ಕೆ ಯಾಗುವಂತೆ ಮಾಡಿದ್ದರೂ ಎರಡು ಬಣಗಳ ಮಧ್ಯೆದ ಭಿನ್ನಾಭಿಪ್ರಾಯ ಶಮನವಾಗಿರಲಿಲ್ಲ ಎನ್ನಲಾಗಿದೆ.

ADVERTISEMENT

ಅಧ್ಯಕ್ಷರ ಅಧಿಕಾರ ಪದಗ್ರಹಣದಲ್ಲಿ ಎರಡು ಬಣಗಳ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿದ್ದರು. ಈ ಒಗ್ಗಟ್ಟು ಬಹಳ ದಿನ ಉಳಿಯಲಿಲ್ಲ. ಪಟ್ಟಣ ಪಂಚಾಯಿತಿಯ ಬಜೆಟ್ ಪೂರ್ವಭಾವಿ ಸಭೆ ಹಾಗೂ ಮೊದಲ ಸಾಮಾನ್ಯ ಸಭೆಗೆ ಒಂದು ಬಣದ ಕಾಂಗ್ರೆಸ್ ಸದಸ್ಯರು ಬಿಜೆಪಿಯವರೊಂದಿಗೆ ಸೇರಿಕೊಂಡು ಸಭೆಯಿಂದ ದೂರ ಉಳಿದಿದ್ದರು. ಇದು ಅಧ್ಯಕ್ಷರ ಬಣಕ್ಕೆ‌ ಇರಿಸುಮುರುಸು ಉಂಟುಮಾಡಿತ್ತು. ಕನಕಾಚಲಪತಿ ಜಾತ್ರಾ ಮಹೋತ್ಸವ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಸೋಮವಾರ ಸಾಮಾನ್ಯ ಸಭೆ‌ ಕರೆಯಲಾಗಿತ್ತು. ಅಧ್ಯಕ್ಷೆ ತನುಶ್ರೀ ಅವರ ಬಣದಲ್ಲಿ ಐದು ಜನ ಸದಸ್ಯರು ಮಾತ್ರ ಹಾಜರಾಗಿದ್ದು ಕೋರ್ಂ ಭರ್ತಿಗೆ ಒಬ್ಬ ಸದಸ್ಯರ ಅವಶ್ಯಕತೆ ಇತ್ತು. ಅಧ್ಯಕ್ಷೆಯ ಬಣದವರು ತಮ್ಮ ವಿರೋಧಿ ಬಣದ ಸದಸ್ಯೆಯೊಬ್ಬರನ್ನು ಮನವೊಲಿಸಿ ಸಭೆಗೆ ಹಾಜರಾಗುವಂತೆ ಮಾಡುವಲ್ಲಿ ಯಶಸ್ಸು ಕಂಡಿದ್ದರು. ಇದನ್ನು ಸಹಿಸದ ಸದಸ್ಯ ಸಂಗಪ್ಪ ಸಜ್ಜನ್ ಅವರು ಪಟ್ಟಣ ಪಂಚಾಯಿತಿ ಕಚೇರಿಗೆ ಬಂದು ಸಭೆಗೆ ಹಾಜರಾದ ತಮ್ಮ ಬಣದ ಸದಸ್ಯರ‌ ಸಂಬಂಧಿಕರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗುತ್ತಿದೆ.

ಈ ವಿಷಯದಿಂದ ಆಕ್ರೋಶಗೊಂಡ ಅಧ್ಯಕ್ಷೆ ಪತಿ ತಮ್ಮ‌ ಬೆಂಬಲಿಗರೊಂದಿಗೆ ಪಟ್ಟಣ ಪಂಚಾಯಿತಿ ಕಚೇರಿಗೆ ಬಂದು ಸಭೆಗೆ ಅಡ್ಡಗಾಲು ಹಾಕುತ್ತಿದ್ದ ಇಬ್ಬರು ಸದಸ್ಯರ ಕಾರ್ಯ ವೈಖರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಬಾಗಿಲಮಠ ಗಂಗಾಧರಸ್ವಾಮಿ, ಕೃ.ಪ್ರಾ.ಪ. ಸಹಕಾರಿ ಸಂಘದ ಅಧ್ಯಕ್ಷ‌ ಬಿ.‌ಕನಕಪ್ಪ ನೇತೃತ್ವದಲ್ಲಿ ಸಭೆ ಸೇರಿ ಅಸಮಾಧಾನ ಸರಿ ಪಡಿಸುವ ಚರ್ಚೆ‌ ನಡೆಯಿತು. ಸೋಮವಾರ ಸಂಜೆ ಕಲ್ಲಬಾಗಿಲಮಠ ಹಾಗೂ ಪಟ್ಟಣ ಸದಸ್ಯ ಅನಿಲಕುಮಾರ‌ ಬಿಜ್ಜಳ ಇತರರು ಬಿಜ್ಜಳರ ಮೆಡಿಕಲ್ ಶಾಪ್‌ನಲ್ಲಿ ಕುಳಿತುಕೊಂಡ ಸಮಯದಲ್ಲಿ ಅಂಗಡಿಗೆ ‌ನುಗ್ಗಿದ ಅಧ್ಯಕ್ಷೆ ಪತಿಯ ಬೆಂಬಲಿಗರು ಕಾಂಗ್ರೆಸ್ ಸದಸ್ಯರ ಕಾರ್ಯ ವೈಖರಿ ಕುರಿತು ವಾಗ್ವಾದ ನಡೆಸಿದ್ದಾರೆ, ಕೆಲವರು ಬಿಜ್ಜಳ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾರೆ , ಅಲ್ಲಿದ್ದ ಕೆಲವರು ತಡೆಯೊಡ್ಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಘಟನೆ ಬಗ್ಗೆ ಫೊಟೊ, ವಿಡಿಯೋ ಚಿತ್ರಿಕರಣ ಮಾಡುತ್ತಿದ್ದ ಪತ್ರಕರ್ತರ ಮೇಲೆಯೂ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ. ಇಬ್ಬರು ಪತ್ರಕರ್ತರಿಗೆ ಏಟು‌ ಬಿದ್ದಿದೆ ಮತ್ತೊಬ್ಬ ಪತ್ರಕರ್ತನ ಕ್ಯಾಮೆರಾದಲ್ಲಿ ಘಟನೆಯ ಚಿತ್ರಗಳನ್ನು ಅಳಿಸಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಪಟ್ಟಣ ಪಂಚಾಯಿತಿ ಕಚೇರಿ ಪರಿಸರದಲ್ಲಿಯೇ ಈ ಘಟನೆ ನಡೆದಿದ್ದು ನೂರಾರು ಸಂಖ್ಯೆಯಲ್ಲಿ ಜನ ಜಮಾವಣೆಗೊಂಡು ಗಲಾಟೆ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪಿಐ ವಿ.‌ನಾರಾಯಣ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಗುಂಪನ್ನು ಚದುರಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸಂಗಪ್ಪ ಸಜ್ಜನ್ ಅವರ ಮ‌ನೆ ಮುಂದೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಾಹನ ಮೊಕ್ಕಾಂ ಹೂಡಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪಿಐ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.