ADVERTISEMENT

ಕೊಪ್ಪಳ ಗವಿಮಠ ಜಾತ್ರೆ: 500 ಜನರಿಂದ 6 ಲಕ್ಷ ಮಿರ್ಚಿ ತಯಾರಿ!

ಗವಿಮಠಕ್ಕಾಗಿ ನಿರಂತರ 17 ತಾಸು ಖಾದ್ಯ ತಯಾರಿಸಿದ ಭಕ್ತರು

ಪ್ರಮೋದ ಕುಲಕರ್ಣಿ
Published 7 ಜನವರಿ 2026, 1:08 IST
Last Updated 7 ಜನವರಿ 2026, 1:08 IST
ಸಂಗ್ರಹಿಸಿದ ಮಿರ್ಚಿಗಳನ್ನು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ವೀಕ್ಷಿಸಿದರು  -ಚಿತ್ರ: ಭರತ್ ಕಂದಕೂರ
ಸಂಗ್ರಹಿಸಿದ ಮಿರ್ಚಿಗಳನ್ನು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ವೀಕ್ಷಿಸಿದರು  -ಚಿತ್ರ: ಭರತ್ ಕಂದಕೂರ   

ಕೊಪ್ಪಳ: ಗವಿಮಠದ ಜಾತ್ರೆಯ ಮಹಾರಥೋತ್ಸವ ನಡೆದ ಮರುದಿನ ಬರುವ ಭಕ್ತರಿಗಾಗಿ ಈ ವರ್ಷ 25 ಗ್ರಾಮಗಳ 500 ಜನ ಸ್ವಯಂವಕರು 17 ತಾಸು ಕೆಲಸ ಮಾಡಿ ಆರು ಲಕ್ಷ ಮಿರ್ಚಿಗಳನ್ನು ತಯಾರಿಸಿದ್ದಾರೆ. 

ಗವಿಮಠದ ದರ್ಶನಕ್ಕೆ ಬಂದ ಭಕ್ತರಿಗೆ ಊಟದ ಜೊತೆ ಮಿರ್ಚಿಗಳನ್ನು ಉಣಬಡಿಸಲಾಯಿತು. ಹನ್ನೊಂದು ವರ್ಷಗಳ ಹಿಂದೆ ಕೊಪ್ಪಳದ ಸಮಾನ ಮನಸ್ಕ ಸ್ನೇಹಿತರು ಸೇರಿಕೊಂಡು ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಮಿರ್ಚಿ ತಯಾರಿಕೆ ಕಾರ್ಯ ಈಗ ದೊಡ್ಡದಾಗಿ ಬೆಳೆದಿದೆ.

ಮೊದಲು ಒಂದರಿಂದ ಒಂದೂವರೆ ಲಕ್ಷ ಮಾತ್ರ ಮಿರ್ಚಿ ತಯಾರಿಸಲಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಹೆಚ್ಚಿಸಿದ್ದರಿಂದ ಈಗ ಜಾತ್ರೆಯಲ್ಲಿ ಮಿರ್ಚಿ ತಯಾರಿಸುವುದು ‘ಬ್ರ್ಯಾಂಡ್‌’ ಆಗಿ ಬದಲಾಗಿದೆ.

ಭಕ್ತರು ಮಿರ್ಚಿ ತಯಾರಿಕೆಗೆ ಅವಕಾಶ ಲಭಿಸುವುದು ಸೇವೆ ಎಂಬ ಭಾವದಿಂದ ಕೆಲಸ ಮಾಡುತ್ತಾರೆ. ಮಹಿಳಾ ಸ್ವಸಹಾಯ ಸಂಘದವರು, ಸಮಾನಮನಸ್ಕ ಸ್ನೇಹಿತರು, ಒಂದೇ ಊರಿನ ಜನರ ಗುಂಪು ಬಂದು ಮೆಣಸಿನಕಾಯಿ ಹೆಚ್ಚುವುದು, ಹಿಟ್ಟು ಕಲಸುವುದು, ಮಿರ್ಚಿ ಜೋಡಣೆ ಸೇರಿ ವಿವಿಧ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. 

ಈ ವರ್ಷ 25 ಕ್ವಿಂಟಲ್ ಹಸಿಕಡಲೆ ಹಿಟ್ಟು, 22 ಕ್ವಿಂಟಲ್‌ ಹಸಿಮೆಣಸಿನ ಕಾಯಿ, 25 ಕೆ.ಜಿ. ಅಜಿವಾನ, 25 ಕೆ.ಜಿ. ಸೋಡಾಪುಡಿ, 75 ಕೆ.ಜಿ. ಉಪ್ಪು, 60 ಸಿಲಿಂಡರ್, 12 ಬ್ಯಾರಲ್ ಅಡುಗೆ ಎಣ್ಣೆ ಬಳಕೆ ಮಾಡಲಾಗಿದೆ.

‘ಅನೇಕರು ಮಿರ್ಚಿ ತಯಾರಿಕೆಗೆ ಹಣ ನೀಡುತ್ತಾರೆ. ಈ ಕಾರ್ಯಕ್ಕೆ ಗವಿಮಠವೂ ನೆರವಾಗುತ್ತದೆ. ಆರು ಲಕ್ಷ ಮಿರ್ಚಿ ತಯಾರಿಸಲು ಅಂದಾಜು ₹6 ಲಕ್ಷ ಖರ್ಚಾಗುತ್ತದೆ’ ಎಂದು ಸಂಘಟಕರು ತಿಳಿಸಿದರು.

ಗವಿಮಠದ ಜಾತ್ರೆಯಲ್ಲಿ ಸಾಕಷ್ಟು ಜನ ಸೇರಿ ಮಿರ್ಚಿ ತಯಾರಿಸುವುದರಿಂದ ರುಚಿ ಹೆಚ್ಚಾಗಿರುತ್ತದೆ. ಭಕ್ತರಿಗೆ ಸೇವೆ ಮಾಡುವ ಅವಕಾಶವೂ ದೊರೆಯುತ್ತದೆ.

–ಜ್ಯೋತಿ ಮಟ್ಟಿ ಮಿರ್ಚಿ ತಯಾರಿಸಲು ಬಂದಿದ್ದ ಮಹಿಳೆ

ವರ್ಷದಿಂದ ವರ್ಷಕ್ಕೆ ಮಿರ್ಚಿ ತಯಾರಿಕೆ ಹೆಚ್ಚಾಗುತ್ತಿದೆ. ಸ್ವಯಂಸೇವಕರೂ ಕೈ ಜೋಡಿಸುತ್ತಿದ್ದಾರೆ. ಕೆಲಸ ಸರಾಗವಾಗಿ ಸಾಗುತ್ತಿದೆ.

–ರಮೇಶ ತುಪ್ಪದ ಸಮಾನ ಮನಸ್ಕ ಸ್ನೇಹಿತರ ಬಳಗದ ಸದಸ್ಯ