ADVERTISEMENT

ಗಂಗಾವತಿ ಕ್ಷೇತ್ರ; ಕಾದು ನೋಡುವ ತಂತ್ರ

ಇಬ್ಬರು ಹಾಲಿ ಶಾಸಕರು, ಇಬ್ಬರು ಮಾಜಿ ಸಚಿವರಿಗೆ ನಿರೀಕ್ಷೆಯಂತೆಯೇ ಕಾಂಗ್ರೆಸ್‌ ಟಿಕೆಟ್‌ ಘೋಷಣೆ

ಪ್ರಮೋದ
Published 26 ಮಾರ್ಚ್ 2023, 8:58 IST
Last Updated 26 ಮಾರ್ಚ್ 2023, 8:58 IST
ರಾಘವೇಂದ್ರ ಹಿಟ್ನಾಳ
ರಾಘವೇಂದ್ರ ಹಿಟ್ನಾಳ   

ಕೊಪ್ಪಳ: ಜಿಲ್ಲೆಯ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಿಗೆ ಕಾಂಗ್ರೆಸ್ ಶನಿವಾರ ಅಭ್ಯರ್ಥಿಗಳನ್ನು ಘೋಷಿಸಿದ್ದು, ಗಂಗಾವತಿಯ ಕುತೂಹಲ ಮುಂದುವರಿದಿದೆ.

ಹಾಲಿ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ (ಕೊಪ್ಪಳ), ಅಮರೇಗೌಡ ಬಯ್ಯಾಫುರ (ಕುಷ್ಟಗಿ), ಮಾಜಿ ಸಚಿವರಾದ ಬಸವರಾಜ ರಾಯರಡ್ಡಿ (ಯಲಬುರ್ಗಾ) ಮತ್ತು ಶಿವರಾಜ ತಂಗಡಗಿ (ಕನಕಗಿರಿ ಮೀಸಲು ಕ್ಷೇತ್ರ) ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ.

ರಾಘವೇಂದ್ರ ಹಿಟ್ನಾಳ ಅವರಿಗೆ ಇದು ಮೂರನೇ ಚುನಾವಣೆ. ಹಿಂದಿನ ಎರಡರಲ್ಲಿಯೂ ಗೆಲುವು ಪಡೆದಿರುವ ಅವರು ಈಗ ಹ್ಯಾಟ್ರಿಕ್‌ ಸಾಧನೆಗೆ ಕಾದಿದ್ದಾರೆ. ಇಲ್ಲಿಂದ ಅವರೊಬ್ಬರಷ್ಟೇ ಅರ್ಜಿ ಸಲ್ಲಿಸಿದ್ದರಿಂದ ಪೈಪೋಟಿ ಇರಲಿಲ್ಲ. ಹೀಗಾಗಿ ಟಿಕೆಟ್‌ ನಿರೀಕ್ಷಿತವೇ ಆಗಿತ್ತು.

ADVERTISEMENT

ಕನಕಗಿರಿ: ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಶಿವರಾಜ ತಂಗಡಗಿ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರ ಕನಕಗಿರಿಯಲ್ಲಿ 2008ರಲ್ಲಿ ಪಕ್ಷೇತರರಾಗಿ ಗೆಲುವು ಸಾಧಿಸಿದ್ದರು. 2013ರಲ್ಲಿ ಕಾಂಗ್ರೆಸ್‌ನಿಂದ ಗೆಲುವು ಪಡೆದು ಹಿಂದಿನ ಚುನಾವಣೆಯಲ್ಲಿ ಬಿಜೆಪಿಯ ಬಸವರಾಜ ದಢೇಸೂಗೂರು ಎದುರು ಪರಾಭವಗೊಂಡಿದ್ದರು. ಪಕ್ಷದ ಕೆಲಸಗಳಲ್ಲಿ ಸಕ್ರಿಯವಾಗಿರುವ ಅವರಿಗೆ ಪಕ್ಷ ಟಿಕೆಟ್‌ ಘೋಷಣೆ ಮಾಡಿದೆ.

ಯಲಬುರ್ಗಾ: ಪಕ್ಷದಲ್ಲಿ ಪ್ರಭಾವಿ ವರ್ಚಸ್ಸು ಹೊಂದಿರುವ ಬಸವರಾಜ ರಾಯರಡ್ಡಿ ಅವರಿಗೆ ಇದು ಎಂಟನೇ ವಿಧಾನಸಭಾ ಚುನಾವಣೆ.

1985ರಲ್ಲಿ ಜಿಎನ್‌ಪಿಯಿಂದ, 1989 ಮತ್ತು 1994ರಲ್ಲಿ ಜನತಾದಳದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ 2004ರಲ್ಲಿ ಆಯ್ಕೆಯಾಗಿ, 2008ರಲ್ಲಿ ಇದೇ ಪಕ್ಷದಿಂದ ಸೋತಿದ್ದರು. 2013ರಲ್ಲಿ ಕಾಂಗ್ರೆಸ್‌ನಿಂದ ಪುನಃ ಆಯ್ಕೆಯಾಗಿ ಹಿಂದಿನ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.

2008ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಮರಗುಂಡಪ್ಪ ಮೇಟಿ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರಾದರೂ, ಕ್ಷೇತ್ರದಲ್ಲಿ ಗಮನ ಸೆಳೆದಿಲ್ಲ.

ಕುಷ್ಟಗಿ: ಹಾಲಿ ಶಾಸಕ ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ 2008ರಲ್ಲಿ ಬಿಜೆಪಿಯ ದೊಡ್ಡನಗೌಡ ಎಚ್‌. ಪಾಟೀಲ ಎದುರು ಗೆಲುವು ಸಾಧಿಸಿ ಕುಷ್ಟಗಿ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದ್ದರು. ಇದಕ್ಕೂ ಮೊದಲು ಅವರು ಲಿಂಗಸಗೂರು ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದರು. 2013ರ ಚುನಾವಣೆಯಲ್ಲಿ ಕುಷ್ಟಗಿಯಿಂದ ಸೋತು, ಹಿಂದಿನ ಚುನಾವಣೆಯಲ್ಲಿ ಗೆಲುವು ಪಡೆದಿದ್ದಾರೆ. 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಹಸನಸಾಬ್ ದೋಟಿಹಾಳ ಈ ಬಾರಿಯೂ ಟಿಕೆಟ್‌ ಆಕಾಂಕ್ಷಿಯಾಗಿದ್ದರೂ ಪಕ್ಷ ಹಾಲಿ ಶಾಸಕರಿಗೆ ಟಿಕೆಟ್‌ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.