ADVERTISEMENT

ಕೊಪ್ಪಳ ವಿಶ್ವವಿದ್ಯಾಲಯ: ಎರಡು ವರ್ಷಗಳಿಂದ ಆಮೆ ನಡಿಗೆ

ಕೊಪ್ಪಳ ವಿವಿ ಮುಚ್ಚುವ ತೀರ್ಮಾನದ ಬಳಿಕ ಚುರುಕಾದ ಪ್ರತಿರೋಧ, ವಿದ್ಯಾರ್ಥಿಗಳು ಮಾತೃ ವಿವಿಗೆ?

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 5:33 IST
Last Updated 15 ಫೆಬ್ರುವರಿ 2025, 5:33 IST
<div class="paragraphs"><p>ಕುಕನೂರು ತಾಲ್ಲೂಕಿನ ತಳಕಲ್‌ನಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಭವ್ಯ ಕಟ್ಟಡ</p></div>

ಕುಕನೂರು ತಾಲ್ಲೂಕಿನ ತಳಕಲ್‌ನಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಭವ್ಯ ಕಟ್ಟಡ

   

(ಪ್ರಜಾವಾಣಿ ಚಿತ್ರ/ಭರತ್ ಕಂದಕೂರ)

ಕೊಪ್ಪಳ: ಮನೆಬಾಗಿಲಿಗೆ ಉನ್ನತ ಶಿಕ್ಷಣ ಎನ್ನುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರ 2022ರ ನವೆಂಬರ್‌ನಲ್ಲಿ ಘೋಷಿಸಿದ್ದ ಕೊಪ್ಪಳ ವಿಶ್ವವಿದ್ಯಾಲಯ ಸೌಲಭ್ಯಗಳಿಲ್ಲದೇ ಸೊರಗಿ ಹೋಗಿದೆ. ಎರಡೂವರೆ ವರ್ಷಗಳ ಆಮೆನಡಿಗೆಯ ಬಳಿಕ ಈಗ ಮುಚ್ಚುವ ಹಂತಕ್ಕೆ ತಲುಪಿದ್ದು, ಈ ವಿ.ವಿ. ವ್ಯಾಪ್ತಿಯ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ‘ಮರಳಿ ಗೂಡಿಗೆ’ ಸೇರುವ ಪರಿಸ್ಥಿತಿ ಎದುರಾಗಿದೆ.

ADVERTISEMENT

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ‘ವಿಶ್ವವಿದ್ಯಾಲಯಕ್ಕೆ ಸದ್ಯಕ್ಕೆ ಜಮೀನು ಖರೀದಿಸುವಂತಿಲ್ಲ, ಕಟ್ಟಡ ನಿರ್ಮಿಸುವಂತಿಲ್ಲ’ ಎನ್ನುವ ಷರತ್ತುಗಳನ್ನು ವಿಧಿಸಿಯೇ ಕೊಪ್ಪಳ ವಿ.ವಿ. ಆರಂಭಕ್ಕೆ ಅವಕಾಶ ಕೊಟ್ಟಿತ್ತು. ನಂತರ ಬಂದ ಕಾಂಗ್ರೆಸ್‌ ಸರ್ಕಾರ ಕೂಡ ವಿ.ವಿ. ಬಲವರ್ಧನೆಗೆ ಮುಂದಾಗಲಿಲ್ಲ.

ಇದಕ್ಕೂ ಮೊದಲು ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಜಿಲ್ಲೆಯ ಪ‍ದವಿ ಕಾಲೇಜುಗಳಿದ್ದವು. ಯಲಬುರ್ಗಾದಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರವಿತ್ತು. ಜಿಲ್ಲೆಗೂ ವಿಶ್ವವಿದ್ಯಾಲಯ ಬೇಕು ಎನ್ನುವ ಬೇಡಿಕೆ ವ್ಯಾಪಕವಾಗಿದ್ದ ಆ ದಿನಗಳಲ್ಲಿ ಸರ್ಕಾರದ ಹೊಸ ವಿ.ವಿ. ಘೋಷಣೆ ಜಿಲ್ಲೆಯ ಜನರಲ್ಲಿ ಸಂಭ್ರಮ ಮೂಡಿಸಿತ್ತು. ಆ ಸಂಭ್ರಮ ಕೆಲವೇ ದಿನಗಳಲ್ಲಿ  ಮರೆಯಾಗುವ ಸ್ಥಿತಿ ನಿರ್ಮಾಣವಾಗಿದೆ.

ಅತಿಥಿಗಳೇ ಕಾಯಂ: ಕುಕನೂರು ತಾಲ್ಲೂಕಿನ ತಳಕಲ್‌ನ ಸರ್ಕಾರಿ ಎಂಜಿನಿಯರ್‌ ಕಾಲೇಜಿನ ಬೃಹತ್‌ ಕಟ್ಟಡದಲ್ಲಿ ಕೆಲವು ಕೊಠಡಿಗಳನ್ನು ಮಾತ್ರ ನೂತನ ವಿಶ್ವವಿದ್ಯಾಲಯಕ್ಕೆ ನೀಡಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿದ್ದ ಪ್ರೊ. ಬಿ.ಕೆ. ರವಿ ಅವರನ್ನು ಮೊದಲ ಕುಲಪತಿಯಾಗಿ ಸರ್ಕಾರ ನೇಮಿಸಿತ್ತು. ಬಳ್ಳಾರಿ ವಿಶ್ವವಿದ್ಯಾಲಯದ ಪ್ರೊ. ಕೆ.ವಿ. ಪ್ರಸಾದ ಪ್ರಭಾರ ಕುಲಸಚಿವರಾದರು. ಜಿ.ಪಂ ಮುಖ್ಯ ಹಣಕಾಸು ಅಧಿಕಾರಿ ಅಮೀನ್‌ ಅತ್ತಾರ ವಿಶ್ವವಿದ್ಯಾಲಯದ ಪ್ರಭಾರ ಲೆಕ್ಕಾಧಿಕಾರಿಗಳಾಗಿ ಕೆಲವು ತಿಂಗಳುಗಳ ಹಿಂದೆಯಷ್ಟೇ ನೇಮಕವಾದರು.

ಆರಂಭದ ದಿನಗಳಿಂದಲೂ ಕುಂಟುತ್ತಲೇ ಸಾಗುತ್ತಿರುವ ಕೊಪ್ಪಳ ವಿಶ್ವವಿದ್ಯಾಲಯ ಗಟ್ಟಿಯಾಗಿ ಬೇರೂರಲು ಹಾಗೂ ಈ ಭಾಗದಲ್ಲಿ ಶೈಕ್ಷಣಿಕ ಹೊಸತನ ತರಲು ಅವಕಾಶವೇ ಸಿಗಲಿಲ್ಲ. ಸರ್ಕಾರದಿಂದ ಹಣಕಾಸಿನ ನೆರವೂ ಲಭಿಸಲಿಲ್ಲ. ವಿ.ವಿ. ಕ್ಯಾಂಪಸ್‌, ಯಲಬುರ್ಗಾ ಮತ್ತು ಗಂಗಾವತಿಯಲ್ಲಿರುವ ಸ್ನಾತಕೋತ್ತರ ಕೇಂದ್ರಗಳಲ್ಲಿರುವ ಎಲ್ಲ 63 ಜನ ಬೋಧಕ ಸಿಬ್ಬಂದಿ ಮತ್ತು 13 ಜನ ಬೋಧಕೇತರ ಸಿಬ್ಬಂದಿ ‘ಅತಿಥಿ’ಗಳೇ ಆಗಿದ್ದಾರೆ.

ವಿ.ವಿ. ಕ್ಯಾಂಪಸ್‌ನಲ್ಲಿ ಎಂ.ಎ. ವಿಭಾಗದಲ್ಲಿ ಏಳು, ಎಂಕಾಂನಲ್ಲಿ ಒಂದು, ಯಲಬುರ್ಗಾ ಕೇಂದ್ರದಲ್ಲಿ ಐದು ಮತ್ತು ಗಂಗಾವತಿಯಲ್ಲಿ ಮೂರು ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ಮತ್ತಷ್ಟು ಹೊಸ ಕೋರ್ಸ್‌ಗಳ ಆರಂಭಕ್ಕೂ ಇಲ್ಲಿನ ವಿ.ವಿ. ಸಿದ್ಧತೆಯನ್ನು ಮಾಡಿಕೊಂಡಿತ್ತು. ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಮತ್ತು ಸ್ನಾತಕೋತ್ತರ ಎಲ್ಲವೂ ಸೇರಿ 14 ಸಾವಿರ ವಿದ್ಯಾರ್ಥಿಗಳಿದ್ದಾರೆ. 40 ಪದವಿ ಕಾಲೇಜುಗಳ ವಿ.ವಿ. ವ್ಯಾಪ್ತಿಯಲ್ಲಿದ್ದರೂ ವಿಶ್ವವಿದ್ಯಾಲಯಕ್ಕೆ ಸ್ಥಳೀಯವಾಗಿ ಬೇಕಾದ ಆರ್ಥಿಕ ಸಂಪನ್ಮೂಲ ದೊಡ್ಡಮಟ್ಟದಲ್ಲಿ ಲಭಿಸಲಿಲ್ಲ.

ಹೆಸರು ಕೊಪ್ಪಳ ವಿ.ವಿ.ಯಾದರೂ ಕ್ಯಾಂಪಸ್‌ ಇದ್ದಿದ್ದು ಕುಕನೂರು ತಾಲ್ಲೂಕು ವ್ಯಾಪ್ತಿಯಲ್ಲಿ. ಇದನ್ನು ಜಿಲ್ಲಾಕೇಂದ್ರಕ್ಕೆ ಸ್ಥಳಾಂತರಿಸಬೇಕು, ಜಾಗನೀಡಿ ವಿ.ವಿ. ಬಲವರ್ಧನೆ ಮಾಡಬೇಕು ಎಂದು ಹೋರಾಟಗಾರರು ಮನವಿ ಮಾಡಿದರೂ ಸರ್ಕಾರ ಮುಂದಾಗಲಿಲ್ಲ ಎನ್ನುವುದು ಶಿಕ್ಷಣ ಪ್ರೇಮಿಗಳ ದೂರು. ವಿ.ವಿ. ಈಗ ಮುಚ್ಚುವ ಹಂತಕ್ಕೆ ತಲುಪಿದ್ದು ಬಹಿರಂಗವಾಗುತ್ತಿದ್ದಂತೆಯೇ ಸಾಮಾಜಿಕ ತಾಣಗಳಲ್ಲಿ ವಿಶ್ವವಿದ್ಯಾಲಯ ಉಳಿಸಿ ಆಂದೋಲನ ಆರಂಭವಾಗಿದೆ. ಆದರೆ ಇನ್ನು ಕೆಲವರು ‘ವಿಶ್ವವಿದ್ಯಾಲಯ ಆರಂಭವಾದ ದಿನಗಳಿಂದಲೂ ಗಟ್ಟಿಗೊಳಿಸಲು ಯಾವ ಕ್ರಮವನ್ನೂ ಕೈಗೊಳ್ಳದವರು ಈಗ ಉಳಿವಿಗೆ ಹೋರಾಡುತ್ತಿದ್ದಾರೆ’ ಎನ್ನುವ ಅಸಮಾಧಾನ ಹೊರಹಾಕಿದ್ದಾರೆ.

ಡಿಸಿ ಕಚೇರಿ ಎದುರು ಇಂದು ಹೋರಾಟ

ಕೊಪ್ಪಳ ವಿಶ್ವವಿದ್ಯಾಲಯವನ್ನು ಮುಚ್ಚಲು ಸರ್ಕಾರ ಮುಂದಾಗಿದ್ದು, ಈ ನಿಲುವು ಖಂಡಿಸಿ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಶನಿವಾರ ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ. 

ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.

‘ಪ್ರಜಾವಾಣಿ’ ವರದಿ ಉಲ್ಲೇಖಿಸಿ ಪತ್ರ

ರಾಜ್ಯದ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿರುವುದರ ಕುರಿತು ಶುಕ್ರವಾರ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿ ಉಲ್ಲೇಖಿಸಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರೂ ಆದ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

‘ಬಡತನದಿಂದ ಕೆಲ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮರೆತು ಗುಳೆ ಹೋಗಿ ಜೀವನ ಸಾಗಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ಹಿಂದುಳಿದ ಮಕ್ಕಳಿಗೆ ನಂಜುಂಡಪ್ಪ ವರದಿಯಂತೆ ಸ್ಥಳೀಯವಾಗಿಯೇ ಉನ್ನತ ಶಿಕ್ಷಣ ಪಡೆಯಲು ಕೊಪ್ಪಳ ವಿ.ವಿ. ನೆರವಾಗಿದೆ. ಇದನ್ನು ಯಥಾವತ್ತಾಗಿ ಮುಂದುವರಿಸಬೇಕು’ ಎಂದು ಕೋರಿದ್ದಾರೆ.

ಯಾರು ಏನಂತಾರೆ?

ಉನ್ನತ ಶಿಕ್ಷಣ ಗ್ರಾಮೀಣ ಭಾಗಕ್ಕೂ ವಿಸ್ತರಿಸಲು ಬಿಜೆಪಿ ಸರ್ಕಾರ ವಿ.ವಿ. ಸ್ಥಾಪನೆ ಮಾಡಿತ್ತು. ವಿ.ವಿ. ಬಲವರ್ಧನೆಗೆ ಬಸವರಾಜ ರಾಯರಡ್ಡಿ, ಸಚಿವ ಶಿವರಾಜ ತಂಗಡಗಿ ನಿರ್ಲಕ್ಷ್ಯ ಮಾಡಿದ್ದಾರೆ
ನವೀನ್ ಗುಳಗಣ್ಣನವರ ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ
ಕೊಪ್ಪಳ ವಿ.ವಿ. ಮುಚ್ಚಿದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಯಾವುದೇ ಕಾರಣಕ್ಕೂ ವಿ.ವಿ. ಮುಚ್ಚಬಾರದು ಎಂದು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವೆ
ಹೇಮಲತಾ ನಾಯಕ ವಿಧಾನ ಪರಿಷತ್‌ ಸದಸ್ಯೆ
ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಗೆ ವಿಶ್ವವಿದ್ಯಾಲಯ ಮಂಜೂರಾಗಿತ್ತು. ರಾಜ್ಯ ಸರ್ಕಾರದ ಈಗಿನ ನಿರ್ಧಾರದ ಕುರಿತು ಪತ್ರಿಕಾಗೋಷ್ಠಿ ನಡೆಸಿಯೇ ನನ್ನ ನಿಲುವು ಹೇಳುತ್ತೇನೆ
ಹಾಲಪ್ಪ ಆಚಾರ್‌, ಮಾಜಿ ಸಚಿವ
ಈಗಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿ.ವಿ. ಬಂದ್‌ ಮಾಡಲು ಮುಂದಾಗಿದ್ದು ದುರದೃಷ್ಟಕರ. ಈ ನಿರ್ಧಾರ ವಾಪಸ್‌ ಪಡೆಯದಿದ್ದರೆ ಹೋರಾಟ ಅನಿವಾರ್ಯ
ಮಲ್ಲನಗೌಡ ಕೋನನಗೌಡ್ರ ಜೆಡಿಎಸ್ ಜಿಲ್ಲಾ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.