ಸಾಂದರ್ಭಿಕ ಚಿತ್ರ
ಕೊಪ್ಪಳ: ಬಾಲ್ಯವಿವಾಹವಾದ ಜೋಡಿಯನ್ನು ನೋಂದಣಿ ಮಾಡಿದ ಜಿಲ್ಲೆಯ ಗಂಗಾವತಿಯ ಹಿಂದಿನ ಪ್ರಭಾರ ಉಪನೋಂದಣಾಧಿಕಾರಿ ಶ್ರೀಶೈಲ ಜಂಬಗಿ ಹಾಗೂ ಸಾಕ್ಷಿದಾರರಾಗಿ ಸಹಿ ಮಾಡಿದ್ದವರ ವಿರುದ್ಧ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ರಾತ್ರಿ ಎಫ್‌ಐಆರ್ ದಾಖಲಾಗಿದೆ.
2024ರ ಸೆಪ್ಟೆಂಬರ್ 17ರಂದು ಕಾನೂನು ಪ್ರಕಾರವೇ ಮದುವೆಯಾಗಿದ್ದಾರೆ ಎಂದು ನೋಂದಣಿ ಮಾಡಲಾಗಿದೆ. ವಿವಾಹವಾದಾಗ ಬಾಲಕಿಗೆ 18 ವರ್ಷ ತುಂಬಿದ್ದರೆ, ಹುಡುಗನಿಗೆ 20 ವರ್ಷ ಆರು ತಿಂಗಳು ಏಳು ದಿನಗಳಷ್ಟೇ ಆಗಿದ್ದವು. ಈ ಕುರಿತು ಇದೇ ಸೆ. 5ರಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಈ ವರದಿಯನ್ನು ಉಲ್ಲೇಖಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ಸಹಾಯವಾಣಿಯ ಕಾರ್ಯಕ್ರಮ ಸಂಯೋಜಕ ಶರಣಪ್ಪ ಸಿಂಗನಾಳ ನೀಡಿದ ದೂರಿನ ಆಧಾರದ ಮೇಲೆ ಈಗ ಎಫ್‌ಐಆರ್ ದಾಖಲಾಗಿದೆ. ದೂರಿನಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿ ಉಲ್ಲೇಖಿಸಲಾಗಿದೆ.
ನೋಂದಣಿಗೆ ಸಾಕ್ಷಿಯಾಗಿ ಸಹಿ ಮಾಡಿದ್ದ ಗಂಗಾವತಿಯ ಬಸವರಾಜ, ದೇವರಾಜ, ಶರಣಪ್ಪ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಾಲ್ಯ ವಿವಾಹ ಎಂದು ಗೊತ್ತಿದ್ದರೂ ಪ್ರಭಾರ ಉಪನೋಂದಣಾಧಿಕಾರಿ ವಿವಾಹ ನೋಂದಣಿ ಮಾಡಿದ್ದಾರೆ. ಹುಡುಗ ದಾಖಲೆಗಾಗಿ ನಾಲ್ಕನೇ ತರಗತಿಯ ಪ್ರಗತಿ ಪತ್ರ ಸಲ್ಲಿಸಿದ್ದು, ಇದರ ದಾಖಲೆ ಪ್ರಕಾರ ಮದುವೆಗೆ ವಯಸ್ಕನಲ್ಲ ಎನ್ನುವುದು ಮೇಲ್ನೋಟಕ್ಕೆ ಖಾತ್ರಿಯಾಗಿದೆ. ಬಾಲ್ಯವಿವಾಹ ಮಾಡಿಕೊಂಡವರು, ಮಾಡಿದವರು, ಪ್ರೋತ್ಸಾಹ ನೀಡಿದವರು ಮತ್ತು ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಶರಣಪ್ಪ ಸಿಂಗನಾಳ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ, ‘ಬಾಲ್ಯ ವಿವಾಹ ತಡೆಗೆ ರಾಜ್ಯ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಉಪನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಮದುವೆ ನೋಂದಣಿ ಆಗಿರುವುದು ದುರದೃಷ್ಟಕರ. ಕಾನೂನು ಕಾಪಾಡಬೇಕಾದವರಿಂದಲೇ ಉಲ್ಲಂಘನೆಯಾಗಿದೆ. ಈ ಕುರಿತು ಆಯೋಗ ಕೂಡ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.