ಹಲಗೇರಿ (ಕೊಪ್ಪಳ): ಆಡಳಿತದ ಭಾಷೆಯೇ ಪ್ರಧಾನವಾದ ಕನ್ನಡ, ತಾಯ್ನಾಡಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಹಲಗೇರಿಯಲ್ಲಿ ಭಾನುವಾರ ನಡೆದ 10ನೇ ಕೊಪ್ಪಳ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣದಲ್ಲಿ ಪ್ರತಿಧ್ವನಿಸಿತು.
ಕನ್ನಡದ ಕೆಲಸಕ್ಕಾಗಿ ದುಡಿದ ದಿವಂಗತ ರಾಜಶೇಖರ ಅಂಗಡಿ ಹೆಸರಿನಲ್ಲಿ ನಿರ್ಮಿಸಲಾಗಿದ್ದ ಮಹಾವೇದಿಕೆಯಲ್ಲಿ ಸಮ್ಮೇಳನದ ಅಧ್ಯಕ್ಷ ಮಾಲಾ ಬಡಿಗೇರ ಅವರು ‘ಬೆಳಗಾಗಿ ನಾನೆದ್ದು ಯಾರ ಯಾರ ನೆನೆಯಲಿ’ ಎನ್ನುವ ಹಾಡಿನ ಮೂಲಕ ಭಾಷಣ ಆರಂಭಿಸಿ ‘ಬದುಕಿನ ಸ್ಮರಣೀಯ ನೆನಪುಗಳಿಗೆ ಇಂದಿನ ಕಾರ್ಯಕ್ರಮ ನೆರವಾಗುತ್ತದೆ’ ಎಂದರಲ್ಲದೇ; ಸಾಹಿತ್ಯದ ಆಸಕ್ತಿ ಮೂಡಲು, ಸಮ್ಮೇಳನಾಧ್ಯಕ್ಷ ಗೌರವ ಲಭಿಸಲು ಪತಿಯೂ ಪ್ರೇರಣೆ ಕಾರಣ ಎಂದು ಹೇಳಿದರು.
‘ಕನ್ನಡ ಭಾಷೆ ತಕ್ಕಮಟ್ಟಿಗೆ ಆಡಳಿತ ಭಾಷೆಯಾಗಿ ಅನುಷ್ಠಾನಗೊಂಡಿದ್ದು ಸಮಾಧಾನಕದ ವಿಷಯ. ನ್ಯಾಯಾಲಯ, ತಾಂತ್ರಿಕ, ವೈದ್ಯಕೀಯ ಶಿಕ್ಷಣ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಕನ್ನಡ ಬಳಕೆಗೆ ತಂದಿದ್ದೇವೆ ಎಂದು ಹೇಳುವ ಸ್ಥಿತಿಯಲ್ಲಿ ನಾವಿಲ್ಲ. ಕನ್ನಡ ಶಾಲೆಗಳ ಪರಿಸ್ಥಿತಿಯಿಂತೂ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಕನ್ನಡ ಶಾಲೆಗಳಲ್ಲಿ ಮೂಲ ಸೌಕರ್ಯಗಳು ಇಲ್ಲದಿರುವುದು, ಪೂರ್ಣ ಪ್ರಮಾಣದ ಬೋಧಕ ಸಿಬ್ಬಂದಿ ಕೊರತೆ, ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸರ್ಕಾರದಿಂದಲೇ ಪ್ರೋತ್ಸಾಹ, ಕನ್ನಡ ಅನ್ನದ ಭಾಷೆ ಅಲ್ಲವೆನ್ನುವ ಕಾರಣ ಈ ಎಲ್ಲ ಅಂಶಗಳಿಂದ ಮಾತೃಭಾಷೆಗೆ ಪೆಟ್ಟು ಬಿದ್ದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಮಾರ್ಗೋಪಾಯಗಳನ್ನು ಹುಡುಕಿ ಕನ್ನಡ ಶಾಲೆಗಳ ಪುನರುತ್ಥಾನ ಅನಿವಾರ್ಯ. ಪ್ರಾಥಮಿಕ ಹಂತದಲ್ಲಿ ಕನ್ನಡ ಕಡ್ಡಾಯ ಮಾಡಬೇಕು. ಕನ್ನಡ ಭಾಷೆ, ಅದರ ಸಂಸ್ಕೃತಿ ಮತ್ತು ಸೊಗಡು ಉಳಿಸಿಕೊಳ್ಳುವ ಮೂಲಕ ಮಾತೃಭಾಷೆ ಪ್ರೇಮವನ್ನು ಮೆರೆಯಬೇಕಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಪ್ಪಳ ತಾಲ್ಲೂಕಿನ ಇತಿಹಾಸ, ಧಾರ್ಮಿಕ ಕ್ಷೇತ್ರ, ಕೃಷಿ ವಲಯ, ಪರಿಸರ ಮಾಲಿನ್ಯ, ಸಾಹಿತ್ಯ ಸೇವೆ, ಸಾಹಿತ್ಯ ಸಂಘಟನೆಗಳು, ಬರಹಗಾರ್ತಿಯರು, ಸಾಹಿತ್ಯ ಸಂಘಟನೆಗಳು, ಪತ್ರಿಕೋದ್ಯಮ ವಲಯ, ಜನಪರ ಚಳವಳಿ, ಶಿಕ್ಷಣ, ಸಂಗೀತ, ರಂಗಭೂಮಿ, ಚಲನಚಿತ್ರ, ಕಿರುಚಿತ್ರ ರಂಗಗಳಲ್ಲಿ ಜಿಲ್ಲೆಯ ಸಾಧನೆಯನ್ನು ಪ್ರಸ್ತಾಪಿಸಿದರು.
ಕೊಪ್ಪಳ ತಾಲ್ಲೂಕಿನಲ್ಲಿರುವ ಕಾರ್ಖಾನೆಗಳಿಂದ ಪರಿಸರ ಮಾಲಿನ್ಯವಾಗಿ ಜನರ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ಮಾತನಾಡಿ ‘ಬಲ್ಡೋಟಾ ಕಾರ್ಖಾನೆ ವಿಸ್ತರಣೆ ಕೆಲಸ ಸದ್ಯಕ್ಕೆ ನಿಂತಿದೆ. ಆದರೆ ಸರ್ಕಾರ ಇದನ್ನು ರದ್ದುಪಡಿಸಿ ಆದೇಶ ಹೊರಡಿಸಬೇಕು. ಈಗಾಗಲೇ ಇರುವ ಕಾರ್ಖಾನೆಗಳಿಂದ ಜನರಿಗೆ ಆಗುತ್ತಿರುವ ತೊಂದರೆ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ,‘ಕನ್ನಡ ಉಳಿಸಿ, ಬೆಳೆಸಲು ಸಮ್ಮೇಳನಗಳು ಸಹಕಾರಿಯಾಗುತ್ತವೆ. ಕನ್ನಡದ ಕಟ್ಟಾಳು ದಿವಂಗತ ರಾಜಶೇಖರ ಅಂಗಡಿ ಅವರ ಹೆಸರಿನಲ್ಲಿ ಹಲಗೇರಿ ಗ್ರಾಮದಲ್ಲಿ ಒಂದು ವರ್ಷದ ಒಳಗೆ ರಂಗಮಂದಿರ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.
ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರಗೌಡ ಬಿ.ಗೊಂಡಬಾಳ, ತೊಗಲುಗೊಂಬೆಯಾಟ ಕಲಾವಿದೆ ಭೀಮವ್ವ ಶಿಳ್ಳೇಕ್ಯಾತರ, ಶಿಕ್ಷಣ ಪ್ರೇಮಿ ಹುಚ್ಚಮ್ಮ ಚೌದ್ರಿ, ರಾಜಶೇಖರ ಅಂಗಡಿ ಅವರ ಪತ್ನಿ ಸರ್ವಮಂಗಳಾ ಅಂಗಡಿ, ಹಲಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಲ್ಲಪ್ಪ ಓಜನಹಳ್ಳಿ, ಉಪಾಧ್ಯಕ್ಷೆ ವಿರೂಪವ್ವ ಬೇಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ಹೊಳಿಬಸಯ್ಯ ಕಾಟ್ರಳ್ಳಿ, ಪ್ರಮುಖರಾದ ಮಂಜುಳಾ ಕರಡಿ, ಶಂಭುಲಿಂಗನಗೌಡ ಪಾಟೀಲ, ಹೊಳಿಬಸಯ್ಯ ಕಾಟ್ರಳ್ಳಿ, ಬಾಲಚಂದ್ರ ಸ್ಯಾಮುಯೆಲ್, ಹನುಮಂತಪ್ಪ ಹಳ್ಳಿಕೇರಿ, ಸಂತೋಷ ದೇಶಪಾಂಡೆ, ಶಿವಕುಮಾರ ಕುಕನೂರು, ಮಂಜುನಾಥ ಅಂಗಡಿ, ನಾಗರಾಜ ಡೊಳ್ಳಿನ, ಸುರೇಶ ಸಂಗರೆಡ್ಡಿ, ತೋಟಪ್ಪ ಕಾಮನೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಕನ್ನಡದ ಕೆಲಸಕ್ಕೆ ಮನೆಯ ಬಂಗಾರವನ್ನೇ ಒತ್ತೆಯಿಟ್ಟು ಕೆಲಸ ಮಾಡಿದ ರಾಜಶೇಖರ ಅಂಗಡಿ ಕಾರ್ಯ ಸದಾ ಸ್ಮರಣೀಯ. ತಾಲ್ಲೂಕಿನಲ್ಲಿ ಬಾಕಿ ಉಳಿದ ನೀರಾವರಿ ಯೋಜನೆಯನ್ನು ಜನಪ್ರತಿನಿಧಿಗಳು ಪೂರ್ಣಗೊಳಿಸಬೇಕುಶರಣಪ್ಪ ಬಾಚಲಾಪುರ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ
ಜಾತಿ ಧರ್ಮದ ತಾರತಮ್ಯವಿಲ್ಲದೇ ಹಲಗೇರಿ ಗ್ರಾಮದ ಜನ ಸಮ್ಮೇಳನ ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ಕನ್ನಡಕ್ಕೆ ಬೆಲೆ ಕೊಟ್ಟು ಭಾಷೆ ಬೆಳೆಸೋಣಸಿ.ವಿ. ಚಂದ್ರಶೇಖರ್ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ
ಊರಿನ ಅಭಿವೃದ್ಧಿಯಲ್ಲಿ ಸಾಹಿತಿಗಳ ಕೊಡುಗೆ ಅಪಾರ. ಇರುವ ನೀರಾವರಿ ಯೋಜನೆಗಳನ್ನು ಈಗಿನ ಸರ್ಕಾರ ತ್ವರಿತವಾಗಿ ಮುಗಿಸಬೇಕು.ಡಾ.ಬಸವರಾಜ ಕ್ಯಾವಟರ್ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ
ಸಂಸತ್ ಸದಸ್ಯರಿಗೆ ಅನೇಕ ಭಾಷೆಗಳು ಗೊತ್ತಿದ್ದರೂ ಅವರು ಮಾತೃಭಾಷೆಯಲ್ಲಿಯೇ ಮಾತನಾಡುತ್ತಾರೆ. ಭಾಷೆ ಬೆಳವಣಿಗೆ ಬಗ್ಗೆ ಸಮ್ಮೇಳನದಲ್ಲಿ ಚರ್ಚೆಗಳು ನಡೆಯಲಿರಾಜಶೇಖರ ಹಿಟ್ನಾಳ ಸಂಸದ
ಸಮ್ಮೇಳನದ ನಿರ್ಣಯಗಳು
* ಪರಿಸರಕ್ಕೆ ಹಾನಿ ಉಂಟು ಮಾಡುವ ರೈತರ ಭೂಮಿ ಕಸಿದುಕೊಳ್ಳುವ ಬೃಹತ್ ಕಾರ್ಖಾನೆಗಳು ಅಣು ಸ್ಥಾವರ ಸೋಲಾರ್ ಪವನ ವಿದ್ಯುತ್ ಹೊಸ ಕಾರ್ಖಾನೆ ಸ್ಥಾಪನೆ ಬೇಡ. ಈಗಿರುವ ಕಾರ್ಖಾನೆಗಳು ಕೈಗಾರಿಕಾ ನೀತಿಯನುಸಾರ ಕಾರ್ಯನಿರ್ವಹಿಸಬೇಕು.
* ಕೊಪ್ಪಳ ತಾಲ್ಲೂಕಿನಲ್ಲಿ ಬಾಕಿಯಿರುವ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು.
* ಕನ್ನಡ ನುಡಿ ಸೇವಕ ದಿ.ರಾಜಶೇಖರ ಅಂಗಡಿ ಅವರ ಹೆಸರಿನಲ್ಲಿ ಹಲಗೇರಿ ಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ ಹಾಗೂ ಕೊಪ್ಪಳದಲ್ಲಿ ಅವರ ಹೆಸರಿನಲ್ಲಿ ವೃತ್ತ ಮಾಡಬೇಕು.
* ಕೊಪ್ಪಳ ವಿಶ್ವವಿದ್ಯಾಲಯ ಉಳಿಯಬೇಕು ವಿಶ್ವವಿದ್ಯಾಲಯವನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಬೇಕು.
* ಹಲಗೇರಿ ಗ್ರಾಮದಲ್ಲಿನ ರೈಲ್ವೆ ಕ್ರಾಸಿಂಗ್ ಸಂಖ್ಯೆ ಎಲ್‌ಸಿ 59ರಲ್ಲಿ ಸೇತುವೆ ನಿರ್ಮಾಣ ಮಾಡಬೇಕು.
‘ರಾಜಕಾರಣಿಗಳನ್ನು ಕರೆಯುವುದು ಕಡಿಮೆ ಮಾಡಿ’
‘ಸಾಹಿತ್ಯ ಸಮ್ಮೇಳನ ಕನ್ನಡ ನಾಡು ನುಡಿಗೆ ಅಭಿವೃದ್ಧಿಗಾಗಿ ಚಿಂತೆನೆಗೆ ವೇದಿಕೆಯಾಗಬೇಕು. ಇಂಥ ವೇದಿಕೆಗಳಲ್ಲಿ ರಾಜಕಾರಣಿಗಳನ್ನು ಆಹ್ವಾನಿಸುವುದನ್ನು ಕಡಿಮೆ ಮಾಡಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಹೇಳಿದರು.
ಶಿಕ್ಷಕರಾಗಿದ್ದವರೇ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಆದರೆ ಕಾರ್ಯಕ್ರಮದದಲ್ಲಿ ಶಿಕ್ಷಕರ ಪಾಲ್ಗೊಳ್ಳುವಿಕೆಯೇ ಕಡಿಮೆಯಿದೆ. ಭಾಷೆ ಬೆಳೆಯಲು ಸಮ್ಮೇಳನಗಳನ್ನು ಮನೆಯಲ್ಲಿ ಹಬ್ಬ ಮಾಡಿದಾಗ ಸಂಭ್ರಮಿಸುವಂತೆ ಸಡಗರಿಂದ ಆಚರಿಸಬೇಕು. ಶಿಕ್ಷಣಕ್ಕೆ ಒತ್ತು ಕೊಡುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಚಕ್ಕಡಿ ಮೆರವಣಿಗೆ ಗ್ರಾಮಸ್ಥರ ಶ್ರಮ
ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಆಯೋಜಿಸಿದ್ದರೂ ಇದು ಹಬ್ಬದಂತೆ ಸಂಭ್ರಮಿಸಲು ಕಾರಣವಾಗಿದ್ದು ಹಲಗೇರಿ ಗ್ರಾಮಸ್ಥರು. ಗ್ರಾಮದ ಹಮ್ಮಿಗೇಶ್ವರ ದೇವಸ್ಥಾನದಿಂದ ವೇದಿಕೆ ಸಮೀಪದ ಶಾಂಭವಿ ದೇವಸ್ಥಾನದ ತನಕ ನಡೆದ ಮೆರವಣಿಯುದ್ದಕ್ಕೂ ಗ್ರಾಮೀಣ ಸೊಗಡು ಅನಾವರಣವಾಯಿತು. ಅಲಂಕೃತ ಚಕ್ಕಡಿಗಳು ಕಲಾತಂಡಗಳು ಕನ್ನಡಮಯವಾಗಿದ್ದ ಮೆರವಣಿಗೆ ಮಾರ್ಗದ ರಸ್ತೆಗಳು ಮತ್ತು ಬಸ್‌ನಲ್ಲಿ ಕನ್ನಡದ ಕಲರವ ಇವೆಲ್ಲವೂ ಜನರ ಸಂಭ್ರಮ ಹೆಚ್ಚಿಸಿದವು. ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಸಮ್ಮೇಳನ ಆಯೋಜನೆಗೆ ಗ್ರಾಮಸ್ಥರು ಹಗಲಿರುಳು ಶ್ರಮಿಸಿದ್ದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.