ADVERTISEMENT

ಕುಷ್ಟಗಿ | ಗಮನ ಸೆಳೆಯುತ್ತಿರುವ ಸ್ಟೇಶನ್‌ ಮಾಸ್ಟರ್‌, ರೈತ ಗಣೇಶ ಮೂರ್ತಿಗಳು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 6:58 IST
Last Updated 29 ಆಗಸ್ಟ್ 2025, 6:58 IST
ಕುಷ್ಟಗಿ ರೈಲು ನಿಲ್ದಾಣದ ಮಾದರಿ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಹಳೆ ಬಜಾರ ಸಮಿತಿ ಸ್ಟೇಶನ್ ಮಾಸ್ಟರ್ ಗಣೇಶ ಮೂರ್ತಿ
ಕುಷ್ಟಗಿ ರೈಲು ನಿಲ್ದಾಣದ ಮಾದರಿ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಹಳೆ ಬಜಾರ ಸಮಿತಿ ಸ್ಟೇಶನ್ ಮಾಸ್ಟರ್ ಗಣೇಶ ಮೂರ್ತಿ   

ಕುಷ್ಟಗಿ: ಮಳೆಯಲ್ಲೇ ಭಕ್ತರು ಶ್ರದ್ಧೆ ಭಕ್ತಿಯಿಂದ ಅದ್ದೂರಿ ಗಣೇಶೋತ್ಸವ ಆಚರಿಸಿದರು. ಈ ಬಾರಿ ಪಟ್ಟಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳೂ ಪ್ರತಿಷ್ಠಾಪಣೆಯಾಗಿವೆ. ವೈವಿಧ್ಯಮಯ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತಿವೆ.

ಪಟ್ಟಣದಲ್ಲಿ 42 ವರ್ಷಗಳ ಹಿಂದೆ ಮೊದಲಬಾರಿಗೆ ಹಳೆಬಜಾರ್‌ನಲ್ಲಿ ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಗಜನಾನನ ಸಮಿತಿ ಪ್ರತಿವರ್ಷ ಹೊಸತನ ಮೆರೆಯುತ್ತ ಬಂದಿದೆ. ಈ ಬಾರಿ ಗದಗ-ವಾಡಿ ರೈಲು ಮಾರ್ಗದ ವಿಷಯ ಆಯ್ಕೆ ಮಾಡಿದ್ದು, ಸ್ಟೇಶನ್‌ ಮಾಸ್ಟರ್‌ ಗಣೇಶನು ರೈಲಿಗೆ ಹಸಿರು ನಿಶಾನೆ ತೋರಿಸುತ್ತಿರುವುದು ಗಮನ ಸೆಳೆಯುತ್ತಿದೆ.

‘ನಿಜಾಮರ ಕಾಲದಲ್ಲಿನ ರೈಲು ಮಾರ್ಗದ ಯೋಜನೆ ಈಗ ಸಾಕಾರಗೊಂಡಿದೆ.ಹೀಗಾಗಿ ಶತಮಾನದ ಕನಸು ನನಸು ಎಂದು ಹೆಸರಿಡಲಾಗಿದೆ. ರೈಲು ನಿಲ್ದಾಣ ಪಟ್ಟಣದ ಹೆಮ್ಮೆಯ ಸಂಕೇತವಾಗಿದೆ ಎಂದು ಕಲಾವಿದ ಮಹಾಂತೇಶ ಮಂಗಳೂರು ಮತ್ತು ಎಸ್‌.ಎನ್‌. ಘೋರ್ಪಡೆ ಹೇಳಿದರು.

ADVERTISEMENT

ಎಪಿಎಂಸಿಯಲ್ಲಿನ ಗಂಜ್‌ ವರ್ತಕರ ಸಂಘದವರು, ರೈತನ ವೇಷದಲ್ಲಿರುವ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. 

‘ಇತ್ತೀಚಿಗೆ ಕೃಷಿ ಚಟುವಟಿಕೆಗಳಲ್ಲಿ ಎತ್ತುಗಳ ಬಳಕೆಯಿಲ್ಲ. ಇಲ್ಲಿಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಈ ದೃಶ್ಯಕಾವ್ಯ ಆಯ್ದುಕೊಳ್ಳಲಾಗಿದೆ’ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳೆಲೆಮಠ ಹೇಳಿದರು.

ಕಾರ್ಗಿಲ್ ಮಲ್ಲಯ್ಯ ವೃತ್ತದಲ್ಲಿ ಬೃಹತ್‌ ಗಾತ್ರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು ಗಮನಸೆಳೆಯುತ್ತಿದೆ. ಅದೇ ರೀತಿ ಬಸವೇಶ್ವರ ವೃತ್ತ, ಮಾರುತಿ ವೃತ್ತದಲ್ಲಿಯ ಗಣೇಶ ಮೂರ್ತಿಗಳು ದೊಡ್ಡದಾಗಿದ್ದವು.

ಮಳೆ ಅಡ್ಡಿ: ಬುಧವಾರ ಸಂಜೆಯಿಂದ ಮಧ್ಯರಾತ್ರಿಯವರೆಗೂ ಮಳೆ ಬಂದು ವೀಕ್ಷಣೆಗೆ ತೆರಳಲು ಜನರಿಗೆ ಅಡ್ಡಿಯಾಯಿತು. ಗುರುವಾರ ಸಂಜೆ ವಿವಿಧ ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕುಷ್ಟಗಿ ಗಂಜ್‌ ವರ್ತಕರ ಸಂಘದವರು ಪ್ರತಿಷ್ಠಾಪಿಸಿದ ರೈತನ ವೇಷದಲ್ಲಿರುವ ಗಣೇಶ ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.