ADVERTISEMENT

ಕೊಪ್ಪಳ: ಬಯಲಾಟದಲ್ಲಿ ಶಂಕರಪ್ಪ, ಕಿನ್ನಾಳ ಕಲೆಯಲ್ಲಿ ಸಣ್ಣರಂಗಪ್ಪ ಸಾಧನೆ

ಕೊಪ್ಪಳ ಜಿಲ್ಲೆಯ ಇಬ್ಬರಿಗೆ ರಾಜ್ಯೋತ್ಸವ ಗರಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 15:51 IST
Last Updated 30 ಅಕ್ಟೋಬರ್ 2022, 15:51 IST
ಬಯಲಾಟ ಕಲಾವಿದ ಶಂಕರಪ್ಪ ಮಲ್ಲಪ್ಪ ಹೊರಪೇಟೆ, ಕಿನ್ನಾಳದ ಸಣ್ಣರಂಗಪ್ಪ ಚಿತ್ರಗಾರ
ಬಯಲಾಟ ಕಲಾವಿದ ಶಂಕರಪ್ಪ ಮಲ್ಲಪ್ಪ ಹೊರಪೇಟೆ, ಕಿನ್ನಾಳದ ಸಣ್ಣರಂಗಪ್ಪ ಚಿತ್ರಗಾರ   

ಕೊಪ್ಪಳ: ಬದುಕಿನುದ್ದಕ್ಕೂ ಕಲೆಯನ್ನೇ ಜೀವ ಮತ್ತು ಕಲೆಯ ಸೊಬಗನ್ನೇ ಜೀವಾಳವಾಗಿರಿಸಿಕೊಂಡ ಜಿಲ್ಲೆಯ ಇಬ್ಬರು ಕಲಾವಿದರಿಗೆ 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕೊಪ್ಪಳ ತಾಲ್ಲೂಕಿನ ಬೆಟಗೇರಿ ಸಮೀಪದ ಮೋರನಾಳ ಗ್ರಾಮದ ಬಯಲಾಟ ಕಲಾವಿದ ಶಂಕರಪ್ಪ ಹೊರಪೇಟೆ ಮತ್ತು ಕಿನ್ನಾಳ ಕಲೆಯಲ್ಲಿ ಹೆಸರು ಮಾಡಿರುವ ತಾಲ್ಲೂಕಿನ ಕಿನ್ನಾಳದ ಸಣ್ಣರಂಗಪ್ಪ ಚಿತ್ರಗಾರ ರಾಜ್ಯೋತ್ಸವ ಗೌರವಕ್ಕೆ ಭಾಜನರಾದವರು.

62 ವರ್ಷದ ಶಂಕರಪ್ಪ ಹಾರ್ಮೋನಿಯಂ ಕಲಾವಿದರೂ ಆಗಿದ್ದಾರೆ. ಬಡ ಕುಟುಂಬದಲ್ಲಿ ಮಲ್ಲಪ್ಪ– ಮರಿಯಮ್ಮ ದಂಪತಿಯ ಮಗನಾದ ಜನಿಸಿದ ಶಂಕರಪ್ಪ ಅವರು ಓದಿದ್ದು ನಾಲ್ಕನೇ ತರಗತಿ ಮಾತ್ರ. ಗ್ರಾಮೀಣ ಪ್ರದೇಶದದಲ್ಲಿದ್ದ ಕಲಾ ಪ್ರೀತಿಯಿಂದಾಗಿ ಬಾಲ್ಯದಿಂದ ಭಜನೆ ಹಾಗೂ ಬಯಲಾಟಕ್ಕೆ ಒತ್ತು ನೀಡಿದರು. ಬಯಲಾಟಗಳ ಪ್ರದರ್ಶನಗಳನ್ನು ಕಂಡು ಆನಂದಿಸಿ ರಂಗಪ್ರವೇಶ ಮಾಡಿದರು.

ADVERTISEMENT

ಸುಮಧುರ ಕಂಠ ಮಾಧುರ್ಯ ಹೊಂದಿದ್ದು ವಿವಿಧ ದೊಡ್ಡಾಟಗಳಲ್ಲಿ ಭೀಮಾ, ಆಂಜನೇಯ, ಲವಕುಶ, ಸೀತಾದೇವಿ ಹೀಗೆ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿರಾಟ ಪರ್ವ, ಲವಕುಶ ಕಾಳಗ, ಐರಾವಣ ಮೈರಾವಣ, ದೇವಿ ಮಹಾತ್ಮೆ, ರಾಮಾಂಜನೇಯ ಯುದ್ಧ, ಕುಶಲವರ ಕಾಳಗ, ದ್ರೋಣ, ಅರಾಣರ್ಜುನ ಕಾಳಗ, ಪಾಡು ವಿಜಯ ಸೇರಿದಂತೆ ಅನೇಕ ಬಯಲಾಟಗಳಲ್ಲಿ ಮಾರ್ಗದರ್ಶನ ನೀಡಿದ್ದಾರೆ. 180 ಬಯಲಾಟ ಪ್ರದರ್ಶನಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಯುವ ಕಲಾವಿದರಿಗೆ ಬಯಲಾಟಗಳ ಮಾರ್ಗದರ್ಶನ ನೀಡುತ್ತಿರುವ ಅವರು ಕಲಾಸೇವೆ ಗುರುತಿಸಿ ವಿವಿಧ ಪ್ರಶಸ್ತಿಗಳು ಬಂದಿವೆ. 2018ರಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ದೊರೆತಿದೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಶಂಕರಪ್ಪ ‘ಪ್ರಶಸ್ತಿ ಸಿಕ್ಕಿರುವುದರಿಂದ ಬಹಳ ಖುಷಿಯಾಗಿದೆ. ಇಷ್ಟು ವರ್ಷ ಕಲಾ ಸೇವೆ ಮಾಡಿದ್ದಕ್ಕೆ ಸಾರ್ಥಕ ಎನಿಸುತ್ತಿದೆ. ಪ್ರತಿಯೊಬ್ಬರೂ ಬಯಲಾಟ ಕಲೆ ಉಳಿಸಬೇಕು–ಬೆಳಸಬೇಕು ಎನ್ನುವುದು ನನ್ನ ಆಸೆ’ ಎಂದರು.

ಕಿನ್ನಾಳಕ್ಕೆ ಗೌರವ: ತಮ್ಮ 10ನೇ ವಯಸ್ಸಿನಿಂದ ಕಿನ್ನಾಳ ಕಲೆ ಪ್ರಚುರಪಡಿಸುತ್ತ ಬಂದಿರುವ 85 ವರ್ಷದ ಸಣ್ಣರಂಗಪ್ಪ ಅವರು ಶೀನಪ್ಪ ಚಿತ್ರಗಾರ–ಗೌರಮ್ಮ ದಂಪತಿಯ ಪುತ್ರ.

ಏಳು ದಶಕಗಳಿಂದ ಈ ಕೆಲಸದಲ್ಲಿ ತೊಡಗಿರುವ ಅವರು ಸೈಕಲ್‌ ಮೇಲೆ ಧಾರವಾಡ, ಶಿವಮೊಗ್ಗ, ಹಾವೇರಿ, ಗದಗ ಹಾಗೂ ಕೊಪ್ಪಳ ಜಿಲ್ಲೆಗಳನ್ನು ಸುತ್ತಾಡಿ ಗ್ರಾಮದೇವತೆಗಳು, ಛತ್ರಿ, ಚಾಮರ, ದಶಮಿದಿಂಡು, ಬಾರಕೋಲಗುಣಿ ಮತ್ತು ಮಕ್ಕಳ ಆಟಿಕೆಬೊಂಬೆಗಳನ್ನು ಮಾಡಿದ್ದಾರೆ.

‘ಪ್ರಶಸ್ತಿಯಿಂದ ಬಹಳಷ್ಟು ಸಂತೋಷವಾಗಿದೆ. ಇದು ಕಿನ್ನಾಳ ಗ್ರಾಮ ಮತ್ತು ಕಿನ್ನಾಳ ಕಲೆಗೆ ಸಿಕ್ಕ ದೊಡ್ಡ ಗೌರವವೆಂದೇ ಭಾವಿಸಿದ್ದೇನೆ. ಇಷ್ಟು ವರ್ಷಗಳ ಓಡಾಟ ಹಾಗೂ ನನ್ನ ಶ್ರಮ ಈಗ ಸಾರ್ಥಕವಾಗಿದೆ ಎನ್ನುವ ಭಾವನೆ ಬಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.